ಚಿಕ್ಕಮಗಳೂರು: ನೆರೆ ಸಂತ್ರಸ್ತರ ಮನೆಗಳಿಗೆ ಹಾಸಿಗೆ, ಸ್ಟೌ, ಬಟ್ಟೆ
ಚಿಕ್ಕಮಗಳೂರಿನಲ್ಲಿ ನೆರೆ ಸಂತ್ರಸ್ತರಿಗೆ ಹಾಸಿಗೆ, ಬಟ್ಟೆ, ಗ್ಯಾಸ್ ಸ್ಟೌಗಳನ್ನು ವಿತರಿಸಲಾಗಿದೆ. ಸಂತ್ರಸ್ತರ ಮನೆಗೆ ಅಗತ್ಯವಾಗಿ ಬೇಕಿದ್ದ ವಿವಿಧ ಪರಿಕರಗಳು, ಬಟ್ಟೆಮತ್ತಿತರರ ವಸ್ತುಗಳನ್ನು ಅವರ ಮನೆಗೆ ಬಾಗಿಲಿಗೆ ನೇರವಾಗಿ ತಲುಪಿಸಲಾಗಿದೆ. ಸಂತ್ರಸ್ತರಿಗೆ ನೀಡಲು ತಂದಿದ್ದ ಸಾಮಗ್ರಿಗಳನ್ನು ಮೂಡಿಗೆರೆ ಭಾಗಕ್ಕೂ ಕಳಿಸಿಕೊಡಲಾಯಿತು.
ಚಿಕ್ಕಮಗಳೂರು(ಆ.20): ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನೆರೆ ಹಾವಳಿಗೆ ತುತ್ತಾಗಿ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ‘ಮಾಲ್ಗುಡಿ ಡೇಸ್’ ಚಿತ್ರ ತಂಡ, ಬೆಂಗಳೂರಿನ ಹೆಲ್ಪಿಂಗ್ ಹ್ಯಾಂಡ್, ರಾವ್ ಅಂಡ್ ಕಂಪೆನಿ, ಎ.ಬಿ. ಪ್ರಾಪರ್ಟಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಎರಡನೇ ಹಂತದಲ್ಲಿ ಹಾಸಿಗೆ, ಗ್ಯಾಸ್ ಸ್ಟೌ, ಬೆಡ್‌ಶೀಟ್, ಬ್ಲಾಂಕೆಟ್ ಸೇರಿದಂತೆ ವಿವಿಧ ಪರಿಕರಗಳನ್ನು ವಿತರಿಸಲಾಯಿತು.
ಬಾಳೆಹೊನ್ನೂರಿನ ಪತ್ರಕರ್ತರ ಎಚ್.ಎನ್.ಸತೀಶ್ ಜೈನ್ ಹಾಗೂ ಬಜರಂಗದಳದ ಸಂದೀಪ್ ಶೆಟ್ಟಿ, ಲೋಹಿತ್ ಶೆಟ್ಟಿಅವರ ಸಂಯೋಜನೆಯಲ್ಲಿ ಸಂತ್ರಸ್ತರಿಗೆ ಅಗತ್ಯವಾದ ಬಟ್ಟೆ, ಬರೆಗಳನ್ನು ಮೊದಲ ಹಂತದಲ್ಲಿ ಇತ್ತೀಚೆಗೆ ತಲುಪಿಸಲಾಗಿತ್ತು. ಎರಡನೇ ಹಂತದಲ್ಲಿಯೂ ಸಂತ್ರಸ್ತರ ಮನೆಗೆ ಅಗತ್ಯವಾಗಿ ಬೇಕಿದ್ದ ವಿವಿಧ ಪರಿಕರಗಳು, ಬಟ್ಟೆಮತ್ತಿತರರ ವಸ್ತುಗಳನ್ನು ಅವರ ಮನೆಗೆ ಬಾಗಿಲಿಗೆ ನೇರವಾಗಿ ತಲುಪಿಸಿದ್ದಾರೆ.
ಬೆಂಗಳೂರಿನಲ್ಲಿರುವ ಶೃಂಗೇರಿ ಮೂಲದ ದೀಪಾಶೆಟ್ಟಿನೇತೃತ್ವದ ಹೆಲ್ಪಿಂಗ್ ಹ್ಯಾಂಡ್ ತಂಡದಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಸೀರೆ, ಪಂಚೆ, ಶರ್ಟ್, ನೈಟಿ, ಬೆಡ್‌ಶೀಟ್ ಸೇರಿದಂತೆ ವಿವಿಧ ಬಟ್ಟೆಗಳನ್ನು ನೀಡಲಾಗಿದೆ.
