-ಆತ್ಮಭೂಷಣ್‌

ಮಂಗಳೂರು[ಸೆ.07]: ‘ನನ್ನ ರಾಜೀನಾಮೆಗೆ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಗಳೇ ಕಾರಣ. ಜಮ್ಮು-ಕಾಶ್ಮೀರ ಸ್ವಾಯತ್ತತೆ ತೆಗೆದುಹಾಕಿರುವ ನಿರ್ಧಾರ, ಪಾಕ್‌ ಆಕ್ರಮಿತ ಕಾಶ್ಮೀರ ವಶಪಡಿಸುವ ಹೇಳಿಕೆ, ತ್ರಿವಳಿ ತಲಾಖ್‌, ಅಯೋಧ್ಯೆ ರಾಮಮಂದಿರ ಸೇರಿದಂತೆ ವಿವಾದಾತ್ಮಕ ವಿಚಾರಗಳು ನನಗೆ ವೈಯಕ್ತಿಕವಾಗಿ ಒಪ್ಪಿಗೆಯಾಗುತ್ತಿಲ್ಲ. ಇದರಿಂದ ಬೇಸತ್ತು, ಮಾನಸಿಕವಾಗಿ ಅವುಗಳನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಕಾರಣ ರಾಜೀನಾಮೆ ನೀಡಿದ್ದೇನೆ’

- ಇದು ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರ ಸ್ಪಷ್ಟನುಡಿ.

ಶುಕ್ರವಾರ ‘ಕನ್ನಡಪ್ರಭ’ ಜೊತೆಗೆ ಮಾತನಾಡಿದ ಅವರು, ಮುಖ್ಯವಾಗಿ ಪ್ರಸಕ್ತ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರ ವಿಚಾರದಲ್ಲಿ ಸ್ವಾಯತ್ತತೆಯನ್ನು ತೆಗೆದುಹಾಕಿ ಸ್ವತಂತ್ರ ರಾಜ್ಯವನ್ನಾಗಿ ಮಾಡಿದೆ. ಇದನ್ನು ಸಹಿಸಿಕೊಳ್ಳಲು ನನಗೆ ಆಗುತ್ತಿಲ್ಲ. ಅದೇ ರೀತಿ ಪಾಕ್‌ ಆಕ್ರಮಿತ ಕಾಶ್ಮೀರ ವಶಪಡಿಸುವ ಹೇಳಿಕೆ, ಮಾತ್ರವಲ್ಲ ತ್ರಿವಳಿ ತಲಾಖ್‌, ಅಯೋಧ್ಯೆ ರಾಮಮಂದಿರ ಸೇರಿದಂತೆ ವಿವಾದಾತ್ಮಕ ವಿಚಾರಗಳು ನನಗೆ ವೈಯಕ್ತಿಕವಾಗಿ ಒಪ್ಪಿಗೆಯಾಗುತ್ತಿಲ್ಲ. ಅವುಗಳನ್ನು ನನ್ನ ಮನಸ್ಸು ಕೂಡ ಒಪ್ಪುತ್ತಿಲ್ಲ. ಕೇಂದ್ರ ಸರ್ಕಾರ ಜನರಿಗೋಸ್ಕರ, ಜನರ ಏಳಿಗೆಗಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ದೇಶಭಕ್ತಿಯ ಹೆಸರಿನಲ್ಲಿ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಇದಕ್ಕೆ ನನ್ನ ಸಮ್ಮತಿ ಇಲ್ಲ ಎಂದು ಸಸಿಕಾಂತ್‌ ಸೆಂಥಿಲ್‌ ಹೇಳಿದರು.

ಕೇಂದ್ರ ಸರ್ಕಾರದ ನೀತಿಗಳು ಜನರ ಮಧ್ಯೆ ಸಂಘರ್ಷ ಏರ್ಪಡುವಂತೆ ಮಾಡುತ್ತಿವೆ. ಇದು ಮುಂದೆ ಪ್ರತಿಯೊಬ್ಬರ ಮನೆಯಲ್ಲೂ ಘರ್ಷಣೆಯನ್ನು ಹುಟ್ಟುಹಾಕಿದರೆ ಅಚ್ಚರಿ ಇಲ್ಲ. ಇದು ಕೆಲವರಿಗೆ ದೊಡ್ಡ ಸಂಗತಿ ಅಲ್ಲ ಎಂದು ಕಂಡುಬಂದರೂ, ನಿಜವಾಗಿಯೂ ಇದು ಗಂಭೀರ ಸಮಸ್ಯೆ. ಇದು ದೇಶದ ಭವಿಷ್ಯವನ್ನು ಹೊಸಕಿಹಾಕುವ ಅಪಾಯ ಇದ್ದೇ ಇದೆ. ಇದನ್ನು ನೋಡಿಕೊಂಡು ಇರಲು ನನ್ನ ಮನಸ್ಸು ಒಪ್ಪುವುದಿಲ್ಲ. ಅದಕ್ಕಾಗಿಯೇ ಸ್ವಯಂ ಆಗಿ ರಾಜೀನಾಮೆ ನೀಡಿದ್ದೇನೆ ಎಂದು ರಾಜೀನಾಮೆಯನ್ನು ಸಮರ್ಥಿಸಿಕೊಂಡರು.

