ಬೆಂಗಳೂರು [ಆ.17]:  ಪುಂಡರ ಜತೆ ರಸ್ತೆ ಮಧ್ಯೆ ಹುಟ್ಟುಹಬ್ಬ ಆಚರಣೆ ಸಂಭ್ರಮಾಚರಣೆ ಮಾಡುತ್ತಿದ್ದ ನಿವೃತ್ತ ಪೊಲೀಸ್‌ ಪುತ್ರನೊಬ್ಬನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಿವೃತ್ತ ಎಎಸ್‌ಐ ಪುತ್ರ ಮಲ್ಲತ್ತಹಳ್ಳಿ ನಿವಾಸಿ ಗಿರಿ ಅಲಿಯಾಸ್‌ ಗೋಲ್ಡ್‌ಗಿರಿ ಎಂಬಾತನನ್ನು ಬಂಧಿಸಿ, ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಕೆಜಿ ಕೆಜಿ ಚಿನ್ನ ಧರಿಸುವ ಈತನ್ನು ಗೋಲ್ಡ್ ಗಿರಿ ಎಂದೇ ಕರೆಯಲಾಗುತ್ತದೆ. ಅಲ್ಲದೇ ಈತ ಚಿನ್ನ ಧರಿಸುವ ಜೊತೆಗೆ ನಾಯಿಗೂ ಕೂಡ ಚಿನ್ನದ ಚೈನ್ ಹಾಕಿ ಸುದ್ದಿಯಾಗಿದ್ದ. 

ಗಿರಿ ಮಲ್ಲತ್ತಹಳ್ಳಿಯಲ್ಲಿ ರಸ್ತೆ ಮಧ್ಯೆ ಟಾರ್ಪಲ್‌ ಹಾಕಿಕೊಂಡು ಸುಮಾರು 30ಕ್ಕೂ ಹೆಚ್ಚು ಮಂದಿ ಜತೆ ಗುರುವಾರ ರಾತ್ರಿ 8ರ ಸುಮಾರಿಗೆ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದ. ಇದರಿಂದಾಗಿ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗಿದ್ದಲ್ಲದೆ, ಸ್ಥಳೀಯರಿಗೆ ತೊಂದರೆ ಉಂಟಾಗಿತ್ತು. ಅನೇಕ ರೌಡೀಶಿಟರ್ ಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈತನೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದರು. ಇದರಿಂದ ದಾಳಿ ನಡೆಸಿ ಆತನನ್ನು ಬಂಧಿಸಲಾಯಿತು.

ಗಿರಿ ಮೇಲೆ ಅಪರಾಧ ಪ್ರಕರಣಗಳಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನೊಂದಿಗೆ ಇದ್ದವರ ಮೇಲೆ ಅಪರಾಧ ಪ್ರಕರಣಗಳಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.