ಕಂದಾಯ ಇಲಾಖೆಗೆ ಸಂಬಂಧಿಸಿದ ತಾಲೂಕು ಕಚೇರಿಗಳ ರೆಕಾರ್ಡ್‌ ರೂಮಿನಲ್ಲಿರುವ ಎಲ್ಲ ದಾಖಲೆ ಪತ್ರಗಳು ಇನ್ನು ಡಿಜಿಟಲೀಕರಣಗೊಳ್ಳಲಿದ್ದು, ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ರೆಕಾರ್ಡ್ ರೂಮಿನಲ್ಲಿ ಕಾಣಸಿಗುವ ಹಳೆ ಕಾಲದ ದಾಖಲೆಪತ್ರಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ವೆಬ್‌ಸೈಟ್‌ಗೆ ಅಪ್‌ಲೋಡ್‌ ಆಗುತ್ತಿವೆ. 

ಆತ್ಮಭೂಷಣ್‌

ಮಂಗಳೂರು (ಮೇ.18): ಕಂದಾಯ ಇಲಾಖೆಗೆ ಸಂಬಂಧಿಸಿದ ತಾಲೂಕು ಕಚೇರಿಗಳ ರೆಕಾರ್ಡ್‌ ರೂಮಿನಲ್ಲಿರುವ ಎಲ್ಲ ದಾಖಲೆ ಪತ್ರಗಳು ಇನ್ನು ಡಿಜಿಟಲೀಕರಣಗೊಳ್ಳಲಿದ್ದು, ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ರೆಕಾರ್ಡ್ ರೂಮಿನಲ್ಲಿ ಕಾಣಸಿಗುವ ಹಳೆ ಕಾಲದ ದಾಖಲೆಪತ್ರಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ವೆಬ್‌ಸೈಟ್‌ಗೆ ಅಪ್‌ಲೋಡ್‌ ಆಗುತ್ತಿವೆ. ಮುಂದಿನ ದಿನಗಳಲ್ಲಿ ಭೂಮಾಲೀಕರಿಗೂ ಸುಲಭದಲ್ಲಿ ಆನ್‌ಲೈನ್‌ನಲ್ಲಿ ಸಿಗಲಿದೆ. ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಘೋಷಿಸಿದ ಭೂದಾಖಲೆಗಳ ಆನ್‌ಲೈನ್‌ ದಾಖಲೀಕರಣದ ಭೂಸುರಕ್ಷಾ ಯೋಜನೆ ರಾಜ್ಯದ 31 ಜಿಲ್ಲೆಗಳ ತಲಾ ಒಂದು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಟಾನಗೊಳ್ಳುತ್ತಿದೆ. ದ.ಕ.ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಈ ಯೋಜನೆ ಪೈಲಟ್‌ ಆಗಿ ಕಾರ್ಯಗತಗೊಳ್ಳುತ್ತಿದೆ.

