ಕೊಪ್ಪಳದಲ್ಲಿ ಮಹಿ​ಳೆ ಸಾವು: ವೈದ್ಯರ ವಿರುದ್ಧ ಪ್ರತಿಭಟನೆ, ಆಸ್ಪತ್ರೆ ಗಾಜು ಪುಡಿ​ಪು​ಡಿ​

ರಾತ್ರಿಯವರೆಗೂ ಮುಂದುವರಿದ ಪ್ರತಿಭಟನೆ| ಮೃತ ದೇಹ ಪಡೆದುಕೊಳ್ಳಲು ನಿರಾಕರಣೆ| ಮಹಿಳೆಯ ಸಾವಿಗೆ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯವೇ ಕಾರಣ| ಕೊಪ್ಪಳ ನಗರದ ಖುಷಿ ಆಸ್ಪತ್ರೆಯಲ್ಲಿ ನಡೆದ ಘಟನೆ| 

Relatives Protest in front of the hospital for Doctors Negligency in Koppal

ಕೊಪ್ಪಳ(ಸೆ.14):ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯೋರ್ವಳು ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಅವರ ಆಕ್ರೋಶಕ್ಕೆ ಆಸ್ಪತ್ರೆಯ ಗಾಜು ಪುಡಿಪುಡಿಯಾಗಿವೆ.

ನಗರದ ರೇಣುಕಾ ಗುದ್ಲಿ (40) ಮೃತಪಟ್ಟ ದುರ್ದೈವಿ. ನಮಗೆ ನ್ಯಾಯ ಸಿಗುವ ತನಕವೂ ಇಲ್ಲಿಂದ ಕದಲುವುದಿಲ್ಲ, ಮೃತದೇಹ ತೆಗೆದುಕೊಂಡು ಹೋಗುವುದಿಲ್ಲ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮಗೆ ನ್ಯಾಯ ಒದಗಿಸಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಕರು ಖುಷಿ ಆಸ್ಪತ್ರೆಯ ಎದುರು ತಡ ರಾತ್ರಿಯ ವರೆಗೂ ಪ್ರತಿಭಟನೆ ನಡೆಸುತ್ತಿದ್ದಾರೆ.

ಆಗಿದ್ದೇನು?:

ತೀವ್ರ ಅಸ್ವಸ್ಥಗೊಂಡು ಸುಸ್ತಾಗಿದ್ದ ರೇಣುಕಾ ಗುದ್ಲಿ ಅವರನ್ನು ಖುಷಿ ಆಸ್ಪತ್ರೆಗೆ ಕರೆ ತರಲಾಗುತ್ತದೆ. ಸಾಮಾನ್ಯ ವಾರ್ಡಿನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತುರ್ತು ನಿಗಾ ಘಟಕದಲ್ಲಿ ದಾಖಲು ಮಾಡಲಾಗುತ್ತದೆ. ಅವರ ದೇಹದ ತಾಪಮಾನ, ಹೃದಯಬಡಿತ ತೋರಿಸುವ ಯಂತ್ರ ಬ್ಯಾಟರಿ ಲೋ ಆಗಿ ಬಂದಾಗಿದೆ. ಇದನ್ನು ಆಸ್ಪತ್ರೆಯವರ ಗಮನಕ್ಕೆ ತಂದರೂ ಅವರು ಕ್ಯಾರೆ ಎನ್ನಲಿಲ್ಲ ಮತ್ತು ಬಂದು ನೋಡಲಿಲ್ಲ ಎನ್ನುವುದು ಸಂಬಂಧಿಕರ ಆರೋಪ.

