ಶಿವಮೊಗ್ಗ [ಸೆ.20]:  ಕುವೆಂಪು ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳಲ್ಲಿ ಇನ್ನು ಮುಂದೆ ಲೈಂಗಿಕ ಶೋಷಿತರ ಮಕ್ಕಳಿಗೆ ಸ್ಥಾನಗಳನ್ನು ಕಾಯ್ದಿರಿಸಲು ವಿವಿಯ ವಿದ್ಯಾವಿಷಯಕ ಪರಿಷತ್‌ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಹಾಲ್‌ನಲ್ಲಿ ನಡೆದ ವಿದ್ಯಾವಿಷಯಕ ಪರಿಷತ್‌ ಸಾಮಾನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನದ ಕುರಿತು ಸಭೆಯ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿದ ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ ವೀರಭದ್ರಪ್ಪ ಅವರು, ವಿದ್ಯಾವಿಷಯಕ ಪರಿಷತ್‌ ಸಾಮಾನ್ಯ ಸಭೆಯಲ್ಲಿ ಹಲುವು ವಿಷಯಗಳು ಚರ್ಚೆಯಾಗಿದ್ದು, ಅದರಲ್ಲಿ ಪ್ರಮುಖವಾಗಿ ಲೈಂಗಿಕ ಶೋಷಿತರ ಮಕ್ಕಳಿಗೆ ವಿವಿಯ ಪ್ರತಿ ವಿಭಾಗದಲ್ಲಿ ಒಂದು ಸ್ಥಾನವನ್ನು ಕಾಯ್ದಿರಿಸಲಾಗುವುದು ಎಂದರು.

ಕನಿಷ್ಠ 40 ಅಂಕ:  ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಕುವೆಂಪು ವಿವಿಯಲ್ಲಿ ಪ್ರವೇಶಾವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದರಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ. 40 ಅಂಕ ಗಳಿಸಿದರೂ ಕೂಡ ವಿವಿಯಲ್ಲಿ ಪ್ರವೇಶ ಪಡೆಯಬಹುದಾಗಿದೆ. ಈ ಮೊದಲು ಯುಜಿಯಲ್ಲಿ ಪ್ರವೇಶ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇ. 45 ಅಂಕ, ಪ್ರವರ್ಗ-1ರ ವಿದ್ಯಾರ್ಥಿಗಳಲ್ಲಿ ಶೇ. 40 ಅಂಕ ಹಾಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಶೇ. 35 ಕನಿಷ್ಠ ಅಂಕ ಗಳಿಕೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ಬಯಸುವ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇ. 40 ರಷ್ಟುಕನಿಷ್ಠ ಅಂಕಗಳ ಅರ್ಹತೆಯನ್ನು ನಿಗದಿಗೊಳಿಸಲಾಗಿದೆ. ಉಳಿದಂತೆ ಯಥಾ ಸ್ಥಿತಿ ಮುಂದುವರಿಯಲಿದೆ. ಎಂಸಿಎ ಹಾಗೂ ಎಂಬಿಎ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಾವಳಿ ಅನ್ವಯವಾಗಲಿದ್ದು, ಪ್ರಸ್ತುತ ತೀರ್ಮಾನ ಅನ್ವಯವಾಗುವುದಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಡೂರು ಹಾಗೂ ಚಿಕ್ಕಮಗಳೂರು ಸ್ನಾತಕೋತ್ತರ ಕೇಂದ್ರದಂತೆ ಶಿಕಾರಿಪುರದಲ್ಲಿಯೂ ಹೊಸದಾಗಿ ಸ್ನಾತಕೋತ್ತರ ಕೇಂದ್ರ ಆರಂಭಿಸುವ ಬಗ್ಗೆ ಚರ್ಚೆಯಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಂಬಂಧ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಅರಣ್ಯ ಇಲಾಖೆಗೆ 11 ಕೋಟಿ:  ಕುವೆಂಪು ವಿವಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು, ಇದನ್ನು ಬಿಡುಗಡೆಗೊಳಿಸುವ ಸಂಬಂಧ ಅರಣ್ಯ ಇಲಾಖೆಗೆ ಸದ್ಯದಲ್ಲಿಯೇ ವಿವಿಯಿಂದ 11 ಕೋಟಿ ರು. ಪಾವತಿ ಮಾಡಲಾಗುವುದು. ಉಳಿದ 3 ಕೋಟಿ ರು.ಗಳನ್ನು ಮನ್ನಾ ಮಾಡುವಂತೆ ಅರಣ್ಯ ಇಲಾಖೆ ತಮ್ಮ ಬಳಿಯೇ ಇರಿಸಿಕೊಂಡಿರುವ ಮುಖ್ಯಮಂತ್ರಿಯವರ ಬಳಿ ಮನವಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು ಎಂದು ಹೇಳಿದರು.

500 ಕೋಟಿ ರು. ಪ್ರಸ್ತಾವ:  ಕುವೆಂಪು ವಿವಿಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 500 ಕೋಟಿ ರು. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿವಿಧ ವಿಭಾಗಗಳ ಕಟ್ಟಡಗಳು, ಶಿಕಾರಿಪುರ ಪಿಜಿ ಸೆಂಟರ್‌, ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಎಸ್‌. ಎಸ್‌. ಪಾಟೀಲ್‌ ಪರೀಕ್ಷಾಂಗ ಕುಲಸಚಿವ ಪ್ರೊ. ಎಂ. ವೆಂಕಟೇಶ್ವರಲು, ಹಣಕಾಸು ಅಧಿಕಾರಿ  ಹಿರೇಮಣಿ ನಾಯ್ಕ್ ಹಾಗೂ ವಿದ್ಯಾವಿಷಯಕ ಪರಿಷತ್‌ ಸದಸ್ಯರು ಉಪಸ್ಥಿತರಿದ್ದರು.