ಬೆಂಗಳೂರು: ರಸ್ತೆ ಬದಿ, ಖಾಲಿ ನಿವೇಶನ, ರಾಜಕಾಲುವೆ, ಕೆರೆ ಅಂಗಳ, ಮೈದಾನ, ಚರಂಡಿಗಳಲ್ಲಿ ಕಸ ಎಸೆಯುವವರಿಗೆ ಕಡಿವಾಣ ಹಾಕಲು ಬಿಬಿಎಂಪಿ 194 ವಾರ್ಡ್‌ಗಳಿಗೆ 240 ಮಾರ್ಷಲ್‌ಗಳ ನೇಮಕಕ್ಕೆ ಕಳುಹಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ.

ಎಲ್ಲೆಂದರಲ್ಲಿ ಕಸ ಎಸೆಯುವ ಮತ್ತು ಹಸಿ, ಒಣ ಹಾಗೂ ಸ್ಯಾನಿಟರಿ ಕಸ ವಿಂಗಡಣೆಗೆ ಮಾಡದ ನಾಗರಿಕರಿಗೆ ದಂಡ ವಿಧಿಸಲು ಮಾರ್ಷಲ್ ಗಳ ನೇಮಕಕ್ಕೆ ಪಾಲಿಕೆ ಸಭೆಯಿಂದ ಅನುಮತಿ ಪಡೆದು ಕಳೆದ ನವೆಂಬರ್ ನಲ್ಲಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದ ಪ್ರಸ್ತಾವನೆಗೆ ಅನುಮತಿ ಸಿಕ್ಕಿದ್ದು, ಶೀಘ್ರದಲ್ಲಿ ಕಸ ಸಮಸ್ಯೆ ನಿವಾರಣೆ ಮಾಡಲು ನಿವೃತ್ತ ಸೈನಿಕರು ಕಾರ್ಯಾಚರಣೆಗಿಳಿಯಲ್ಲಿದ್ದಾರೆ. ಅಲ್ಲದೇ ‘ಕ್ಲೀನ್ ಅಪ್ ಮಾರ್ಷಲ್’ಗಳನ್ನು ನೇರವಾಗಿ ಸೈನಿಕ್ ಕಲ್ಯಾಣ ಇಲಾಖೆಯಿಂದ ನೇಮಿಸಿಕೊಳ್ಳಲು ಸಲ್ಲಿಸಿದ್ದ ಪ್ರಸ್ತಾವನೆಗೂ ಸರ್ಕಾರ ಅನುಮತಿ ನೀಡಿದೆ.

ಇದರಿಂದ ಟೆಂಡರ್ ಕರೆಯದೆ ಸೈನಿಕ ಕಲ್ಯಾಣ ಇಲಾಖೆ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಬಹು ದಾಗಿದೆ. ಎರಡು ವರ್ಷದ ಅವಧಿಗೆ ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಿದೆ. ಇದಕ್ಕಾಗಿ ಬಿಬಿಎಂಪಿ ವರ್ಷಕ್ಕೆ 10.60 ರೂ. ಕೋಟಿ ವೆಚ್ಚ ಮಾಡಲಾಗುತ್ತಿದೆ. ಅದರಲ್ಲಿ198 ಕ್ಲೀನ್ ಅಪ್ ಮಾರ್ಷಲ್‌ಗೆ ತಿಂಗಳಿಗೆ 25 ಸಾವಿರ ರೂ. ಜೂನಿಯರ್ ಕಮಿಷನ್ ಅಧಿಕಾರಿಗೆ 40 ಸಾವಿರ ರೂ, ಉಪ ಮುಖ್ಯ ಅಧಿಕಾರಿಗೆ 45 ರೂ. ಸಾವಿರ ಮಾಸಿಕ ವೇತನ, ಸಾರಿಗೆ ಭತ್ಯೆ ಸೇರಿದಂತೆ ವಿವಿಧ ಖರ್ಚು ವೆಚ್ಚಗಳು ಇದರಲ್ಲಿ ಸೇರಿವೆ.