Relatives Protest in front of the hospital for Doctors Negligency in Koppal

'ಬಿಜೆಪಿಯಲ್ಲಿ ದುಡಿದವರಿಗೆ ಒಳ್ಳೆಯ ಹುದ್ದೆ ಖಚಿ​ತ'

ನಾವೇ ಸ್ವತಃ ಕರೆದರೂ ಆಸ್ಪತ್ರೆಯಲ್ಲಿಯೇ ಇದ್ದ ವೈದ್ಯರು ಬಂದು ನೋಡಲಿಲ್ಲ. ಕೊನೆಗೆ ಆಸ್ಪತ್ರೆಯಲ್ಲಿನ ಗ್ಲಾಸ್‌ ಒಡೆದ ಮೇಲೆಯೇ ಅವರು ಬಂದು ನೋಡಿದರು. ಬಂದು ನೋಡಿಯೂ ನಮಗೆ ಏನೂ ಹೇಳದೆ ಹೊರಟು ಹೋದರು. ಆ ವೇಳೆಗಾಗಲೇ ಚಿಕಿತ್ಸೆ ಸಿಗದೆ ಆಕೆ ಸಾವನ್ನಪ್ಪಿದ್ದಳು. ಇದು ವೈದ್ಯರ ನಿರ್ಲಕ್ಷ್ಯದಿಂದಲೇ ಆಗಿರುವುದರಿಂದ ನಾವು ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಮೃತಳ ಸಂಬಂಧಿಕರು ಆಸ್ಪತ್ರೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಆಸ್ಪತ್ರೆಯಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಮೃತಳ ಸಂಬಂಧಿಕರು ಜಿಲ್ಲಾಧಿಕಾರಿ ಬರಬೇಕು ಎಂದು ಬಿಗಿಪಟ್ಟು ಹಿಡಿದು ಆಸ್ಪತ್ರೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಪ್ಪೇನು ಆಗಿಲ್ಲ:

ಆಸ್ಪತ್ರೆಯವರು ಮಾಹಿತಿ ನೀಡಿ, ನಮ್ಮದೇನು ತಪ್ಪು ಆಗಿಲ್ಲ. ನಾವು ಬಂದ ತಕ್ಷಣ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದೇವೆ. ಹೆಚ್ಚಿನ ಚಿಕಿತ್ಸೆಗಾಗಿ ತೀರ್ವ ನಿಗಾ ಘಟಕಕ್ಕೆ ವರ್ಗಾಯಿಸಿದ್ದೇವೆ. ಬ್ಯಾಟರಿ ಲೋ ಆಗಿದ್ದರೂ ಯಂತ್ರ ಕಾರ್ಯ ನಿರ್ವಹಿಸಿದೆ. ನಂತರ ಅದನ್ನು ಸರಿ ಮಾಡಲಾಗಿದೆ. ರಕ್ತದ ಒತ್ತಡ(ಬಿಪಿ) ಕುಸಿದಿದ್ದರಿಂದ ಅವರು ಸಾವನ್ನಪ್ಪಿದ್ದಾರೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಎನ್ನುವುದು ಆಸ್ಪತ್ರೆಯವರ ವಿವರಣೆ.

ನಮ್ಮ ತಾಯಿಯವರ ನಿಧನಕ್ಕೆ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯವೇ ಕಾರಣ. ಇದಕ್ಕೆ ಶಿಕ್ಷೆಯಾಗಲೇಬೇಕು. ಆಸ್ಪತ್ರೆಯಲ್ಲಿ ತೀವ್ರ ಅವ್ಯವ​ಸ್ಥೆ ಇದ್ದು, ಸರಿಪಡಿಸಲು ನಮ್ಮ ಹೋರಾಟ.

ತಿಮ್ಮೇಶ ಮೃತಳ ಪುತ್ರ

ನಮ್ಮದೇನೂ ತಪ್ಪೇ ಇಲ್ಲ. ಆದರೂ ಈ ರೀತಿ ಗಲಾಟೆ ಮಾಡುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿನ ಇತರೆ ರೋಗಿಗಗಳಿಗೆ ಸಮಸ್ಯೆಯಾಗುತ್ತದೆ. ಅಗತ್ಯ ಚಿಕಿತ್ಸೆಯನ್ನು ನೀಡಿದ್ದರೂ ಬಿಪಿ ಕುಸಿದಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಖುಷಿ ಆಸ್ಪತ್ರೆಯ ವೈದ್ಯ ಡಾ. ಮಹೇಂದ್ರ ಅವರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios