ಹೊನ್ನಾಳಿ [ಡಿ.09] : ನಮ್ಮೆಲ್ಲರ ಹಿರಿಯ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಸಚಿವ ಸ್ಥಾನ ಕೊಡಬೇಕೆಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರನ್ನು ಅಗ್ರಹಿಸುತ್ತೇವೆ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದರು. 

ಶಾಸಕ ಎಂ.ಪಿ.ರೇಣುಕಾಚಾರ್ಯ ನಿವಾಸಕ್ಕೆ ಆಗಮಿಸಿದ ವೇಳೆ ಸುದ್ದಿಗಾರರ ಪ್ರಶ್ನೆಗೆ ಸುರಪುರ ಶಾಸಕರು ಈ ರೀತಿ ಅಭಿಪ್ರಾಯಿಸಿದರು.

ಕಳೆದ ಬಾರಿಯೇ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂದು ಒತ್ತಾಯ ಮಾಡಿದ್ದೇವು. ಆದರೆ ಮುಖ್ಯಮಂತ್ರಿಗಳಿಗೆ ಒತ್ತಡ ಇದ್ದುದರಿಂದ ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಗಲಿಲ್ಲ. ಈ ಬಾರಿ ಕೊಟ್ಟೆಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದ ಅವರು, ನಮ್ಮೆಲ್ಲರ ಒತ್ತಾಸೆ ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಗಬೇಕೆಂಬುದು ಬಿಟ್ಟರೆ ಬೇರೆ ಏನು ಇಲ್ಲ ಎಂದು ತಿಳಿಸಿದರು.

ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೆ ರೆಸಾರ್ಟ್‌ ರಾಜಕಾರಣ ಮಾಡುತ್ತಿರಾ ಎಂಬ ಪ್ರಶ್ನೆಗೆ, ಅಂತಹ ಸ್ಥಿತಿ ಏನೂ ನಿರ್ಮಾಣವಾಗುವುದಿಲ್ಲ ಎಂದರಲ್ಲದೇ, ಅನರ್ಹರಿಗೆ ಕೊಟ್ಟನಂತರ ರೇಣುಕಾಚಾರ್ಯಗೆ ಸಚಿವ ಸ್ಥಾನ ನೀಡಲಿ ಎಂದರು.

ಮೊದಲು ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಕೊಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಅವರ ಮಾತಿನಂತೆ 7.5 ಮೀಸಲಾತಿ ವಾಲ್ಮೀಕಿ ಸಮುದಾಯಕ್ಕೆ ನೀಡಲಿ, ಆಗ ನನಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕಷ್ಟೇ ಸಂತಸವಾಗುತ್ತದೆ ಎಂತಲೂ ಹೇಳಿದರು.

ಬೈ ಎಲೆಕ್ಷನ್ ರಿಸಲ್ಟ್: ಹಾರಿದ ಕಾಗೆ, ಮತ್ತೆ 'ಶ್ರೀಮಂತ'...

ಇದೇ ವೇಳೆ ಶಾಸಕ ರೇಣುಕಾಚಾರ್ಯ ಮಾತನಾಡಿ, ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭದಲ್ಲಿಯೇ ಶಾಸಕ ರಾಜುಗೌಡರಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ನಾವು ಕೂಡಾ ರಾಜುಗೌಡಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದೇವು. ಆದರೆ ಕಾರಣಾಂತರಿಂದ ಸಚಿವ ಸ್ಥಾನ ನೀಡಲಾಗಲಿಲ್ಲ ಎಂದ ಅವರು, ಚುನಾವಣೆಯಲ್ಲಿ ಸೋತವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುತ್ತಾರೆ ಎಂದರೆ ಪಕ್ಷ ಸಂಘಟನೆ ಮಾಡುವ ಶಾಸಕರು ಏಕೆ ಸಚಿವರಾಗಬಾರದು ಎಂದು ಉಪ ಮುಖ್ಯಮಂತ್ರಿ ಸವದಿಯನ್ನು ಪರೋಕ್ಷವಾಗಿ ಉದಾಹರಿಸಿದರು.