ಸಚಿವ ಸುಧಾಕರ್ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದಿಂದ ಭಾರಿ ಅಭಿವೃದ್ಧಿ ಕಾರ್ಯ
ಸಚಿವ ಸುಧಾಕರ್ ಜಿಲ್ಲೆಯಲ್ಲಿ ಭಾರಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಅ.08): ಡಾ.ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪಿಸಿದ ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಜಿಲ್ಲೆ ಹಾಗೂ ತಾಲೂಕುಗಳಲ್ಲಿನ ರಸ್ತೆ ಜಾಲವನ್ನು ಇನ್ನಷ್ಟುಪರಿಣಾಮಕಾರಿಯಾಗಿ ವಿಸ್ತರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಜಿಲ್ಲೆಯಲ್ಲಿ ಬರೋಬ್ಬರಿ 431.70 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮತ್ತು 199.90 ಕಿ.ಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೇಗೇರಿಸಲು ಜಿಲ್ಲೆಯ ಲೋಕೋಪಯೋಗಿ ಇಲಾಖೆ ಕಳುಹಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಲೋಕೋಪಯೋಗಿ ರಸ್ತೆಗಳ ಸರಾಸರಿ 40 ಕಿ.ಮೀ/100 ವಿಸ್ತೀರ್ಣಕ್ಕಿಂತ ಕಡಿಮೆ ಇರುವ ತಾಲೂಕುಗಳಿಗೆ ಪ್ರಾತಿನಿಧ್ಯ ನೀಡಿ ರಾಷ್ಟ್ರೀಯ ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳನ್ನು ಉನ್ನತ್ತೀಕರಿಸುವ ಉದ್ದೇಶದಿಂದ ಜಿಲ್ಲೆಯ ಗ್ರಾಮೀಣ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಮೇಲ್ದರ್ಜೇಗೇರಿಸಲು ಸರ್ಕಾರ ಮುಂದಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಹಾಲಿ ಇರುವ ಒಟ್ಟು 631.60 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ದಿಗೆ ಚಾಲನೆ ಸಿಗಲಿದೆ.
ಚಿಕ್ಕಮಗಳೂರು; ಮಗುವಿನ ಪ್ರಾಣ ಕಾಪಾಡಲು ಝೀರೋ ಟ್ರಾಫಿಕ್ ಮಾದರಿ ...
23 ಗ್ರಾಮೀಣ ರಸ್ತೆ ಮೇಲ್ದರ್ಜೇಗೆ
ಜಿಲ್ಲೆಯ ಎರಡು ಜಿಲ್ಲಾ ಮುಖ್ಯ ರಸ್ತೆಗಳು ರಾಜ್ಯ ಹೆದ್ದಾರಿಗಳಾಗಿ ಪರಿವರ್ತನೆಗೊಳ್ಳುವುದರ ಜೊತೆಗೆ ಜಿಲ್ಲೆಯ ಪ್ರಮುಖ 23 ಗ್ರಾಮೀಣ ರಸ್ತೆಗಳು ಜಿಲ್ಲಾ ಮುಖ್ಯ ರಸ್ತೆಗಳಾಗಿ ಅಭಿವೃದ್ದಿ ಕಾಣಲಿವೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 28.80 ಕಿ.ಮೀ, ಶಿಡ್ಲಘಟ್ಟತಾಲೂಕಿನಲ್ಲಿ 3 ಗ್ರಾಮೀಣ ರಸ್ತೆಗಳು ಒಟ್ಟು 34 ಕಿ.ಮೀ, ಗೌರಿಬಿದನೂರು ತಾಲೂಕಿನಲ್ಲಿ ಒಟ್ಟು 4 ಗ್ರಾಮೀಣ ರಸ್ತೆಗಳು 77 ಕಿ.ಮೀ, ಬಾಗೇಪಲ್ಲಿ ತಾಲೂಕಿನ 5 ಗ್ರಾಮೀಣ ರಸ್ತೆಗಳ ಉದ್ದ ಒಟ್ಟು 124.10 ಕಿ.ಮೀ ಹಾಗೂ ಗುಡಿಬಂಡೆಯ 3 ಗ್ರಾಮೀಣ ರಸ್ತೆಗಳ ಉದ್ದ 53.20 ಕಿ.ಮೀ ಹಾಗೂ ಚಿಂತಾಮಣಿ ತಾಲೂಕಿನ 5 ಗ್ರಾಮೀಣ ರಸ್ತೆಗಳ ಒಟ್ಟು 114.60 ಕಿ.ಮೀ ಉದ್ದದ ರಸ್ತೆಗಳನ್ನು ಜಿಲ್ಲಾ ರಸ್ತೆಗಳಾಗಿ ಪರಿವರ್ತನೆಗೊಳ್ಳಲಿವೆ ಎಂದು ಜಿಲ್ಲೆಯ ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಹಾಯಕ ಮನೋಜ್ ಕುಮಾರ್ ಕನ್ನಡಪ್ರಭಗೆ ತಿಳಿಸಿದರು.
