ಮಂಗಳೂರು(ಸೆ.10): ಕೇಂದ್ರ ಸರ್ಕಾರ ದೇಶದ ಹಿತದೃಷ್ಟಿಯಿಂದ ಕೈಗೊಂಡ ಕಾಶ್ಮೀರ ಸೇರಿದಂತೆ ವಿವಿಧ ತೀರ್ಮಾನಗಳ ವಿರುದ್ಧ ಬಹಿರಂಗವಾಗಿ ಆಕ್ಷೇಪಿಸಿ ಐಎಎಸ್‌ ಸ್ಥಾನಕ್ಕೆ ರಾಜಿನಾಮೆ ನೀಡಿರುವ ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್‌ ಸೆಂಥಿಲ್‌ ಅವರು ದೇಶ ವಿರೋಧಿಯಾಗಿದ್ದಾರೆ. ಆದ್ದರಿಂದ ಅವರ ಹೇಳಿಕೆ ವಿರುದ್ಧ ತನಿಖೆ ನಡೆಸುವಂತೆ ಜಿಲ್ಲಾ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಸೋಮವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ರಾಮ ಮಂದಿರ ನಿರ್ಮಾಣ ವಿರೋಧಿ ಕಾರಣಗಳನ್ನು ರಾಜಿನಾಮೆಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಂಥಿಲ್‌ ಅಧಿಕಾರದ ಅವಧಿಯಲ್ಲಿ ಅವರು ಯಾವುದೆಲ್ಲ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನುವ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಕೆಶಿ ಸಂಪುಟ ಸೇರ್ಪಡೆ ವಿಳಂಬಿಸಿದ್ದು ಯಾಕೆ?:

ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಅವರು ಆರ್ಥಿಕ ಅಪರಾಧ ಎಸಗಿದ ಕಾರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಇದರಲ್ಲಿ ರಾಜಕೀಯ ದ್ವೇಷ ಇದೆ ಎನ್ನುವ ಕಾಂಗ್ರೆಸ್‌ ಆರೋಪ ಅರ್ಥಹೀನ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೂ ಇಂತಹ ತನಿಖೆ ನಡೆದಿದೆ. ಇಲ್ಲದಿದ್ದರೆ ಡಿಕೆಶಿಯನ್ನು ವಿಳಂಬವಾಗಿ ಸಂಪುಟಕ್ಕೆ ಆಗಿನ ಸಿಎಂ ಸಿದ್ದರಾಮಯ್ಯ ಸೇರ್ಪಡೆಗೊಳಿಸಿದ್ದು ಯಾಕೆ? ಹಾಗಾದರೆ ಆಗ ರಾಜಕೀಯ ದ್ವೇಷದಿಂದ ಪ್ರಕರಣ ಹಾಕಲಾಗಿದೆಯೇ ಎನ್ನುವ ಬಗ್ಗೆ ಕಾಂಗ್ರೆಸಿಗರು ಉತ್ತರ ನೀಡಬೇಕು. ಡಿಕೆಶಿ ಯಾವುದೇ ತಪ್ಪು ಮಾಡದಿದ್ದರೆ ತನಿಖೆ ಎದುರಿಸಲಿ. ಅವರ ನಿವಾಸದಲ್ಲಿ ಪತ್ತೆಯಾದ ಕೋಟ್ಯಂತರ ಮೊತ್ತದ ಹಣಕ್ಕೆ ಸೂಕ್ತ ದಾಖಲೆ ಒದಗಿಸಲಿ ಎಂದು ಮಠಂದೂರು ಹೇಳಿದರು.

ಮಂಗಳೂರು: ಸೆಂಥಿಲ್‌ ವಿರುದ್ಧ ದೇಶದ್ರೋಹಿ ತನಿಖೆ..?