ಜೀತದಾಳುಗಳ ಬಿಡುಗಡೆ ಪತ್ರ ನೀಡಿ ಪುನರ್ವಸತಿ ಕಲ್ಪಿಸಿ: ಸಾವಿತ್ರಮ್ಮ
ಜೀತದಾಳುಗಳ ಬಿಡುಗಡೆ ಪತ್ರ ಹಾಗೂ ಸಮಗ್ರ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ರೂಟ್ಸ್ ಫಾರ್ ಫ್ರೀಡಂ ಸಂಘಟನೆ ವತಿಯಿಂದ ನಗರದ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಲ್.ಮುರಳೀಧರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶಿರಾ : ಜೀತದಾಳುಗಳ ಬಿಡುಗಡೆ ಪತ್ರ ಹಾಗೂ ಸಮಗ್ರ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ರೂಟ್ಸ್ ಫಾರ್ ಫ್ರೀಡಂ ಸಂಘಟನೆ ವತಿಯಿಂದ ನಗರದ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಲ್.ಮುರಳೀಧರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘಟನೆಯ ರಾಜ್ಯ ಸಂಚಾಲಕಿ ಡಾ.ಜೀವಿಕ ರತ್ನಮ್ಮ ಮಾತನಾಡಿ, ರಾಜ್ಯದ್ಯಂತ ಜೀತ ಪದ್ಧತಿ ಬಗ್ಗೆ, ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಹಕ್ಕೊತ್ತಾಯಗಳಾದ 2018-19 ನೇ ಸಾಲಿನಲ್ಲಿ ತನಿಖಾ ತಂಡಗಳ ಮೂಲಕ ತನಿಖೆ ನಡೆಸಿ 1 ರಿಂದ 9 ಫಾರಂ ಭರ್ತಿ ಮಾಡಿರುವ 85 ಮಂದಿ ಜೀತದಾಳುಗಳಿಗೆ ಅತಿ ಶೀಘ್ರವಾಗಿ ಬಿಡುಗಡೆ ಪತ್ರ ಕೊಡಬೇಕು. 2023ರಲ್ಲಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿರುವ ೪೭ ಮಂದಿ ಜೀತದಾಳುಗಳನ್ನು ತನಿಖಾ ತಂಡದ ಮೂಲಕ ತನಿಖೆ ನಡೆಸಿ ಬಿಡುಗಡೆ ಪತ್ರ ನೀಡಬೇಕು. 2021-22 ನೇ ಸಾಲಿನಲ್ಲಿ ಬಿಡುಗಡೆ ಪತ್ರ ನೀಡಿರುವ 94 ಮಂದಿ ಜೀತ ವಿಮುಕ್ತರಿಗೆ ತಾತ್ಕಾಲಿಕ ಪರಿಹಾರ ಮತ್ತು ಪುನರ್ವಸತಿ ಕಲ್ಪಸಬೇಕು. ರೂಟ್ಸ್ ಫಾರ್ ಸಂಘಟನೆ ವತಿಯಿಂದ ರಚನೆ ಮಾಡಿರುವ ಮಹಿಳಾ ಸಂಘಗಳಿಗೆ ನಿಗಮಗಳಿಂದ ಸಹಾಯಧನ ಹಾಗೂ ಎನ್.ಆರ್.ಎಲ್.ಎಂ. ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು. ಬಿಡುಗಡೆಗೊಂಡ ೯೪ ಮಂದಿ ಜೀತ ವಿಮುಕ್ತರಿಗೆ ಮನೆ ಮತ್ತು ನಿವೇಶನ ಕಲ್ಪಿಸಿಕೊಡಬೇಕು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ಜೀತ ವಿಮುಕ್ತರಿಗೆ ಮೊದಲ ಅದ್ಯತೆಯಲ್ಲಿ ಸೌಲಭ್ಯ ಕಲ್ಪಿಸಬೇಕು. ಜೀತ ವಿಮುಕ್ತಿ ಕುಟುಂಬದ ಮಕ್ಕಳಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ವಸತಿ ಶಾಲೆ, ಇಂದಿರಾ ಗಾಂಧಿ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಮೊದಲ ಅದ್ಯತೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಬಿಡುಗಡೆಗೊಂಡ ಜೀತದಾಳುಗಳಿಗೆ ತಲಾ ೨ ಎಕರೆ ಭೂಮಿ ಮೂಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೂಟ್ ಫಾರ್ ಫ್ರೀಡಂ ಸಂಘಟನೆಯ ಶೀಡ್ಲಘಟ್ಟ ತಾಲೂಕು ಸಂಚಾಲಕ ಮಂಜುನಾಥ್.ಎನ್, ಕೃಷ್ಣಪ್ಪ, ನರಸಿಂಹಯ್ಯ, ಚಂದ್ರಪ್ಪ, ಶ್ರೀನಿವಾಸ.ವಿ, ಫಕೀರಪ್ಪ, ಪವಿತ್ರಾ ಸೇರಿದಂತೆ ಹಲವರು ಭಾಗವಹಿಸಿದ್ದರು.
‘ಅನಿಷ್ಟ ಪದ್ಧತಿ ನಿರ್ಮೂಲನೆ ಆಗಲಿ: ಸಾವಿತ್ರಮ್ಮ’
ಸಂಘಟನೆಯ ತಾಲೂಕು ಮಹಿಳಾ ಸಂಚಾಲಕಿ ಸಾವಿತ್ರಮ್ಮ, ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ಇವು ಎಲ್ಲಾ ಭಾರತೀಯರಿಗೂ ಸಂವಿಧಾನತ್ಮಕವಾಗಿ 76 ವರ್ಷಗಳಾದರೂ ಈ ಮೂಲ ಆಶಯಗಳು ಇದುವರೆಗೂ ಈಡೇರಿಲ್ಲ. ಪ್ರಜಾಪ್ರಭುತ್ವ ಸಮಾಜದಲ್ಲಿ ಪ್ರಜೆಗಳಿಂದ ಆಯ್ಕೆಯಾಗುವ ಸರ್ಕಾರದ ಪ್ರತಿನಿಧಿಗಳು ಆಯ್ಕೆಗೊಂಡ ಸಂದರ್ಭದಲ್ಲಿ ತಮ್ಮ ಹಿಂದೆ ಇರುವ ಪ್ರಜೆಯೊಬ್ಬ ಜೀತದಾಳು ಎಂಬ ಅನಿಷ್ಠ ಪದ್ಧತಿ, ಗುಲಾಮಿ ಪದ್ಧತಿಯಿಂದ ತತ್ತರಿಸುತ್ತಿವರೆ ಎಂಬುದರ ಬಗ್ಗೆ, ಕಾಳಜಿ ಇಲ್ಲದೆ ಇರುವುದು ಶೋಚನೀಯ ಸಂಗತಿ. ಈ ಅನಿಷ್ಟ ಜೀತ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನ ಮಾಡುವುದರಲ್ಲಿ ಸರ್ಕಾರಗಳು ವಿಫಲವಾಗುತ್ತಿದೆ ಎಂದರು.