ರಸ್ತೆಗಳ ಅಭಿವೃದ್ದಿಯಿಂದ ನೆರೆಯ ಆಂಧ್ರಪ್ರದೇಶ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ನಡುವೆ ಸಂಪರ್ಕ ಕೊಂಡು ಇನ್ನಷ್ಟುಹತ್ತಿರವಾಗುವುದಲ್ಲದೇ ಜಿಲ್ಲೆಯ ಪ್ರವಾಸ ಹಾಗೂ ವಾಣಿಜ್ಯ ಕೇಂದ್ರಗಳ ಅಭಿವೃದ್ದಿಗೆ ಪೂರಕವಾಗಲಿದೆ.
ಹೆದ್ದಾರಿಯಾಗುವ ಜಿಲ್ಲಾ ರಸ್ತೆಗಳು ಇಂತಿವೆ
ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಮುಖ್ಯ ರಸ್ತೆಯಾಗಿದ್ದ ನಂದಿಗ್ರಾಮದಿಂದ ಆಂದ್ರಪ್ರದೇಶದ ಗಡಿವರೆಗೂ ವಯಾ ನಂದಿ-ವಿಜಯಪುರ (16 ಕಿ.ಮಿ), ವಿಜಯಪು-ಶಿಡ್ಲಘಟ್ಟ(16 ಕಿ.ಮೀ) ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿ (23ಕಿ.ಮೀ) ದಿಬ್ಬೂರಹಳ್ಳಿಯಿಂದ ಇ.ತಿಮ್ಮಸಂದ್ರ (11 ಕಿ.ಮೀ) ಇ.ತಿಮ್ಮಸಂದ್ರದಿಂದ ಪಾಳ್ಯಕೆರೆ ಹಾಗು ಚೇಳೂರುವರೆಗೂ (30 ಕಿ.ಮೀ) ಸೇರಿ ಒಟ್ಟು 96 ಕಿ.ಮೀ ರಸ್ತೆ ಇನ್ನೂ ಮುಂದೆ ರಾಜ್ಯ ಹೆದ್ದಾರಿ ಆಗಲಿದ್ದು ಅದೇ ರೀತಿ ಚಿಂತಾಮಣಿಯಿಂದ ಗೌರಿಬಿದನೂರು ರಸ್ತೆ ವಯಾ ಚೇಳೂರು, ಬಾಗೇಪಲ್ಲಿ, ಯಲ್ಲೋಡು ಮೂಲಕ ಮಲ್ಲೇನಹಳ್ಳಿ ಕ್ರಾಸ್‌ನಿಂದ ವಾಟದಹೊಸಹಳ್ಳಿಯವರೆಗೂ ಒಟ್ಟು 103.0 ಕಿ.ಮೀ ಜಿಲ್ಲಾ ರಸ್ತೆ ಒಟ್ಟು ಜಿಲ್ಲೆಯಲ್ಲಿ 199.90 ಕಿ.ಮೀ ಉದ್ದದ ಜಿಲ್ಲಾ ರಸ್ತೆ ರಾಜ್ಯ ಹೆದ್ದಾರಿಯಾಗಿ ಪರಿವರ್ತನೆ ಹೊಂದಲಿವೆ.