ಸಸಿಕಾಂತ್ ಸೆಂಥಿಲ್ ರಾಜೀನಾಮೆ, ಒಂದೇ ದಿನದಲ್ಲಿ ದಕ್ಷಿಣ ಕನ್ನಡಕ್ಕೆ ಹೊಸ ಡಿಸಿ

ದೇಶಾದ್ಯಂತ ಓಡಾಟ, ಹೋರಾಟ:

ರಾಜೀನಾಮೆ ನೀಡಿದರ ಕೂಡಲೇ ಎಲ್ಲವೂ ಸರಿಹೋಗುತ್ತಾ? ನನ್ನಿಂದ ಸರಿಪಡಿಸಲು ಸಾಧ್ಯವಿದೆಯಾ ಎಂದು ಕೆಲವರು ಪ್ರಶ್ನಿಸಬಹುದು. ಆದರೆ ನಾನು ದೇಶಾದ್ಯಂತ ಓಡಾಟ ನಡೆಸುತ್ತೇನೆ. ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ. ರಾಜಕಿಯೇತರ ಸಂಘಟನೆ ರಚಿಸುವ ಉದ್ದೇಶವೂ ಇಲ್ಲ. ಆದರೆ ಸಮಾಜದಲ್ಲಿ ಇದ್ದುಕೊಂಡು ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ಧ್ವನಿ ಎತ್ತುತ್ತೇನೆ ಎಂದರು.

ಈಗಾಗಲೇ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಐಎಎಸ್‌ ಅಧಿಕಾರಿಗಳಾದ ಕಾಶ್ಮೀರದ ಶಾಫಿದ್‌ ಮತ್ತು ಕೇರಳದ ಕಣ್ಣನ್‌ ರಾಜೀನಾಮೆ ನೀಡಿದ್ದಾರೆ. ಅವರನ್ನು ಭೇಟಿ ಮಾಡಿ ಹೋರಾಟದ ಬಗ್ಗೆ ಮಾತುಕತೆ ನಡೆಸುವ ಇರಾದೆ ಸದ್ಯಕ್ಕೆ ಇಲ್ಲ. ಆದರೆ ನನ್ನ ರೀತಿ ಯೋಚಿಸುವ ಸಮಾನ ಮನಸ್ಕರ ಜೊತೆ ಮಾತುಕತೆ ನಡೆಸುತ್ತೇನೆ. ಸಂವಿಧಾನದ ಮೇಲೆ ನಂಬಿಕೆ ಇರುವವರ ಜೊತೆಗೆ ಚರ್ಚೆ ನಡೆಸುತ್ತೇನೆ. ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ನೀತಿಯ ಅಪಾಯದ ಬಗ್ಗೆ ಮನವರಿಕೆ ಮಾಡುತ್ತೇನೆ ಎಂದರು.

ಕರ್ನಾಟಕದಿಂದಲೇ ಹೋರಾಟ:

ನನ್ನ ಮೂಲ ತಮಿಳ್ನಾಡು ಆದರೂ, ನಾನು ಕನ್ನಡಿಗನೇ ಆಗಿದ್ದೇನೆ. ಹಾಗಾಗಿ ನಾನು ಕರ್ನಾಟಕದಲ್ಲಿ ಇದ್ದುಕೊಂಡೇ ಹೋರಾಟ ನಡೆಸುತ್ತೇನೆ. ಶೀಘ್ರವೇ ರಾಜ್ಯವ್ಯಾಪಿ ಪ್ರವಾಸ ಮಾಡುತ್ತೇನೆ. ನನ್ನ ಸಿದ್ಧಾಂತವನ್ನು ಬೆಂಬಲಿಸುವವರು ನನ್ನ ಜೊತೆಗೆ ಬರಬಹುದು ಎಂದು ಸಸಿಕಾಂತ್‌ ಸೆಂಥಿಲ್‌ ಆಹ್ವಾನ ನೀಡಿದರು.

ನನ್ನ ಈ ನಿರ್ಧಾರವನ್ನು ನನ್ನ ಕುಟುಂಬಸ್ಥರು ಬೆಂಬಲಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿಯೇ ನಾನು ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಈ ಬಗ್ಗೆ ಸಾಕಷ್ಟುಯೋಚಿಸಿಯೇ ರಾಜೀನಾಮೆ ನೀಡಿದ್ದೇನೆ. ಈ ವಿಚಾರದಲ್ಲಿ ಯಾರೇ ಒತ್ತಡ ಹಾಕಿದರೂ ನಾನು ರಾಜೀನಾಮೆ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ನನ್ನದು ಅಚಲ ನಿರ್ಧಾರ ಎಂದು ಸಸಿಕಾಂತ್‌ ಸೆಂಥಿಲ್‌ ಹೇಳಿದರು.

Video: ಸಸಿಕಾಂತ್ ಸೆಂಥಿಲ್ ದಿಢೀರ್ ರಾಜೀನಾಮೆ ಹಿಂದಿನ ಅಸಲಿ ಸತ್ಯ ಬಹಿರಂಗ

ಹಿಂದೆ ಸರಿಯಲ್ಲ

ನನ್ನ ರಾಜೀನಾಮೆಗೆ ಜಿಲ್ಲೆಯ ಶಾಸಕರು, ಸಚಿವರು ಅಥವಾ ರಾಜ್ಯ ಸರ್ಕಾರ ಕಾರಣವಲ್ಲ. ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ರಾಜೀನಾಮೆ ನೀಡಿದ್ದೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

- ಸಸಿಕಾಂತ್‌ ಸೆಂಥಿಲ್‌, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