ಮಂಡ್ಯ [ಜು.16]: ಒಣಗುತ್ತಿರುವ ಕಬ್ಬು ಮತ್ತು ಇತರೆ ಬೆಳೆಗಳ ರಕ್ಷಣೆಗಾಗಿ ಕೇಂದ್ರದ ನೀರು ನಿರ್ವಹಣಾ ಮಂಡಳಿ ಆದೇಶದಂತೆ ಜು.16ರ ರಾತ್ರಿಯಿಂದ ಕೆಆರ್‌ಎಸ್‌ ಅಣೆಕಟ್ಟೆಯಿಂದ ಮಂಡ್ಯ ಜಿಲ್ಲೆಯ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಕಾವೇರಿ ನೀರು ಸಲಹಾ ಸಮಿತಿ ಸಭೆಯಲ್ಲಿ ಬೆಳೆಗಳಿಗೆ ನೀರು ಹರಿಸಲು ಅನುಮತಿ ನೀಡಲಾಗಿದೆ. 10 ದಿನ ನಾಲೆಯಲ್ಲಿ ನೀರು ಹರಿಯಲಿದೆ. ಜತೆಗೆ ಮುಂದಿನ ದಿನಗಳಲ್ಲಿ ಒಳಹರಿವಿನ ಪ್ರಮಾಣ ಗಮನಿಸಿ ನೀರು ಹರಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ತಿಳಿದುಬಂದಿದೆ. 

ಬೆಳೆಗಳನ್ನು ಉಳಿಸಿಕೊಳ್ಳಲು ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಕಳೆದ ಒಂದು ತಿಂಗಳಿಂದ ನಿರಂತರ ಹೋರಾಟ ನಡೆಸಿದ್ದರು. ಅಹೋರಾತ್ರಿ ಧರಣಿ, ಕೆಆರ್‌ಎಸ್‌ ಮುತ್ತಿಗೆ, ರಸ್ತೆ ತಡೆ, ನೀರಾವರಿ ಕಚೇರಿ ಮುತ್ತಿಗೆಯಂತಹ ಹೋರಾಟಗಳನ್ನು ಮಾಡಿದ್ದರು. ಇದೀಗ ನೀರು ಹರಿಸಲು ತೀರ್ಮಾನ ಕೈಗೊಂಡಿರುವುದರಿಂದ ರೈತರ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ.