ಸುಬ್ರಹ್ಮಣ್ಯ [ಸೆ.18]:  ಪುಷ್ಪಗಿರಿ ಹಾಗೂ ಕುಮಾರ ಪರ್ವತಕ್ಕೆ ಚಾರಣಕ್ಕೆ ಹೋಗಿದ್ದ ಬೆಂಗಳೂರಿನ 12 ಜನರ ಯುವಕರ ತಂಡದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಗಾಯಿತ್ರಿ ನಗರದ ನಿವಾಸಿ ಸಂತೋಷ್‌(25) ಮಂಗಳವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕಡೆಯಿಂದ ಸಂತೋಷ್‌ ಸೇರಿದಂತೆ 12 ಜನ ಬೆಂಗಳೂರಿನ ಖಾಸಗಿ ಕಂಪನಿ ಯುವಕರ ತಂಡ ಪುಷ್ಪಗಿರಿ ಮತ್ತು ಕುಮಾರಪರ್ವತಕ್ಕೆ ಚಾರಣ ಹೋಗಿದ್ದಾಗ ಭಾನುವಾರ ಮಹ್ಯಾಹ್ನ 4.30ರ ವೇಳೆ ಸಂತೋಷ್‌ ನಾಪತ್ತೆಯಾಗಿದ್ದರು. ಸಂತೋಷ್‌ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಸ್ವತಃ ಕುಕ್ಕೆಸುಬ್ರಹ್ಮಣ್ಯಕ್ಕೆ ತಲುಪಿದ್ದಾರೆ. ಆದಿ ಸುಬ್ರಹ್ಮಣ್ಯ ಬಳಿಯ ಕಲ್ಲಗುಡ್ಡೆ ಎಂಬಲ್ಲಿಯ ಗ್ರಾಪಂ ಸದಸ್ಯೆ ಸೌಮ್ಯಾ ಭರತ್‌ ಅವರ ಮನೆಗೆ ಸಂತೋಷ್‌ ಸುರಕ್ಷಿತವಾಗಿ ಬಂದರು. ಇಲ್ಲಿ ಇವರನ್ನು ಗುರುತಿಸಿದ ಮನೆಯವರು ಅವರಿಗೆ ಫಲಹಾರ ನೀಡಿದರು.

ಮೂರು ವರ್ಷಗಳ ಹಿಂದೆ ಕುಕ್ಕೆ ದೇವಸ್ಥಾನದ ತೀರ್ಥಕ್ಕಾಗಿ ಆದಿ ಸುಬ್ರಹ್ಮಣ್ಯದ ಕಲ್ಲಗುಡ್ಡೆಯ ಮೇಲಿನ ಅರಣ್ಯ ಪ್ರದೇಶದ ಪೊಸರ ಎಂಬ ಪ್ರದೇಶದ ಬಳಿಯಿಂದ 4 ಕಿ.ಮೀ. ಪೈಪ್‌ಲೈನ್‌ ಅಳವಡಿಸಲಾಗಿತ್ತು. ಇದರ ಸಹಾಯದಿಂದ ದಾರಿಯಾಗಿ ಬಳಸಿ ಸಂತೋಷ್‌ ಊರು ಸೇರಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂತೋಷ್‌, ಗಿರಿಗದ್ದೆಯಿಂದ ಇಳಿಯುವ ಆರಂಭದಲ್ಲಿ ಕುಕ್ಕೆಗೆ ಬರುವ ದಾರಿಯ ಬದಲಾಗಿ ಇನ್ನೊಂದು ದಾರಿಯಲ್ಲಿ ತೆರಳಿದ್ದೆ. ಬಳಿಕ ಎರಡು ದಿನಗಳ ಕಾಲ ನಾನು ತಪ್ಪಿ ಬಂದ ದಾರಿಯಲ್ಲಿ ಮುನ್ನಡೆದೆ. 2 ರಾತ್ರಿಯನ್ನು ಬಂಡೆಗಳ ಮೇಲೆ ಕಳೆದೆ. ಕಾಡಿನ ಝರಿಯ ನೀರನ್ನು ಕುಡಿದು ಜೀವನ ಕಳೆದಿದ್ದೇನೆ ಎಂದರು.