Asianet Suvarna News Asianet Suvarna News

Karnataka Politics : ಮೀಸಲು ಬಿಜೆಪಿ ಎಲೆಕ್ಷನ್‌ ಗಿಮಿಕ್‌: ಎಚ್‌ಡಿಕೆ

ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಪಂಚಮಸಾಲಿ ಸಮುದಾಯಗಳಿಗೆ ಮೀಸಲು ನೀಡುವ ವಿಚಾರದಲ್ಲಿ ರಾಜ್ಯಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದೊಂದು ಎಲೆಕ್ಷನ್‌ ಗಿಮಿಕ್‌ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

Reservation is BJP election Tricks says  HDK snr
Author
First Published Dec 23, 2022, 6:10 AM IST

 ಮದ್ದೂರು:  ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಪಂಚಮಸಾಲಿ ಸಮುದಾಯಗಳಿಗೆ ಮೀಸಲು ನೀಡುವ ವಿಚಾರದಲ್ಲಿ ರಾಜ್ಯಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದೊಂದು ಎಲೆಕ್ಷನ್‌ ಗಿಮಿಕ್‌ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಗೆಜ್ಜಲಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚುನಾವಣಾ (Election)  ಗಿಮಿಕ್‌ ಮಾಡಿಕೊಂಡು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವುದಿಲ್ಲ. ಆ ಕೆಲಸ ಈಗಿನ ಸರ್ಕಾರದಿಂದ ನಡೆಯುತ್ತಿದೆ. ಮೀಸಲಾತಿ (Resarvation)  ವಿಚಾರದಲ್ಲಿ ಕಾನೂನಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ಆಲೋಚನೆ ಮಾಡಿ ಸಮುದಾಯಗಳ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದು ಸರ್ಕಾರಗಳ ಕರ್ತವ್ಯವಾಗಬೇಕು ಎಂದು Kumaraswamy  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಾವ ಯಾವ ಸಮಾಜಗಳಲ್ಲಿ ಏನೆಲ್ಲಾ ಪರಿಸ್ಥಿತಿಗಳಿವೆ ಎಂಬುದನ್ನು ಪ್ರಾಮಾಣಿಕವಾಗಿ ಅರಿಯಬೇಕು. ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಎಲ್ಲವೂ ತೀರ್ಮಾನವಾಗಬೇಕು. ಆಗ ಸಮುದಾಯಗಳಿಗೆ ಶಾಶ್ವತವಾದ ಪರಿಹಾರ ಸೂಚಿಸಿ ಅನುಕೂಲ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಚುನಾವಣಾ ಉದ್ದೇಶದಿಂದ ಸಮುದಾಯಗಳ ಮೂಗಿಗೆ ತುಪ್ಪ ಸವರುವುದು ಆ ಸಮಾಜದವರನ್ನು ವಂಚಿಸಿದಂತೆಯೇ ಸರಿ. ಪಂಚಮಸಾಲಿ ಸಮಾಜ ಕೃಷಿಯನ್ನೇ ನಂಬಿ ಬದುಕುತ್ತಿರುವ ಸಮಾಜ. ಅವರಲ್ಲೂ ಬಡತನವಿದೆ. ವೀರಶೈವ ಸಮಾಜದಲ್ಲೂ ಹಲವಾರು ಪಂಗಡಗಳಿದ್ದು, ಒಂದೊಂದು ಪಂಗಡ ಒಂದೊಂದು ವೃತ್ತಿ ಮಾಡುತ್ತಿದೆ. ಪಂಚಮಸಾಲಿ ಜನಾಂಗದವರು ಕೃಷಿಯನ್ನೇ ನಂಬಿರುವುದರಿಂದ ರೈತರ ಪರಿಸ್ಥಿತಿ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ, ಅವರು ಬೇಡಿಕೆ ಇಟ್ಟಿರುವುದರಲ್ಲಿ ತಪ್ಪಿಲ್ಲ. ಅದನ್ನು ಯಾರೂ ಅಲ್ಲಗೆಳೆಯಲಾಗುವುದೂ ಇಲ್ಲ. ಆದರೆ, ಮೀಸಲು ಕಲ್ಪಿಸುವಾಗ ಕಾನೂನಾತ್ಮಕ, ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.

ಐದು ವರ್ಷ ವಿಶ್ರಾಂತಿಯಲ್ಲಿದ್ದವರು ಈಗ ಒಕ್ಕಲಿಗ ಸಮಾಜದ ಬಗ್ಗೆ ಮಾತನಾಡುತ್ತಿದ್ದಾರೆ. ನನಗೆ ಒಕ್ಕಲಿಗ ಸಮಾಜದ ಬದುಕಿನ ಬಗ್ಗೆ ಗೊತ್ತಿಲ್ಲ. ಅವರು ಒಕ್ಕಲಿಗ ಸಮಾಜಕ್ಕೆ ನ್ಯಾಯ ಕೊಡಿಸಲು ಮುಂದಾಗಿದ್ದಾರೆ. ಅದೇನು ನ್ಯಾಯ ಕೊಡಿಸುತ್ತಾರೆ ಎಂಬುದನ್ನು ನಾವು ಹಿಂದೆ ನಿಂತು ನೋಡುತ್ತೇವೆ. ಅವರೇ ಮುಂದೆ ನಿಂತು ಹೋರಾಟ ಮಾಡಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೆಸರೇಳದೆ ಟೀಕಿಸಿದರು.

ಅಧಿವೇಶನಕ್ಕಿಂತ ಪಂಚರತ್ನ ರಥಯಾತ್ರೆ ಮುಖ್ಯ

ನನಗೆ ಅಧಿವೇಶನಕ್ಕಿಂತ ಪಂಚರತ್ನ ರಥಯಾತ್ರೆಯೇ ಮುಖ್ಯ. ಮೂರು ದಿನಗಳ ಅಧಿವೇಶನದಲ್ಲಿ ನಾಡಿನ ಸಮಸ್ಯೆಗಳ ಕುರಿತು ಯಾವ ಚರ್ಚೆ ನಡೆದಿದೆ, ಇವತ್ತಿನ ಅಧಿವೇಶನಕ್ಕಿಂತಲೂ ಪಂಚರತ್ನ ರಥಯಾತ್ರೆ ನನಗೆ ಮುಖ್ಯವಾಗಿದ್ದು, 75 ವರ್ಷದಿಂದ ಈ ದೇಶದಲ್ಲಿ ಆಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಪಂಚರತ್ನ ರಥಯಾತ್ರೆಯ ಮೂಲ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಇಷ್ಟುವರ್ಷದಲ್ಲಿ ಎಷ್ಟುವಿಧಾನಸಭಾ ಕಲಾಪ ನಡೆಸಿದ್ದೇವೆ, ಎಷ್ಟೆಲ್ಲಾ ಮಾತನಾಡಿದ್ದೇವೆ, ನಾವು ಸದನದಲ್ಲಿ ಮಾತನಾಡಿದ್ದೆಲ್ಲಾ ಜಾರಿಯಾಗಿದೆಯೇ, ಸದನದಲ್ಲಿ ಮಾತನಾಡುವುದೇ ಬೇರೆ, ವಾಸ್ತವಾಂಶವೇ ಬೇರೆ ಎಂದು ಪ್ರತಿಕ್ರಿಯಿಸಿದರು.

ಶಾಂತಿಯುತ ಪರಿಹಾರ: ಒಕ್ಕೂಟ ವ್ಯವಸ್ಥೆಯೊಳಗಿರುವ ದೇಶ ಮತ್ತು ರಾಜ್ಯದೊಳಗಿರುವ ಭಾಷೆ ಮತ್ತು ಗಡಿ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು. ಚೀನಾ ಮಾದರಿಯಲ್ಲಿ ಹೋರಾಟ ಮಾಡುತ್ತೇವೆಂಬ ಹೇಳಿಕೆ ಪ್ರಚೋದನಕಾರಿಯಾದದ್ದು. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ವಾತಾವರಣ ಕಾಣಲಾಗುವುದಿಲ್ಲ. ರಾಜಕೀಯ ನಾಯಕರು ಹೇಳಿಕೆಗಳನ್ನು ನೀಡಿದಾಕ್ಷಣ ಅವುಗಳಾವೂ ಕಾರ್ಯರೂಪಕ್ಕೆ ಬರುವುದಿಲ್ಲ. ವೀರಾವೇಶದಲ್ಲಿ ಹೇಳಿಕೆಗಳನ್ನು ಕೊಡಬಹುದು. ಆದರೆ, ಇಂದಿನ ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ವ್ಯವಸ್ಥೆಯಲ್ಲಿ ಹೇಳಿದಂತೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಪಂಚರತ್ನ ರಥಯಾತ್ರೆ ಹತ್ತಿಕ್ಕಲು ಯತ್ನ

ಪಂಚರತ್ನ ರಥಯಾತ್ರೆಗೆ ಭಾರಿ ಜನಬೆಂಬಲ ಕಂಡು, ಅದನ್ನು ಹತ್ತಿಕ್ಕಲು ಕೇಶವ ಕೃಪಾದಲ್ಲಿ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಕೊರೋನಾ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡಲು ನಾನು ಸಿದ್ಧನಿದ್ದೇನೆ. ಆದರೆ, ಕೊರೋನಾ ಭೂತವನ್ನು ಬಿಟ್ಟು ಪಂಚರತ್ನ ರಥಯಾತ್ರೆ ಹತ್ತಿಕ್ಕುವುದಕ್ಕೆ ಮುಂದಾದರೆ ಅದು ಸಾಧ್ಯವಿಲ್ಲ. ಚೀನಾದಲ್ಲಿ ಕೊರೋನಾ ಆರ್ಭಟಿಸುತ್ತಿರುವುದು ಗೊತ್ತಿದೆ. ನಮ್ಮಲ್ಲೂ ಎರಡು ಮೂರು ಕಡೆ ಕೊರೋನಾ ಆರಂಭವಾಗಿದೆ ಎನ್ನುತ್ತಿದ್ದಾರೆ. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅದನ್ನೇ ಅಸ್ತ್ರವಾಗಿಸಿಕೊಂಡು ರಥಯಾತ್ರೆ ಹತ್ತಿಕ್ಕುವುದಕ್ಕೆ ಬಳಸಿದರೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ, ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌ ಇತರರಿದ್ದರು.

Follow Us:
Download App:
  • android
  • ios