ಮಾರ್ಷಲ್‌ಗಳ ಕರ್ತವ್ಯ:

ರಾತ್ರಿ ಹಾಗೂ ಬೆಳಗಿನ ಜಾವ ಕವರ್‌ಗಳಲ್ಲಿ ಕಸ ತುಂಬಿಕೊಂಡು ಕಾರು, ಬೈಕ್ ಗಳಲ್ಲಿ ಬಂದು ಎಲ್ಲೆಂದರಲ್ಲಿ ಎಸೆಯುವರಿಗೆ, ಮಾಂಸದ ಅಂಗಡಿಗಳು, ವಾಣಿಜ್ಯ ಮಳಿಗೆಗಳು ಸಹ ವ್ಯಾಪಾರ ಮುಗಿಸಿ ರಾತ್ರಿ ತ್ಯಾಜ್ಯತುಂಬಿ ರಸ್ತೆಬದಿ ಎಸೆಯವವರ ಮೇಲೆ ನಿಗಾವಹಿಸುವುದರ ಜತೆಗೆ ವಶಕ್ಕೆ ಪಡೆದು ಸ್ಥಳದಲ್ಲೇ ದಂಡ ವಿಧಿಸಲಿದ್ದಾರೆ. ದಂಡ ಪಾವತಿ ಮಾಡದಿದ್ದರೆ, ಸ್ಥಳೀಯ ಪೊಲೀಸರ ವಶಕ್ಕೆ ನೀಡಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ದಂಡ ಹಾಕುವ ಅಧಿಕಾರಕ್ಕೆ ಅನುಮತಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರ್ಷಲ್‌ಗಳಿಗೆ ದಂಡ ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ, ಇದೀಗ ಮಾರ್ಷಲ್‌ಗಳಿಗೆ ದಂಡ ಹಾಕುವುದಕ್ಕೆ ಪಾಲಿಕೆ ಸಭೆಯಲ್ಲಿ ಅನುಮತಿ ಪಡೆಯುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಳಿಕ ದಂಡ ಹಾಕುವ ಕೆಲಸ ಆರಂಭಿಸುತ್ತಾರೆ. ಜತೆಗೆ ಟ್ರಾಫಿಕ್ ಪೊಲೀಸ್ ಮಾದರಿಯಲ್ಲಿ ಸ್ಥಳದಲ್ಲಿಯೇ ದಂಡ ಹಾಕುವ ಎಲೆಕ್ಟ್ರಾನಿಕ್ ಯಂತ್ರವನ್ನೂ ನೀಡಲಾಗುತ್ತದೆ.

ವಿಶೇಷ ಆ್ಯಪ್ ಸಿದ್ಧತೆ:

ಪಾಲಿಕೆಯಿಂದ ನೇಮಿಸಿಕೊಳ್ಳುವ ಮಾರ್ಷಲ್ ಗಳಿಗಾಗಿ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಅದರಂತೆ ಮಾರ್ಷಲ್‌ಗಳು ಕಸ ಎಸೆಯುವವರನ್ನು ಹಿಡಿದಾಗ ಅವರ ಭಾವಚಿತ್ರ, ವಾಹನ ಚಿತ್ರವನ್ನು ಫೋಟೋ ತೆಗೆದು ಅಪ್‌ಲೋಡ್ ಮಾಡುತ್ತಾರೆ. ಇದರೊಂದಿಗೆ ಸಾರ್ವಜನಿಕರು ಕಸ ಸುರಿಯುತ್ತಿರುವ ಬಗ್ಗೆ ದೂರು ನೀಡಿದಾಗ, ಕೂಡಲೇ ಆ ವಾರ್ಡ್‌ನ ಮಾರ್ಷಲ್‌ಗೆ ಸಂದೇಶ ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ.

ವಿದ್ಯಾರ್ಥಿ ಪಸ್ ಪಾಸ್ ದರ ಏರಿಕೆ