ಶಿವಮೊಗ್ಗ(ಆ.07): ಸೊರಬ ತಾಲೂಕಿನಾದ್ಯಂತ ಕುಂಭದ್ರೋಣ ಮಳೆ ಎಡಬಿಡದೆ ಸುರಿಯುತ್ತಿದ್ದು, ತಾಲೂಕಿನ ಕೆರೆಕಟ್ಟೆ, ಹೊಳೆ, ಹಳ್ಳಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಅಪಾಯದ ಮಟ್ಟಮೀರಿ ಭೋರ್ಗರೆಯುತ್ತಿವೆ.

ದಂಡಾವತಿಯ ತಾಂಡವ ನೃತ್ಯಕ್ಕೆ ಒಂದೆಡೆ ಪಟ್ಟಣದ ನದಿ ದಂಡೆಯ ಅವಭೃತ ಮಂಟಪ, ಹೊಳೆ ಈಶ್ವರ ದೇಗುಲ ಮುಳುಗಿದ್ದರೆ, ಮಡ್ಡಿಕುಂಬ್ರಿ, ಹಾಯ, ಶಿಡ್ಡಿಹಳ್ಳಿ, ಜಂಗಿನಕೊಪ್ಪ ಗ್ರಾಮಗಳ ನದಿ ದಂಡೆಯ ಬಹುತೇಕ ಜಮೀನು ಪ್ರದೇಶ ಜಲಾವೃತವಾಗಿವೆ.

ಜಮೀನುಗಳು ಜಲಾವೃತ:

ಇತ್ತ ವರದಾ ಕೂಡ ಅರ್ಭಟಿಸುತ್ತಿದ್ದು, ಬಾಢದಬೈಲು, ಕಡಸೂರು, ಹೊಳೆ ಜೋಳದಗುಡ್ಡೆ, ಚಿಕ್ಕಮಾಕೊಪ್ಪ, ಹೊಳೆ ಮರೂರು, ಪುರದೂರು, ಗುಂಜನೂರು, ಜಡೆ, ಬಂಕಸಾಣ, ಕೆರೆಹಳ್ಳಿ, ಸಾಬಾರಾ ಭಾಗದ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿವೆ.

ಸಂಚಾರಕ್ಕೆ ತೊಡಕು:

ಮಳೆಗಾಳಿಯ ಅರ್ಭಟಕ್ಕೆ ಕತವಾಯಿ, ಕಾನುಗೋಡು ಬಳಿ ಮರವುರಳಿದ್ದು, ತೆರವುಗೊಳಿಸುವ ಕಾರ್ಯದಲ್ಲಿ ಸ್ಥಳೀಯರು, ಇಲಾಖೆ ಕೈಜೋಡಿಸಿ ಕೂಡಲೇ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಕುಪ್ಪೆ ಕಾನುಗೋಡು ಬಳಿ ದಂಡಾವತಿ ನದಿ ಸೇತುವೆಯ ಮೇಲೂ ಹರಿದಿದ್ದು, ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಜಡೆ ಮತ್ತು ಬನವಾಸಿ ಮಾರ್ಗದ ಕನಕಾಪುರ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಬನವಾಸಿ ರಸ್ತೆ ಸಂಪರ್ಕ ಕಡಿತಗೊಂಡಿದೆ.