Davanagere: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರಿಡಲು ಮನವಿ
ದಾವಣಗೆರೆ ನಗರದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕಾಂ. ಪಂಪಾಪತಿ ಅವರ ಹೆಸರಿಡಬೇಕು ಎಂದು ಜೈ ಕರುನಾಡು ವೇದಿಕೆ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ದಾವಣಗೆರೆ(ಡಿ.13): ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣಕ್ಕೆ ಕಾಂ.ಎಂ.ಪಂಪಾಪತಿ ಅವರ ಹೆಸರನ್ನು ನಾಮಕರಣ ಮಾಡಲು ಒತ್ತಾಯಿಸಿ ನಮ್ಮ ಜೈ ಕರುನಾಡ ವೇದಿಕೆ ಸಂಘಟನೆಯ ಕಾರ್ಯಕರ್ತರು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪಿ.ಬಿ. ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೂ ಮೆರವಣಿಗೆ ಮೂಲಕ ಆಗಮಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಟಿ. ಮಂಜುನಾಥಗೌಡ ಮಾತನಾಡಿ ಸರಿಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಮಿಕರ, ದಮನಿತ ಸಮುದಾಯದ ಪ್ರಾಮಾಣಿಕ ನೇತಾರರಾಗಿದ್ದ ಕಾಂ. ಪಂಪಾಪತಿಯವರು ಶಾಸಕರಾದ ಸಂದರ್ಭದಲ್ಲಿ ಪ್ರಸ್ತುತ ನೂತನವಾಗಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ಅಂದು ಮಂಜೂರಾತಿ ಪಡೆದು ನಿರ್ಮಾಣವಾಗಿತ್ತು ಎಂಬುದು ಸ್ಮರಣೀಯ.
Ground Report : ದಾವಣಗೆರೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಫೈಟ್: ಟಿಕೆಟ್ ಕಸರತ್ತು ಜೋರು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ವಂತ ಡಿಪೋ ಇಲ್ಲದ ಕಾಲದಲ್ಲಿ ತಮ್ಮ ಅವಿರತ ಹೋರಾಟದಿಂದ ಡಿಪೋ ಮಂಜೂರಾತಿಗೆ ಪ್ರಯತ್ನ ನಡೆಸಿದ್ದರು. ಜೊಪತೆಗೆ ಸ್ಥಳೀಯವಾಗಿ ಬಸ್ ನಿಲ್ದಾಣದ ಕೊರತೆ ನೀಗಿಸಲು ಈಗಿನ ಸ್ಥಳದಲ್ಲಿ ಆ ಕಾಲಕ್ಕೆ ಅನ್ವಯವಾಗುವಂತಹ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಕೂಡ ಪಂಪಾಪತಿಯವರು ಶಾಸಕರಾಗಿದ್ದ ಅವಧಿಯಲ್ಲಿ. ದಿನೇ ದಿನೇ ಪ್ರಗತಿಯನ್ನು ಹೊಂದುತ್ತಿದ್ದ ನಗರದ ಬೆಳವಣಿಗೆಯನ್ನು ಗಮನಿಸಿ ನಗರ ಸಂಚಾರಿ ಬಸ್ಸುಗಳಿಗಾಗಿ, ಪ್ರತ್ಯೇಕ ಬಸ್ ನಿಲ್ದಾಣಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದರು. ದಾವಣಗೆರೆ ನಗರಕ್ಕೆ ನಗರ ಸಂಚಾರಿ ಬಸ್ ಪ್ರಾರಂಭಿಸಲು 'ಆಮರಣ ಉಪವಾಸ ಸತ್ಯಾಗ್ರಹ ನಡೆಸಿದ್ದರು. ನಿರಂತರ ಹೋರಾಟದ ಫಲವಾಗಿ ಸರ್ಕಾರವು ನಗರ ಸಾರಿಗೆ ಬಸ್ ಸೇವೆ ಒದಗಿಸಲು ವ್ಯವಸ್ಥೆ ಮಾಡಿದ್ದರು. ಇದೀಗ ಬಸ್ ನಿಲ್ದಾಣಕ್ಕೆ ಬೇರೆಯವರ ಹೆಸರು ಇಡಲು ರಾಜಕಾರಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಂ ಪಂಪಾಪತಿ ಮರೆತು, ಬೇರೊಬ್ಬರ ಹೆಸರಿಡುವುದು ಸಮಂಜಸವಲ್ಲ ಎಂದು ಪ್ರತಿಭಟಕಾರರು ಒತ್ತಾಯಿಸಿದ್ದಾರೆ.
ಈಗ ನಿರ್ಮಾಣವಾಗಿರುವ ನೂತನ ಬಸ್ ನಿಲ್ದಾಣಕ್ಕೆ 'ಕಾಂ.ಪಂಪಾವತಿ ಬಸ್ ನಿಲ್ದಾಣ" ಎಂಬುದಾಗಿ ನಾಮಕರಣ ಮಾಡಿ ಅವರ ನೈಜ ಸಮಾಜ ಸೇವೆಯನ್ನು ಗೌರವ ಪೂರ್ವಕವಾಗಿ ಸ್ಮರಿಸಬೇಕಿದೆ. ಸರ್ಕಾರ ಈ ವಿಚಾರದಲ್ಲಿ ಸೂಕ್ತ ನಿರ್ಣಯಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಿ. ಅಲ್ಬರ್ಟ್ ಅಂಟೋನಿ, ಮಹಮದ್, ಆನಂದ್, ಗಿರೀಶ್, ಮಮತಾ, ರೋಹಿತ್ ಮತ್ತಿತರರಿದ್ದರು.