ಮಂಗಳೂರು ತಾಲೂಕೇ ಯಾಕೆ?: ದ.ಕ.ಜಿಲ್ಲೆಯಲ್ಲಿ ಮಂಗಳೂರು ತಾಲೂಕು ವಿಸ್ತಾರವಾಗಿದ್ದು, ಕಂದಾಯ ಕಡತಗಳ ದೃಷ್ಟಿಯಿಂದ ವ್ಯಾಪಕವಾಗಿದೆ. ಈ ತಾಲೂಕಿನಲ್ಲಿ ಅತೀ ಹೆಚ್ಚು ಭೂಮಿ ಕಡತಗಳಿದ್ದು, ಸಾಕಷ್ಟು ವ್ಯಾಜ್ಯಗಳನ್ನೂ ಹೊಂದಿದೆ. ಆಸ್ತಿ ಮಾರಾಟ, ಖರೀದಿಗೆ ದಾಖಲೆಗಳೇ ತೊಡಕಾಗಿ ಪರಿಣಿಸುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ಸಹಾಯಕ ಕಮಿಷನರ್‌ ಕೋರ್ಟ್‌ನಿಂದ ಜಿಲ್ಲಾಧಿಕಾರಿ ಕೋರ್ಟ್‌ಗೆ ಅಪೀಲು ಹೋಗುವ ಸನ್ನಿವೇಶಗಳೇ ಅಧಿಕವಾಗಿವೆ. ಇದರಿಂದಾಗಿ ಭೂಮಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತಿಲ್ಲ, ಮಾತ್ರವಲ್ಲ ಆಸ್ತಿ ಮಾರಾಟವೇ ಮೊದಲಾದ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ. ಈ ತೊಂದರೆ ನಿವಾರಣೆಗೆ ಜಿಲ್ಲೆಯಲ್ಲಿ ಮೊದಲು ಮಂಗಳೂರು ತಾಲೂಕನ್ನೇ ಪೈಲಟ್‌ ಆಗಿ ತೆಗೆದುಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಒಂಟಿ ಸಲಗ ಸಂಚಾರ: ಚಾರ್ಮಾಡಿ ಘಾಟಿಯಲ್ಲಿ ಅರಣ್ಯ ಇಲಾಖೆಯಿಂದ ರಾತ್ರಿ ಗಸ್ತು

ಏನಿದು ಭೂಸುರಕ್ಷಾ ಯೋಜನೆ?: ಪ್ರಸಕ್ತ ತಹಶೀಲ್ದಾರ್‌ ಕಚೇರಿಯ ರೆಕಾರ್ಡ್‌ ರೂಮಿನಲ್ಲಿ ಲಭ್ಯವಿರುವ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲ ಕಡತಗಳು ಹಾಗೂ ರಿಜಿಸ್ಟಾರ್‌ಗಳು ಕಾಗದಗಳಲ್ಲೇ ಇವೆ. ಹಳೆಯ ದಾಖಲೆಗಳು ಅಲ್ಲಲ್ಲಿ ಹರಿದು ಹೋಗಿದ್ದೂ ಇದೆ. ಅಂತಹ ಎಲ್ಲ ಕಡತಗಳನ್ನು ಆಯಾ ಮಾಲೀಕತ್ವದ ಅಡಿಯಲ್ಲಿ ಒಟ್ಟು ಸೇರಿಸಿ ಡಿಜಿಟಲ್‌ಗೆ ಒಳಪಡಿಸುವ ಕಾರ್ಯಕ್ರಮವೇ ಭೂಸುರಕ್ಷಾ ಯೋಜನೆ. ಈ ಯೋಜನೆಯಲ್ಲಿ ಪ್ರತಿಯೊಂದು ಕಡತವನ್ನು ಸ್ಕ್ಯಾನ್‌ ಮಾಡಿ ಭೂಸುರಕ್ಷಾ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಬಳಿಕ ಎಲ್ಲ ದಾಖಲೆಗಳೂ ವೆಬ್‌ಸೈಟ್‌ನಲ್ಲಿ ಸುರಕ್ಷಿತವಾಗಿರುತ್ತದೆ. ಇದರಿಂದಾಗಿ ಕಡತಗಳನ್ನು ಬದಲಾಯಿಸಲು, ಕದಿಯಲು ಸಾಧ್ಯವಿಲ್ಲ. ಕಡತಗಳ ದುರ್ಬಳಕೆಗೂ ಪೂರ್ಣವಿರಾಮ ಹಾಕಲಿದೆ. ಅಲ್ಲದೆ ದಲ್ಲಾಳಿಗಳಿಗೂ ಮುಂದಿನ ದಿನಗಳಲ್ಲಿ ಅವಕಾಶ ಇರುವುದಿಲ್ಲ.

