ಹಾವೇರಿ: ₹8.45 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ, ಅಗೆದ ರಸ್ತೆಗೆ ಹಿಡಿ ಮಣ್ಣೂ ಹಾಕಿಲ್ಲ!
ಪಟ್ಟಣದಲ್ಲಿ 18 ತಿಂಗಳ ಹಿಂದೆ ಒಳಚರಂಡಿ ಕಾಮಗಾರಿಗೆ ಅಗೆದಿದ್ದ ರಸ್ತೆಗಳಿಗೆ ಈ ವರೆಗೂ ಹಿಡಿ ಮಣ್ಣು ಹಾಕಿಲ್ಲ. ಅತ್ತ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವುದರಿಂದ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ರವಿ ಮೇಗಳಮನಿ
ಹಿರೇಕೆರೂರು (ಜು.9) : ಪಟ್ಟಣದಲ್ಲಿ 18 ತಿಂಗಳ ಹಿಂದೆ ಒಳಚರಂಡಿ ಕಾಮಗಾರಿಗೆ ಅಗೆದಿದ್ದ ರಸ್ತೆಗಳಿಗೆ ಈ ವರೆಗೂ ಹಿಡಿ ಮಣ್ಣು ಹಾಕಿಲ್ಲ. ಅತ್ತ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವುದರಿಂದ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 18 ತಿಂಗಳ ಹಿಂದೆಯೇ ನಗರದಲ್ಲಿ . 8.45 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಲಾಗಿದೆ. ಆಗ ಪಟ್ಟಣದ 20 ವಾರ್ಡ್‌ಗಳಲ್ಲಿ ಸುವ್ಯವಸ್ಥೆಯಲ್ಲಿದ್ದ ರಸ್ತೆಗಳನ್ನು ಅಗೆಯಲಾಗಿದೆ. ಆದರೆ, ಇನ್ನೂ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿಲ್ಲ.
ಧರೆಗೆ ಉರುಳಿದ ಹಾವೇರಿಯ ಐತಿಹಾಸಿಕ ದೊಡ್ಡ ಹುಣಸೆ ಮರ!
ಹಲವೆಡೆ ರಸ್ತೆ ದುರಸ್ತಿ:
ಕೆಲ ವಾರ್ಡ್‌ಗಳಲ್ಲಿ ಒಳಚರಂಡಿ ಕಾಮಗಾರಿಗೆ ಅಳವಡಿಸಿರುವ ಮ್ಯಾನ್‌ಹೋಲ್‌ಗಳು ರಸ್ತೆ ಮಟ್ಟಕ್ಕಿಂತ ಎತ್ತರಕ್ಕಿವೆ. ಕೆಲವೆಡೆ ಮಾತ್ರ ಅಗೆದ ರಸ್ತೆ ದುರಸ್ತಿ ಮಾಡಲಾಗಿದೆ. ಪಟ್ಟಣ ಪಂಚಾಯಿತಿ ಆದಾಗಿನಿಂದ ಈ ವರೆಗೆ ಬಸವೇಶ್ವರ ನಗರದ 11ನೇ ವಾರ್ಡ್‌ನ 2ನೇ ಅಡ್ಡ ರಸ್ತೆ ಮುಂಭಾಗ, ಅಯ್ಯಪ್ಪಸ್ವಾಮಿ ನಗರ, ಸಿಇಎಸ್ ವಿದ್ಯಾಸಂಸ್ಥೆಯ ಪಕ್ಕದ ರಸ್ತೆ ಸೇರಿದಂತೆ ಅನೇಕ ಕಾಲನಿಯ ರಸ್ತೆಗಳು ಡಾಂಬರ ಹಾಗೂ ಕಾಂಕ್ರಿಟ್ ಕಂಡೇ ಇಲ್ಲ.
ಸಂಚಾರಕ್ಕೆ ಸಂಚಕಾರ:
ಮಳೆ ಇರಲಿ-ಬೇಸಿಗೆ ಇರಲಿ, ಒಳಚರಂಡಿ ಕಾಮಗಾರಿ ಆರಂಭಿಸಿದ ರಸ್ತೆಗಳಲ್ಲಿ ಜನರು ಸಂಚರಿಸುವುದೇ ದುಸ್ತರವಾಗಿದೆ. ಸ್ವಲ್ಪ ಯಾಮಾರಿದರೂ ಜೀವಕ್ಕೆ ಸಂಚಕಾರ ಬರಲಿದೆ. ಕಾಮಗಾರಿ ವೇಳೆ ಅಗೆದ ರಸ್ತೆಗಳನ್ನು ಈ ವರೆಗೂ ಮುಚ್ಚಿಲ್ಲ. ಇದರಲ್ಲಿ ಚರಂಡಿ ಸೇರಿದಂತೆ ಮಳೆ ನೀರು ಸಂಗ್ರಹಗೊಂಡು ಗುಂಡಿಗಳು ಸೃಷ್ಟಿಯಾಗಿವೆ. ಜನರು ವಾಹನ ಚಲಾಯಿಸಿಕೊಂಡು ಹೋಗುವಾಗ ಬಿದ್ದು ಗಾಯಗೊಂಡಿದ್ದಾರೆ. ಈ ಕುರಿತು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಕೇಳಿದರೆ ಅನುದಾನದ ಕೊರತೆಯಿಂದ ರಸ್ತೆ ರಿಪೇರಿ ವಿಳಂಬವಾಗಿದೆ ಎನ್ನುತ್ತಾರೆ.
