ಮೈಷುಗರ್‌ ಕಾರ್ಖಾನೆ ಉಳಿಸಿಕೊಂಡು ಸಮರ್ಥವಾಗಿ ಮುನ್ನಡೆಸುವ ಇಚ್ಛಾಶಕ್ತಿ ಆಳುವ ಸರ್ಕಾರಗಳಿಗೂ ಇಲ್ಲ, ಜನಪ್ರತಿನಿಧಿಗಳಿಗೂ ಇಲ್ಲ.ಪರಿಣಾಮ ಕಾರ್ಖಾನೆ ಪುನಶ್ಚೇತನ ಕನಸಾಗಿಯೇ ಉಳಿದಿದೆ ಎಂದು ಮೈಷುಗರ್‌ ಕಾರ್ಖಾನೆ ಮಾಜಿ ಅಧ್ಯಕ್ಷರುಗಳ ವೇದಿಕೆ ಸಂಚಾಲಕ ಸಿದ್ದರಾಮೇಗೌಡ ಆರೋಪಿಸಿದರು.

, ಮಂಡ್ಯ: ಮೈಷುಗರ್‌ ಕಾರ್ಖಾನೆ ಉಳಿಸಿಕೊಂಡು ಸಮರ್ಥವಾಗಿ ಮುನ್ನಡೆಸುವ ಇಚ್ಛಾಶಕ್ತಿ ಆಳುವ ಸರ್ಕಾರಗಳಿಗೂ ಇಲ್ಲ, ಜನಪ್ರತಿನಿಧಿಗಳಿಗೂ ಇಲ್ಲ.ಪರಿಣಾಮ ಕಾರ್ಖಾನೆ ಪುನಶ್ಚೇತನ ಕನಸಾಗಿಯೇ ಉಳಿದಿದೆ ಎಂದು ಮೈಷುಗರ್‌ ಕಾರ್ಖಾನೆ ಮಾಜಿ ಅಧ್ಯಕ್ಷರುಗಳ ವೇದಿಕೆ ಸಂಚಾಲಕ ಸಿದ್ದರಾಮೇಗೌಡ ಆರೋಪಿಸಿದರು.

ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಮರು ಜೀವ ನೀಡುವುದಾಗಿ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದಂತೆ 50 ಕೋಟಿ ರು. ಹಣ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಲಿಲ್ಲ. ಕಾರ್ಖಾನೆ ಯಂತ್ರೋಪಕರಣ ದುರಸ್ತಿ ಕಾರ್ಯ ಗುಣಮಟ್ಟದಿಂದ ಕೂಡಿರಲೂ ಇಲ್ಲ. ಕಬ್ಬು ನುರಿಸುವಿಕೆ ವಿಳಂಬದಿಂದ ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಗುಣಮಟ್ಟದ ಸಕ್ಕರೆ ಉತ್ಪಾದನೆಯಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಾರ್ಖಾನೆಗೆ ಗತ ವೈಭವ ಮರಳಿ ತಂದು ಕೊಡುವ ಬದ್ಧತೆ ಸರ್ಕಾರಕ್ಕೆ ಇದ್ದಿದ್ದರೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾಯಕಲ್ಪ ನೀಡುವ ಅವಕಾಶಗಳಿದ್ದವು. ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಿಲ್ಲ. ಬಾಯಿ ಮಾತಿನಲ್ಲಷ್ಟೇ ಕಾಯಕಲ್ಪದ ಹುಸಿ ನುಡಿಗಳನ್ನಾಡಿ ರೈತರ ಕಣ್ಣೊರೆಸುವ ನಾಟಕವಾಡಿದರೇ ವಿನಃ ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸುವ ದಿಸೆಯಲ್ಲಿ ಸಣ್ಣದೊಂದು ಪ್ರಯತ್ನವನ್ನೂ ಬಿಜೆಪಿ ಸರ್ಕಾರ ನಡೆಸಲಿಲ್ಲವೆಂದು ಆಪಾದಿಸಿದರು.

ಕಾರ್ಖಾನೆ ಆರಂಭಿಸಿ ಐದು ತಿಂಗಳು ಕಾರ್ಯಾಚರಣೆ ನಡೆಸಿದರೂ ಕೇವಲ 1ಲಕ್ಷ ಟನ್‌ ಕಬ್ಬು ಅರೆಯುವುದಕ್ಕಷ್ಟೇ ಶಕ್ತವಾಯಿತು. ಕನಿಷ್ಠ 4 ಲಕ್ಷ ಟನ್‌ ಅರೆಯುವ ಗುರಿ ಹೊಂದಿದ್ದರೂ ಹಲವಾರು ಸಮಸ್ಯೆಗಳ ನಡುವೆ ನಿಂತು ನಂತರ ಓಡÜಲಾರಂಭಿಸಿತು. ರೈತರ ಕಬ್ಬು ಕಟಾವಿಗೆ ಆಳುಗಳನ್ನು ಕರೆತರುವ ಕೆಲಸ ನಡೆಯಲಿಲ್ಲ. ತರಾತುರಿಯಲ್ಲಿ ಕಾರ್ಖಾನೆ ಆರಂಭಿಸುವ ಕೆಲಸಕ್ಕೆ ಸರ್ಕಾರ, ಆಡಳಿತ ಮಂಡಳಿ ಮುಂದಾಯಿತು. ಪೂರ್ವಸಿದ್ಧತೆ ಕೊರತೆಯಿಂದ ಆರಂಭವಾದ ಕಾರ್ಖಾನೆ ಸಮರ್ಥವಾಗಿ ನಡೆಯಲು ಸರ್ಕಾರ, ಜನಪ್ರತಿನಿಧಿ ಮುತುವರ್ಜಿ ವಹಿಸಲಿಲ್ಲ. ಇದರಿಂದ ರೈತರು ನಷ್ಟಅನುಭವಿಸುವಂತಾಯಿತು. ಕಾರ್ಖಾನೆಯೂ ನಷ್ಟದಲ್ಲಿ ಉಳಿಯಿತು ಎಂದು ವಿಷಾದಿಸಿದರು.

ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿ ಚಾಲನೆ ಕೊಟ್ಟು ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಕಾರ್ಖಾನೆಗೆ ಚಾಲನೆ ಕೊಟ್ಟಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಐದು ತಿಂಗಳಲ್ಲಿ ಒಮ್ಮೆಯೂ ಕಾರ್ಖಾನೆ ಬಳಿ ಸುಳಿಯಲಿಲ್ಲ. ಕಾರ್ಖಾನೆ ಹೇಗೆ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವುದನ್ನು ಪರಿಶೀಲನೆ ನಡೆಸಲಿಲ್ಲ. ಕಾರ್ಖಾನೆ ಸಮಸ್ಯೆ ಎದುರಿಸುತ್ತಿರುವಾಗ ಪರಿಹಾರಕ್ಕೆ ಕ್ರಮವಹಿಸಲಿಲ್ಲ. ಕಬ್ಬು ಅರೆಯುವಿಕೆ ಮಂದಗತಿಯಲ್ಲಿ ನಡೆಯುತ್ತಿದ್ದರೂ ಆಡಳಿತ ಮಂಡಳಿ ಪ್ರಶ್ನಿಸಲಿಲ್ಲ. ಪೂರ್ಣ ಪ್ರಮಾಣದ ಹಣ ಬಿಡುಗಡೆಗೊಳಿಸುವ ಜೊತೆಗೆ ಹೆಚ್ಚುವರಿಯಾಗಿ ಹಣ ತಂದು ಕಾರ್ಖಾನೆಗೆ ಹೊಸ ಕಾಯಕಲ್ಪ ನೀಡುವ ಗೋಜಿಗೆ ಹೋಗದಿರುವುದರಿಂದ ಕಾರ್ಖಾನೆ ಯಥಾಸ್ಥಿತಿಯಲ್ಲೇ ಉಳಿಯುವಂತಾಯಿತು ಎಂದರು.

2023-24ನೇ ಸಾಲಿಗಾದರೂ ಈ ಎಲ್ಲಾ ಅಂಶ ಮನಗಂಡಿರುವ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸರ್ಕಾರದ ಗಮನಸೆಳೆದು ಜೂನ್‌ ತಿಂಗಳಿನಲ್ಲಿಯೇ ಕಾರ್ಖಾನೆ ಪ್ರಾರಂಭಿಸಬೇಕು. ಕಾರ್ಖಾನೆಗೆ ನೀರಿನ ತೊಂದರೆಯಿದ್ದು, ಕೋಣನಹಳ್ಳಿ ಕೆರೆಯಿಂದ ನೀರಾವರಿ ಇಲಾಖೆ ನೀರು ಕೊಡಲು ಒಪ್ಪಿರುವುದರಿಂದ ಕಾರ್ಖಾನೆಗೆ ನೀರಿನ ವ್ಯವಸ್ಥೆ ಮಾಡಿಕೊಂಡು ಸಮರ್ಪಕ ಕಬ್ಬು ಅರೆಯುವಿಕೆಗೆ ಕಾರ್ಖಾನೆ ಸನ್ನದ್ಧಗೊಳಿಸುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಎಂ.ಎಸ್‌.ಆತ್ಮಾನಂದ, ಹಾಲ ಹಳ್ಳಿ ರಾಮ ಲಿಂಗಯ್ಯ, ಬಿ.ಸಿ.ಶಿವಾನಂದ ಇದ್ದರು.

ಕನಸಾಗಿ ಉಳಿದ ಮೈ ಷುಗರ್‌ ಪುನಶ್ಚೇತನ: ಸಿದ್ದ ರಾಮೇಗೌಡ

 ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ರೋಗಗ್ರಸ್ಥ

ಗುಣಮಟ್ಟದ ದುರಸ್ತಿ ಇಲ್ಲ, ವಿಳಂಬದಿಂದ ರೈತರಿಗೆ ನಷ್ಟ

ಸರ್ಕಾರದ ಗಮನ ಸೆಳೆದು ಜೂನ್‌ ತಿಂಗಳಿನಲ್ಲಿಯೇ ಕಾರ್ಖಾನೆ ಪ್ರಾರಂಭಿಸಬೇಕು

ಕಾರ್ಖಾನೆಗೆ ನೀರಿನ ವ್ಯವಸ್ಥೆ ಮಾಡಿಕೊಂಡು ಸಮರ್ಪಕ ಕಬ್ಬು ಅರೆಯುವಿಕೆಗೆ ಕಾರ್ಖಾನೆ ಸನ್ನದ್ಧ ಗೊಳಿಸುವಂತೆ ಒತ್ತಾಯ