ತಿರಸ್ಕೃತಗೊಂಡ ಅರ್ಜಿದಾರರಿಗೂ ಬಗರ್‌ ಹುಕುಂ ಹಕ್ಕು ಪತ್ರ

ಭೂಮಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಅರ್ಜಿದಾರರಿಗೂ ಹಕ್ಕುಪತ್ರ ನೀಡಬೇಕು, ಪೋಡಿ-ದುರಸ್ತಿ ಹಾಗೂ ಚೆಕ್‌ಬಂದಿ ಮಾಡಿಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಬಹುಜನ ಸಮಾಜ ಪಾರ್ಟಿ ಮುಖಂಡರು ಆಗ್ರಹಿಸಿದ್ದಾರೆ. 

Rejected Applicants Also Should Get land Says BJP Leader AND Shivappa

ಶಿವಮೊಗ್ಗ [ಸೆ.16]:   ಜಿಲ್ಲೆಯಲ್ಲಿ ಭೂಮಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಅರ್ಜಿದಾರರಿಗೂ ಹಕ್ಕುಪತ್ರ ನೀಡಬೇಕು, ಪೋಡಿ-ದುರಸ್ತಿ ಹಾಗೂ ಚೆಕ್‌ಬಂದಿ ಮಾಡಿಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಎ. ಡಿ. ಶಿವಪ್ಪ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮೂನೆ 50, 53 ಹಾಗೂ 57 ರ ಅಡಿಯಲ್ಲಿ ಜಿಲ್ಲೆಯಲ್ಲಿ ಭೂಮಿ ಹಕ್ಕುಪತ್ರಕ್ಕಾಗಿ ಸಲ್ಲಿಸಲಾಗಿದ್ದ ಅರ್ಜಿಗಳಲ್ಲಿ 2,14,962 ಅರ್ಜಿ ತಿರಸ್ಕೃತಗೊಂಡಿವೆ. ತಕ್ಷಣವೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕನಿಷ್ಠ 5 ಎಕರೆಯೊಳಗಿನ ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಒತ್ತಾಯಿಸಿದರು.

ಜಿಲ್ಲೆಯ ಕಂದಾಯ ಭೂಮಿಯಲ್ಲಿ ಬಗರ್‌ ಹುಕುಂ ಸಾಗುವಳಿ ಮಾಡಿದ ಸಾವಿರಾರು ಸಾಗುವಳಿ ರೈತರಿಗೆ 1979-80ರಲ್ಲಿ ಹಕ್ಕುಪತ್ರ ನೀಡಲಾಗಿದೆ. ಆದರೆ ಅರಣ್ಯ ಭೂಮಿ ಎಂದು ಇಲ್ಲಿಯವರೆಗೂ ಪೋಡಿ-ದುರಸ್ತಿ ಮಾಡದೇ ಅಲೆದಾಡಿಸಲಾಗುತ್ತಿದೆ. ಆದ್ದರಿಂದ ಹಕ್ಕುಪತ್ರ ಇದ್ದ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಹುನ್ನಾರವನ್ನು ತಕ್ಷಣವೇ ನಿಲ್ಲಿಸಿ ಜಮೀನಿನ ಪೋಡಿ-ದುರಸ್ತಿ ಮಾಡಿಕೊಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅರಣ್ಯ ಹಕ್ಕು ಅಧಿನಿಯಮ-2005ರ ಕಾಯ್ದೆಯಡಿ ಅರಣ್ಯವಾಸಿಗಳಾದ ಆದಿವಾಸಿ, ಬುಡಕಟ್ಟು ಜನಾಂಗದವರು ಜಮೀನು ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಅರ್ಜಿ ಸಲ್ಲಿಸಿ ತಿರಸ್ಕರಿಸಿದ 50,648 ಅರ್ಜಿ ಹಾಗೂ ಬಾಕಿ ಉಳಿದ 32,364 ಅರ್ಜಿಗಳನ್ನು ತ್ವರಿತವಾಗಿ ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ನಿವೇಶನ ರಹಿತರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ, ಸಕ್ರಮಕ್ಕಾಗಿ ಸಲ್ಲಿಸಿದ್ದ ಒಟ್ಟು 75,020 ಅರ್ಜಿಗಳನ್ನು ಸಕ್ರಮ ಮಾಡಿದ್ದು, ಉಳಿದ 18,387 ಅರ್ಜಿಗಳು ಸಕ್ರಮಕ್ಕೆ ಬಾಕಿ ಉಳಿದಿವೆ. ಇವುಗಳನ್ನು ಸಕ್ರಮ ಮಾಡಿ ಮನೆ ಹಕ್ಕುಪತ್ರ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದರು.

ಗೋಷ್ಠಿಯಲ್ಲಿ ಲೋಕೇಶ್‌ ತಮ್ಮಡಿಹಳ್ಳಿ, ಲಕ್ಷ್ಮೀಪತಿ, ಜಿ. ಸಂಗಪ್ಪ, ಡಿ. ರವಿ, ಮಾರುತಿ, ಮಂಜುನಾಥ್‌, ಶಿವರುದ್ರಪ್ಪ, ಹೆಚ್‌. ನರಸಪ್ಪ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios