Asianet Suvarna News Asianet Suvarna News

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಲು ಮನವಿ

ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಒತ್ತಾಯಿಸಿದರು.

Request to take action to fulfill the demand of guest lecturer snr
Author
First Published Dec 6, 2023, 8:37 AM IST

 ತುಮಕೂರು :  ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಒತ್ತಾಯಿಸಿದರು.

ಕಳೆದ 13 ದಿನಗಳಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಕಾಯಂ ಮಾಡಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಸಿ.ಆರ್.ಎಲ್ ತಿದ್ದುಪಡಿ ಮಾಡುವ ಮೂಲಕ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಬಹುದು ಎಂದು ತಿಳಿಸಿದ್ದರು. ಈಗ ಅವರದೇ ಸರ್ಕಾರದಲ್ಲಿ ಅವರೇ ಮುಖ್ಯಮಂತ್ರಿಯಾಗಿದ್ದಾರೆ, ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವ ಧೈರ್ಯ ಮಾಡಲಿ ಎಂದ ಅವರು ಉಪನ್ಯಾಸಕ ವೃಂದದವರು ಬೀದಿ ಬದಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಈ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ತುಮಕೂರು ವಿ.ವಿ. ಮಾಜಿ ಸಿಂಡಿಕೇಟ್ ಸದಸ್ಯ ಸುನೀಲ್ ಮಾತನಾಡಿ, ಅತಿಥಿ ಉಪನ್ಯಾಸಕರು ಎಂಬ ಕಾರಣಕ್ಕೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಇವರನ್ನು ನೋಂದಾಯಿಸಿಕೊಳ್ಳದೆ ವಂಚಿತರನ್ನಾಗಿ ಮಾಡಿದ್ದಾರೆ. ಅತಿಥಿ ಉಪನ್ಯಾಸಕರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಈ ವರ್ಷ ಅತಿಥಿ ಉಪನ್ಯಾಸಕರು ಎಂಬ ಕಾರಣಕ್ಕೆ ನಿಮ್ಮನ್ನು ಕೈಬಿಟ್ಟಿರುವುದು ಅಧಿಕಾರಿಗಳು ಮತದಾನದ ಹಕ್ಕಿನಿಂದ ನಿಮ್ಮನ್ನು ದೂರ ಇಟ್ಟಿದ್ದಾರೆ, ಇದು ಸರಿಯಲ್ಲ. ಅಧಿಕಾರಿಗಳು ಕೂಡಲೇ ಅತಿಥಿ ಉಪನ್ಯಾಸಕರಿಗೆ ಮತದಾನದ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು.

ವಕೀಲ ಶಿವಣ್ಣ ಮಾತನಾಡಿ, ನನಗೆ ಪಾಠ ಮಾಡಿದ ಉಪನ್ಯಾಸಕರು ಕೂಡ ಇಂದು ಬೀದಿ ಬದಿ ನಿಂತು ಪ್ರತಿಭಟನೆ ಮಾಡುತ್ತಿರುವುದನ್ನು ನೋಡಿದರೆ ಅತಿಥಿ ಉಪನ್ಯಾಸಕರ ಜೀವನದ ಪರಿಸ್ಥಿತಿ ನಮಗೆ ತಿಳಿಯುತ್ತದೆ. ಸರ್ಕಾರ ಉಪನ್ಯಾಸಕರನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ. ಬೇಡಿಕೆ ಈಡೇರುವವರೆಗೂ ನಿಮ್ಮ ಹೋರಾಟಕ್ಕೆ ಬೆಂಬಲ ಇದ್ದೇ ಇರುತ್ತದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಡಾ. ಧರ್ಮವೀರ್ ಮಾತನಾಡಿ, ಜಿಲ್ಲೆಯಿಂದ ಎಲ್ಲಾ ಅತಿಥಿ ಉಪನ್ಯಾಸಕರು ಬೆಳಗಾವಿಯಲ್ಲಿ ಅಧಿವೇಶನದ ಸುವರ್ಣಸೌಧದ ಮುಂದೆ ಅತಿಥಿ ಉಪನ್ಯಾಸಕರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರೈಲು ಮತ್ತು ಬಸ್ ಗಳಲ್ಲಿ ಟಿಕೆಟ್ ಕಾಯ್ದಿರಿಸಿಕೊಂಡು ಸಿದ್ಧತೆ ಮಾಡಿಕೊಂಡಿದ್ದು, ೩೦೦ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ತುಮಕೂರು ಜಿಲ್ಲೆಯಿಂದ ಬೆಳಗಾವಿ ವಿಧಾನಸೌಧದ ಮುಂದೆ ಪ್ರತಿಭಟನೆಗೆ ತೆರಳುತ್ತಿರುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಶಿವಣ್ಣ ತಿಮ್ಮಲಾಪುರ, ಎಂ.ಟಿ .ಮಲ್ಲಿಕಾರ್ಜುನ್, ಹೇಮಾವತಿ. ಶ್ವೇತ , ಶಂಕರ್ ಹಾರೋಗೆರೆ, ನಾಗೇಂದ್ರ, ಮನು, ಕಾಂತರಾಜ್, ಮಾದೇವಯ್ಯ, ಮಲ್ಲಿಕಾರ್ಜುನ್, ಜಯರಾಮ್, ಸೌಮ್ಯ, ಸವಿತಾ, ಡಾ. ಶಿವಯ್ಯ ಭಾಗಿಯಾಗಿದ್ದರು.

Follow Us:
Download App:
  • android
  • ios