300 ಹಾಸಿಗೆ ವಿತರಣೆ:
ಬೆಂಗಳೂರಿನಲ್ಲಿರುವ ಉದ್ಯಮಿ ಶೃಂಗೇರಿ ಮೂಲದ ಸ್ಮಿತಾ ವಿಜಯನಾಗೇಶ್ ಅವರ ರಾವ್ ಅಂಡ್ ಕಂಪೆನಿ ವತಿಯಿಂದ 1 ಲಕ್ಷ ಮೌಲ್ಯದ 80 ಗ್ಯಾಸ್ ಸ್ಟೌ, ಬೆಂಗಳೂರಿನ ಉಮಾನಾಥ್ ನೇತೃತ್ವದ ಎ.ಬಿ. ಪ್ರಾಪರ್ಟಿ ವತಿಯಿಂದ ಬಟ್ಟೆ, ಔಷಧ, ಬೆಡ್‌ಶೀಟ್, ಬ್ಲಾಂಕೆಟ್ ಸೇರಿದಂತೆ ವಿವಿಧ ಪರಿಕರಗಳು, ‘ಮಾಲ್ಗುಡಿ ಡೇಸ್’ ಚಿತ್ರ ತಂಡದ ವತಿಯಿಂದ 300 ಹಾಸಿಗೆ, ಬಟ್ಟೆಸೇರಿದಂತೆ ಲಕ್ಷಾಂತರ ಮೌಲ್ಯದ ಪರಿಕರಗಳನ್ನು ಸಂತ್ರಸ್ತರಿಗೆ ನೀಡಲಾಯಿತು.
10ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಾಗ್ರಿ:
ಸಂತ್ರಸ್ತರಿಗೆ ಪರಿಕರಗಳನ್ನು ವಿತರಿಸಿದ ಸಂದರ್ಭ ‘ಮಾಲ್ಗುಡಿ ಡೇಸ್’ ಚಿತ್ರತಂಡದ ಕಾರ್ಯಕಾರಿ ನಿರ್ಮಾಪಕ ರವಿಶಂಕರ್ ಪೈ ಸುದ್ದಿಗಾರರೊಂದಿಗೆ ಮಾತನಾಡಿ, 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ವಿತರಿಸಿದ್ದು, ನೆರೆ ಹಾವಳಿಗೆ ತುತ್ತಾದವರು ಹೊಸ ಬದುಕು ಕಟ್ಟಿಕೊಳ್ಳಬೇಕು ಎಂಬ ಆಶಯ ನಮ್ಮದಾಗಿದೆ. ನಮ್ಮ ಚಿತ್ರತಂಡದ ವತಿಯಿಂದ ಈಗಾಗಲೇ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ನಿಧಿಗೆ 6 ಲಕ್ಷ ಪರಿಹಾರ ನಿಧಿಯನ್ನು ಸಹ ನೀಡಲಾಗಿದೆ. ಪ್ರತಿ ವರ್ಷವೂ ನಮ್ಮ ತಂಡ ಟ್ರಸ್ಟ್ ಮೂಲಕ ಇಂತಹ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ ಎಂದರು.
ಮೂಡಿಗೆರೆ ಭಾಗಕ್ಕೂ ಸಾಮಾಗ್ರಿ ರವಾನೆ:
ಸಂತ್ರಸ್ತರಿಗೆ ಪರಿಕರಗಳ ವಿತರಣೆಗೆ ಜಿಲ್ಲಾ ಪತ್ರಕರ್ತರ ಸಂಘ, ತಾಲೂಕು ಪತ್ರಕರ್ತರ ಸಂಘ, ಬಜರಂಗದಳ, ವಿಶ್ವ ಹಿಂದೂ ಪರಿಷತ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸ್ಥಳೀಯ ಗ್ರಾಪಂ ಸೇರಿದಂತೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸಹಕಾರ ನೀಡಿದವು. ಸಂತ್ರಸ್ತರಿಗೆ ನೀಡಲು ತಂದಿದ್ದ ಸಾಮಗ್ರಿಗಳನ್ನು ಮೂಡಿಗೆರೆ ಭಾಗಕ್ಕೂ ಕಳಿಸಿಕೊಡಲಾಯಿತು.
‘ಮಾಲ್ಗುಡಿ ಡೇಸ್’ ಚಿತ್ರ ತಂಡದ ನಿರ್ದೇಶಕ ಕಿಶೋರ್ ಮೂಡಬಿದ್ರೆ, ಸದಸ್ಯ ರಘುವೀರ್ ಉಡುಪಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್, ಕಾರ್ಯದರ್ಶಿ ವಿ.ಜೆ.ರಾಜೇಶ್, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಎ. ಶೇಖಬ್ಬ, ಕುಮಾರ್, ಗ್ರಾಪಂ ಅಧ್ಯಕ್ಷ ಮಹಮ್ಮದ್ ಹನೀಫ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಶಶಾಂಕ್ ಹೇರೂರು, ರಮೇಶ್ ಗಡಿಗೇಶ್ವರ, ಸಂದೀಪ್ ಶೆಟ್ಟಿ, ಸಂತೋಷ್ ಶೆಟ್ಟಿ, ಮಹೇಶ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ತುಪ್ಪೂರು, ರೋಟರಿ ಅಧ್ಯಕ್ಷ ಯೋಗೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ್ ಜೈನ್, ನಿಯೋಜಿತ ಅಧ್ಯಕ್ಷ ಶೆಟ್ಟಿಕೊಪ್ಪ ಮಹೇಶ್, ಹಾತೂರು ಪ್ರಭಾಕರ್, ಪುರುಷೋತ್ತಮ್, ಪ್ರವೀಣ್ ಓಂಕಾರ್, ನಾಗರಾಜ್ ಭಟ್ ಮತ್ತಿತರರು ಹಾಜರಿದ್ದರು.