ಸಂಪಿಗೆ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ವಿಳಂಬ, ಏಕಮುಖ ಸಂಚಾರದಿಂದ ನಿತ್ಯ ವಾಹನ ದಟ್ಟಣೆ, ಬೈಕ್ ಸವಾರರಿಗೆ ಮೃತ್ಯು ಕೂಪವಾದ ರಸ್ತೆ ಗುಂಡಿಗಳು
ಸಂಪತ್ ತರೀಕೆರೆ
ಬೆಂಗಳೂರು(ಅ.26): ನಗರದ ಮಲ್ಲೇಶ್ವರಂ, ಎಂ.ಎಸ್.ರಾಮಯ್ಯ ರಸ್ತೆ ಮತ್ತು ಮತ್ತಿಕೆರೆ ವಾರ್ಡ್ ರಸ್ತೆಗಳಲ್ಲಿ ನೂರಾರು ಗುಂಡಿಗಳಿದ್ದು, ವಾಹನ ಸವಾರರು ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿಯಿದೆ. ಕಳೆದ ಏಳೆಂಟು ತಿಂಗಳಿನಿಂದ ನಡೆಯುತ್ತಿದ್ದ ಸಂಪಿಗೆ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಮಲ್ಲೇಶ್ವರ 18 ಕ್ರಾಸ್‌ವರೆಗೂ ಮುಕ್ತಾಯವಾಗಿದೆ. ಆದರೆ, ಸಿ.ವಿ.ರಾಮನ್ ರಸ್ತೆಯಿಂದ(ಅರಣ್ಯ ಭವನದ ರಸ್ತೆ) ಸರ್ಕಲ್ ಮಾರಮ್ಮ ದೇವಸ್ಥಾನದ ಮೂಲಕ ಯಶವಂತಪುರದ ಮೇಲ್ಸೇತುವೆ ದೀನ ದಯಾಳ್‌ಉಪಾಧ್ಯಾಯ ಹೆಬ್ಬಾಗಿಲಿನವರೆಗಿನ (ಆಚ್‌ರ್) ರಸ್ತೆ ಕಾಮಗಾರಿ ಇನ್ನೂ ನಡೆಯುತ್ತಿರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಸಿ.ವಿ.ರಾಮನ್ ರಸ್ತೆಯ ಎಡಬದಿಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ನೆಲದಡಿ ವಿದ್ಯುತ್ ಕೇಬಲ್ ಅಳವಡಿಸಲು ಗುಂಡಿ ತೆಗೆಯಲಾಗಿದೆ. ರಸ್ತೆಯೂ ಸಹ ಬಹುತೇಕ ಗುಂಡಿಗಳಿಂದ ತುಂಬಿಕೊಂಡಿದ್ದು, ಸದ್ಯ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.
Bengaluru: ಮಹದೇವಪುರದಲ್ಲೀಗ ರಸ್ತೆ ಗುಂಡಿ ಗಂಡಾಂತರ!
ಏಕಮುಖ ಸಂಚಾರದಿಂದ ಈ ರಸ್ತೆಯಲ್ಲಿ ನಿತ್ಯವೂ ವಾಹನ ದಟ್ಟಣೆಯಿಂದ ಕೂಡಿದ್ದು ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಮಳೆ ಮತ್ತು ಅಧಿಕ ವಾಹನಗಳ ಸಂಚಾರದಿಂದ ರಸ್ತೆಯಲ್ಲಿ ಗುಂಡಿಗಳಾಗಿವೆ. ಹಾಗೆಯೇ ನ್ಯೂಬಿಇಎಲ್ ರಸ್ತೆ ಮತ್ತು ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ ಮೂಲಕವಾಗಿ ಯಶವಂತಪುರದ ಕಡೆಗೆ ಬರುವ ವಾಹನಗಳು ಸಿ.ವಿ.ರಾಮನ್ ರಸ್ತೆಯ ಗ್ರೇಡ್ ಸೆಪರೇಟರ್ ಮೂಲಕ ರಾಣಿ ಅಮ್ಮಣ್ಣಿ ಕಾಲೇಜು ಮಾರ್ಗವಾಗಿ ಸಂಚರಿಸಿ, ನವರಂಗ್ ಅಥವಾ ಕಾರ್ಡ್ ರಸ್ತೆ ಮೂಲಕ ತಿರುವು ಪಡೆದು ಯಶವಂತಪುರದ ಕಡೆಗೆ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ವಾಹನ ಸವಾರರು ಅವಲತ್ತುಕೊಂಡಿದ್ದಾರೆ.
