ರಾಜೀನಾಮೆ ನೀಡಿದ ನಂತರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಮಂಗಳೂರಿನ ಡಿಸಿ ಕಚೇರಿಯನ್ನು ತೊರೆದಿದ್ದಾರೆ. ಕಳೆದ ಶುಕ್ರವಾರ ಐಎಎಸ್ ಹುದ್ದೆಗೆ ರಾಜಿನಾಮೆ ನೀಡಿದ ಸೆಂಥಿಲ್ ಅವರು ಎರಡು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದರು. ಭಾನುವಾರ ಡಿಸಿ ಬಂಗಲೆ ಆಗಮಿಸಿದ ಅವರು ಇಡೀ ದಿನ ಸಹೋದ್ಯೋಗಿಗಳನ್ನು ಭೇಟಿ ಮಾಡಿದ್ದರು.
ಮಂಗಳೂರು(ಸೆ.10): ಐಎಎಸ್ ಹುದ್ದೆಗೆ ರಾಜಿನಾಮೆ ನೀಡಿದ ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಮಂಗಳೂರಿನಲ್ಲಿರುವ ಡಿಸಿ ಬಂಗಲೆ ತೊರೆದಿದ್ದಾರೆ.
ಕಳೆದ ಶುಕ್ರವಾರ ಐಎಎಸ್ ಹುದ್ದೆಗೆ ರಾಜಿನಾಮೆ ನೀಡಿದ ಸೆಂಥಿಲ್ ಅವರು ಎರಡು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದರು. ಭಾನುವಾರ ಡಿಸಿ ಬಂಗಲೆ ಆಗಮಿಸಿದ ಅವರು ಇಡೀ ದಿನ ಸಹೋದ್ಯೋಗಿಗಳನ್ನು ಭೇಟಿ ಮಾಡಿದ್ದರು. ನಂತರ ರಾತ್ರಿಯೇ ವಿಮಾನ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.
ಮಂಗಳೂರು: ಸೆಂಥಿಲ್ ವಿರುದ್ಧ ದೇಶದ್ರೋಹಿ ತನಿಖೆ..?
ಸೆಂಥಿಲ್ ಅವರ ಸರಂಜಾಮುಗಳು ಪೂರ್ತಿಯಾಗಿ ಸ್ಥಳಾಂತರಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ದ.ಕ.ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅವರು ಭಾನುವಾರವೇ ಡಿಸಿ ಬಂಗಲೆಗೆ ಆಗಮಿಸಿದ್ದಾರೆ.
ರಾಜೀನಾಮೆ ಹಿಂಪಡೆಯಲು ಒತ್ತಾಯ:
ಸೆಂಥಿಲ್ ಅವರು ಸೋಮವಾರ ಬೆಂಗಳೂರಿನಲ್ಲಿದ್ದು, ಅಧಿಕಾರಿ ಸ್ನೇಹಿತರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆಯೂ ರಾಜಿನಾಮೆ ವಾಪಸ್ ಪಡೆಯುವಂತೆ ಹಿತೈಷಿಗಳು ಒತ್ತಾಯ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ಕೆಲವು ಜಾಲತಾಣಗಳಲ್ಲಿ ಸೆಂಥಿಲ್ ರಾಜಿನಾಮೆ ವಾಪಸ್ ಪಡೆಯುವ ಸಂಭವ ಇದೆ ಎಂಬ ಸುದ್ದಿಗಳು ಹರಿದಾಡತೊಡಗಿವೆ. ಆದರೆ ಹಿಂದಿನ ನಿಲುವಿಗೆ ಬದ್ಧರಾಗಿ ಸೆಂಥಿಲ್ ಅವರು ರಾಜಿನಾಮೆಯನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದರು ಎನ್ನಲಾಗಿದೆ.
