ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಕೆಲಸಗಳಿಂದ ನಿವೃತ್ತಿಗೆ ಆರು ತಿಂಗಳು ಸೇವಾವಧಿ ಹೊಂದಿರುವ ಡಿವೈಎಸ್ಪಿ/ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಪೊಲೀಸರಿಗೆ ವಿನಾಯಿತಿ ನೀಡಲು ರಾಜ್ಯ ಪೊಲೀಸ್‌ ಇಲಾಖೆ ನಿರ್ಧರಿಸಿದೆ.

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಜ.30) : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಕೆಲಸಗಳಿಂದ ನಿವೃತ್ತಿಗೆ ಆರು ತಿಂಗಳು ಸೇವಾವಧಿ ಹೊಂದಿರುವ ಡಿವೈಎಸ್ಪಿ/ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಪೊಲೀಸರಿಗೆ ವಿನಾಯಿತಿ ನೀಡಲು ರಾಜ್ಯ ಪೊಲೀಸ್‌ ಇಲಾಖೆ ನಿರ್ಧರಿಸಿದೆ.

ಚುನಾವಣೆ ಕೆಲಸಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳಲು ವಯಸ್ಸಿನ ಕಾರಣಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ನಿವೃತ್ತಿ ಹೊಂದುವ ಕಾರಣ ಅವರು ಕೆಲವು ಬಾರಿ ಪಕ್ಷಪಾತ ಧೋರಣೆ ತಾಳಬಹುದು. ಹೀಗಾಗಿ ವಯಸ್ಸಿನ ಹಿರಿತನ ಹೊಂದಿದ ಪೊಲೀಸರಿಗೆ ಚುನಾವಣಾ ಕೆಲಸದಿಂದ ಮುಕ್ತಿ ಕೊಡಲು ಇಲಾಖೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.\

ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವ ಅಧಿಕಾರ ಡೀಸಿಗೆ ಮಾತ್ರ: ಹೈಕೋರ್ಟ್

ವಿಧಾನಸಭಾ ಚುನಾವಣೆಗೆ ತಾಲೀಮು ಶುರು ಮಾಡಿರುವ ಪೊಲೀಸ್‌ ಇಲಾಖೆ, ಈಗಾಗಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ಜಿಲ್ಲೆಗಳ ಪರಿಸ್ಥಿತಿ ಕುರಿತು ವರದಿ ಪಡೆದುಕೊಂಡಿದೆ. ಅಲ್ಲದೆ ನಿವೃತ್ತಿ ಅಂಚಿನಲ್ಲಿರುವ ಪೊಲೀಸರ ಕುರಿತು ಸಹ ಆಯಾ ಪೊಲೀಸ್‌ ಆಯುಕ್ತ ಹಾಗೂ ಜಿಲ್ಲಾ ಎಸ್ಪಿಗಳಿಂದ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಮಾಹಿತಿ ಪಡೆದಿದ್ದಾರೆ. ಈ ವರದಿ ಆಧರಿಸಿ ಡಿವೈಎಸ್ಪಿ/ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳು, ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಸಹಾಯಕ ಇನ್ಸ್‌ಪೆಕ್ಟರ್‌ಗಳಿಗೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ಡಿಜಿಪಿ ಮುಂದಾಗಿದ್ದಾರೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಆದೇಶ ಹೊರ ಬೀಳುವ ಸಾಧ್ಯತೆಗಳಿವೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಚುನಾವಣೆಯಲ್ಲಿ ಮತಗಟ್ಟೆಸ್ಥಾಪನೆಯಿಂದ ಹಿಡಿದು ಫಲಿತಾಂಶ ಪ್ರಕಟವರೆಗೆ ಪೊಲೀಸರ ಕೆಲಸವು ಬಹುಮುಖ್ಯವಾಗುತ್ತದೆ. ಅದರಲ್ಲೂ ಹಣ, ಮದ್ಯ ಹಾಗೂ ಉಡುಗೊರೆ ಹಂಚಿಕೆ ಹೀಗೆ ಚುನಾವಣಾ ಅಕ್ರಮಗಳ ತಡೆಗೆ ಪೊಲೀಸರ ಮೇಲೆ ಹೆಚ್ಚಿನ ಹೊಣೆ ಇರುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡು ಶಾಂತಿಯುತವಾಗಿ ಚುನಾವಣೆ ನಡೆಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿರುತ್ತದೆ. ಈ ಹಿಂದೆ ಕೂಡಾ ಚುನಾವಣೆ ಕೆಲಸಗಳಿಗೆ ವಯಸ್ಸಾದ ಪೊಲೀಸರನ್ನು ನಿಯೋಜಿಸುತ್ತಿರಲಿಲ್ಲ. ಆದರೆ ಕಾಲ ಕ್ರಮೇಣ ಆ ನಿಯಮ ಬದಲಾಯಿಸಿದ ಅಧಿಕಾರಿಗಳು, ಎಲ್ಲರನ್ನೂ ಚುನಾವಣಾ ಕರ್ತವ್ಯಕ್ಕೆ ನೇಮಕಗೊಳಿಸುತ್ತಿದ್ದರು. ಈಗ ಮತ್ತೆ ಹಳೆ ನಿಯಮ ಜಾರಿಗೆ ತರಲು ಡಿಜಿಪಿ ತೀರ್ಮಾನಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

103 ಇನ್ಸ್‌ಪೆಕ್ಟರ್‌ 23 ಡಿವೈಎಸ್‌ಪಿ ವರ್ಗಾವಣೆ ಮಾಡಿದ ಸರ್ಕಾರ!

ವಯಸ್ಸಿನ ಆಧಾರದ ಮೇರೆಗೆ ಚುನಾವಣಾ ಕೆಲಸಗಳಿಗೆ ಪೊಲೀಸರ ನಿಯೋಜನೆಗೆ ಡಿಜಿಪಿ ಸಮ್ಮತಿಸಿದರೆ, ಕೆಲವು ಪೊಲೀಸರ ಸ್ಥಾನಪಲ್ಲಟವಾಗಲಿದೆ. ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ಗಳನ್ನು ಎಡಿಜಿಪಿ (ಆಡಳಿತ) ವರ್ಗಾವಣೆ ಮಾಡಲಿದ್ದು, ಪಿಎಸ್‌ಐಗಳನ್ನು ಆಯಾ ವಲಯ ಐಜಿಪಿ ಮತ್ತು ಡಿಐಜಿಗಳು ವರ್ಗಾವಣೆ ಮಾಡಲಿದ್ದಾರೆ. ಪಿಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ಗಳ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ವರ್ಗಾವಣೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.