ಈ ರಸ್ತೆಗಳಲ್ಲೂ ಹಲವಾರು ಗುಂಡಿಗಳಿದ್ದು, ವಾಹನ ಸವಾರರು ಓಡಾಡಲು ಹೈರಾಣು ಆಗಿದ್ದಾರೆ. ಕೇವಲ ಸಂಪಿಗೆ ರಸ್ತೆ ಮತ್ತು ಕೆ.ಸಿ.ಜನರಲ್ ಆಸ್ಪತ್ರೆ ಮುಂದಿನ ರಸ್ತೆಗಳನ್ನು ಹೊರತುಪಡಿಸಿ ಬಹುತೇಕ ರಸ್ತೆಗಳಲ್ಲಿ ರಸ್ತೆ ಗುಂಡಿಗಳಿದ್ದು, ಶೀಘ್ರವೇ ಮುಚ್ಚಲು ಪಾಲಿಕೆ ಕ್ರಮಕೈಗೊಳ್ಳಬೇಕಿದೆ. ಮಲ್ಲೇಶ್ವರದ 17ನೇ ಮುಖ್ಯ ರಸ್ತೆ ಗುಂಡಿಗಳಿಂದ ಬೇಸತ್ತ ಜನರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ
ಎಂ.ಎಸ್.ರಾಮಯ್ಯ ರಸ್ತೆ ಮತ್ತು ಮತ್ತಿಕೆರೆ ವಾರ್ಡ್ ರಸ್ತೆಗಳ ಪರಿಸ್ಥಿತಿಯಂತೂ ಹೇಳಲು ಅಸಾಧ್ಯ. ಮಳೆಗಾಲಕ್ಕೂ ಮುನ್ನ ಕೆಲವೆಡೆ ಡಾಂಬರೀಕರಣ ಮಾಡಿದ್ದರೂ ನಂತರ ಸುರಿದ ಮಳೆಗೆ ಹಲವು ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಮತ್ತೆ ಕೆಲವು ಕಡೆ ಅಭಿವೃದ್ಧಿ ಕಾಮಗಾರಿಗಳ ನೆಪದಲ್ಲಿ ಗೊತ್ತುಗುರಿ ಇಲ್ಲದೆ ರಸ್ತೆಗಳನ್ನು ಪದೇಪದೇ ಅಗೆಯಲಾಗಿದೆ. ಗುಂಡಿ ಮುಚ್ಚಲು ಯಾರಾದರೊಬ್ಬರು ಸಾಯಬೇಕೇ ಎಂದು ಸ್ಥಳೀಯ ನಿವಾಸಿ ಮೋಹನ ಕೃಷ್ಣ ಪೂಜಾರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಿ: ಸಿಎಂ ಬೊಮ್ಮಾಯಿ
ರಾತ್ರಿ ವೇಳೆ ಅಪಾಯ ಹೆಚ್ಚು
ಯಶವಂತಪುರದ ಕಡೆಯಿಂದ ಮೇಲ್ಸೇತುವೆ ಮೇಲೆ ಬರುವ ವಾಹನಗಳು ದೀನ ದಯಾಳ್ ಉಪಾಧ್ಯಾಯ ಹೆಬ್ಬಾಗಿಲಿನ ಪಕ್ಕದಲ್ಲೇ ಇರುವ ಎಂ.ಎಸ್.ರಾಮಯ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮೂಲಕ ಸಂಚರಿಸುತ್ತಿವೆ. ಈ ಮಾರ್ಗ ಇಕ್ಕಟ್ಟಿನಿಂದ ಕೂಡಿದ್ದು ಸಾಕಷ್ಟು ರಸ್ತೆ ಗುಂಡಿಗಳೂ ಇಲ್ಲಿವೆ. ಜೊತೆಗೆ ಎಂ.ಎಸ್.ರಾಮಯ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ರಸ್ತೆ ಕತ್ತರಿಸಿ ಗುಂಡಿ ಅಗೆದಿದ್ದು ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಅಪಾಯ ತಂದೊಡ್ಡಬಹುದಾದ ಸಾಧ್ಯತೆ ಇದೆ.
ಈ ರಸ್ತೆಯಲ್ಲಿ ಎಂ.ಎಸ್.ರಾಮಯ್ಯ ಕಾಲೇಜಿನ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಸಾಗುವ ಪ್ರಯಾಣಿಕರು ಸೇರಿದಂತೆ ಸ್ಥಳೀಯ ನಿವಾಸಿಗಳು ನಿತ್ಯವೂ ಸಂಚರಿಸುತ್ತಿರುತ್ತಾರೆ.ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಆಯತಪ್ಪಿ ಬಿದ್ದು ಅನಾಹುತ ಆಗುವುದಕ್ಕೂ ಮೊದಲು ಪಾಲಿಕೆ ಎಚ್ಚೆತ್ತುಕೊಂಡು ಸಮಸ್ಯೆ ನಿವಾರಿಸಬೇಕು ಎಂದು ಮತ್ತಿಕೆರೆಯ ಮಂಜುಳಾ ದೊಡ್ಡಮನಿ ಒತ್ತಾಯಿಸಿದ್ದಾರೆ.