ಪಟ್ಟಣದ ಮಂಜುನಾಥ ನಗರ, ರಾಘವೇಂದ್ರ ಕಾಲನಿ, ಜನತಾ ಪ್ಲಾಟ್, ಹೌಸಿಂಗ್ ಬೋರ್ಡ್ ಕಾಲನಿ, ವಿವೇಕಾನಂದ ನಗರ ಸೇರಿದಂತೆ ಎಲ್ಲ ವಾರ್ಡ್‌ಗಳಲ್ಲಿನ ರಸ್ತೆಗಳು ಹಾಳಾಗಿವೆ. ಮ್ಯಾನ್‌ಹೋಲ್‌ಗಳು ಮಳೆಗಾಲ ಆರಂಭವಾಗುತ್ತಿದ್ದಂತೆ ಕುಸಿಯಲು ಆರಂಭಿಸಿವೆ. ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ಇನ್ನೂ . 40 ಕೋಟಿ ಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಗುತ್ತಿಗೆದಾರರು ಇರುವ ಅನುದಾನದಲ್ಲಿ ಬೇಕಾಬಿಟ್ಟಿಯಾಗಿ ಕಾಮಗಾರಿ ಮುಗಿಸಿ ಬಿಲ್ ತೆಗೆದುಕೊಂಡು ಜಾಗ ಖಾಲಿ ಮಾಡಿದ್ದಾರೆÜ ಎಂಬುದು ಸಾರ್ವಜನಿಕರ ಆರೋಪ.
ಅನುದಾನ ತರುವರೇ ಬಣಕಾರ
ನೂತನ ಶಾಸಕರಾಗಿ ಆಯ್ಕೆಯಾಗಿರುವ ಯು.ಬಿ. ಬಣಕಾರ ಅವರು ಪಟ್ಟಣ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರುತ್ತಾರೆಯೇ ಎಂಬ ನಿರೀಕ್ಷೆಯನ್ನು ಸಾರ್ವಜನಿಕರು ಇಟ್ಟುಕೊಂಡಿದ್ದಾರೆ. ಚುನಾವಣೆ ಪೂರ್ವದಲ್ಲಿ ಹೇಳಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಹೆಚ್ಚಿನ ಅನುದಾನ ಬಂದು ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆ ಉಳಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
. 5 ಕೋಟಿ ಬಿಡುಗಡೆ
ನಗರೋತ್ಥಾನ ಯೋಜನೆಯಡಿ . 5 ಕೋಟಿ ಬಿಡುಗಡೆಯಾಗಿದೆ. ಆದರೆ . 3.50 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. . 1.50 ಕೋಟಿಯನ್ನು ಶಾಸಕ ಯು.ಬಿ. ಬಣಕಾರ ಅವರ ಮಾರ್ಗಸೂಚಿಯಂತೆ ರಸ್ತೆ ಹಾಗೂ ಇತರೆ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಪಪಂ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ ತಿಳಿಸಿದ್ದಾರೆ. ಉಳಿದ ಅನುದಾನ ಬಂದ ಕೂಡಲೆ ಎಲ್ಲ ಸದಸ್ಯರೊಂದಿಗೆ ಸಭೆ ನಡೆಸಿ ರಸ್ತೆ ಸೇರಿದಂತೆ ಪಟ್ಟಣದ ಎಲ್ಲ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗುವುದು ಎಂದು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಹಾವೇರಿ: ವಿದ್ಯುತ್ ಸ್ಪರ್ಶ, ಎತ್ತು ಉಳಿಸಲು ಹೋಗಿ ರೈತ ಸಾವು!
ಪಟ್ಟಣದ ಮುಖ್ಯ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಇನ್ನು ಪಪಂ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಪಪಂ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೊಂದಿಗೆ ಈ ಹಿಂದೆ ಬೆಂಗಳೂರಿಗೆ ತೆರಳಿ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಹಂತ-ಹಂತವಾಗಿ ಅನುದಾನ ಬರುತ್ತಿದೆ. ಈ ಹಿಂದೆ ಸಚಿವರಾಗಿದ್ದ ಬಿ.ಸಿ. ಪಾಟೀಲ ಅವರು ಗುದ್ದಲಿ ಪೂಜೆ ನೆರವೇರಿಸಿದ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ.
ಪಂಪಾಪತಿ ನಾಯ್‌್ಕ ಪಪಂ ಮುಖ್ಯಾಧಿಕಾರಿ