ದಿನಕ್ಕೆ 10 ಸಾವಿರ ಪ್ರತಿ ಅಪ್‌ಲೋಡ್‌: ಮಂಗಳೂರು ತಾಲೂಕಿಗೆ ಸಂಬಂಧಿಸಿ ಪ್ರತಿ ದಿನ 10 ಸಾವಿರ ದಾಖಲೆಗಳ ಪ್ರತಿಗಳು ಸ್ಕ್ಯಾನ್‌ ಆಗಿ ಭೂಸುರಕ್ಷಾ ವೆಬ್‌ಸೈಟ್‌ಗೆ ಅಪ್‌ಲೋಡ್‌ ಆಗುತ್ತಿವೆ. ಫೆಬ್ರವರಿಯಲ್ಲಿ ಸರ್ಕಾರ ಈ ಯೋಜನೆ ಪ್ರಕಟಿಸಿದ ಬಳಿಕ 100 ದಿನಗಳಲ್ಲಿ ಎಲ್ಲ ಭೂದಾಖಲೆಗಳ ಡಿಜಿಟಲೀಕರಣ ಮುಕ್ತಾಯಗೊಳಿಸಬೇಕು ಎಂದು ಗುರಿ ನಿಗದಿಪಡಿಸಿತ್ತು. ಆದರೆ ಇಲ್ಲಿನ ಪ್ರತಿ ತಾಲೂಕುಗಳಲ್ಲೂ ಲಕ್ಷಗಟ್ಟಲೆ ದಾಖಲೆಗಳು ಇರುವುದರಿಂದ ಅವುಗಳನ್ನು ಡಿಜಿಟಲೀಕರಣಗೊಳಿಸುವುದು ಅಷ್ಟು ಸುಲಭವದ ಮಾತಲ್ಲ.

ಮಂಗಳೂರು ತಾಲೂಕಿನಲ್ಲಿ ಸುಮಾರು 80 ಲಕ್ಷಕ್ಕೂ ಅಧಿಕ ದಾಖಲೆಗಳಿದ್ದು, ಮೂಲ್ಕಿ, ಮಂಗಳೂರು, ಉಳ್ಳಾಲ ಕಡತಗಳ ಸ್ಕ್ಯಾನ್‌ ನಡೆಸಲಾಗುತ್ತಿದೆ. 10 ಮಂದಿ 10 ಕಂಪ್ಯೂಟರ್‌ ಹಾಗೂ ಸ್ಕ್ಯಾನರ್‌ಗಳನ್ನು ಬಳಸಿ ದಿನದಲ್ಲಿ 10 ಸಾವಿರ ಕಡತಗಳ ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಆದರೆ ಕಡತಗಳ ಸಂಖ್ಯೆ ತುಂಬಾ ಇರುವುದರಿಂದ ನಿಗದಿತ ದಿನಗಳಲ್ಲಿ ಡಿಜಿಟಲೀಕರಣ ಮುಕ್ತಾಯಗೊಳ್ಳುವ ಸಾಧ್ಯತೆ ಇಲ್ಲ.

ಸ್ವತಃ ಲಾಗಿನ್‌ ಆಗಿ ದಾಖಲೆ ಪತ್ರ ಪಡೆಯಬಹುದು: ಈ ಯೋಜನೆ ಜಾರಿಗೊಂಡ ಬಳಿಕ ಪ್ರತಿಯೊಬ್ಬ ಭೂಮಾಲೀಕರು ತನ್ನ ಆಸ್ತಿಗೆ ಸಂಬಂಧಿಸಿದ ಎಲ್ಲ ಬಗೆಯ ದಾಖಲೆಪತ್ರಗಳನ್ನು ಒಂದೇ ವೆಬ್‌ಸೈಟ್‌ನಿಂದ ಪಡೆಯಲು ಸಾಧ್ಯವಿದೆ. ಆಧಾರ್‌ ನಂಬರು ದಾಖಲಿಸಿದಾಗ ಮೊಬೈಲ್‌ಗೆ ಒಟಿಪಿ ಬರುತ್ತದೆ, ಬಳಿಕ ಲಾಗಿನ್‌ ಆಗಿ ತನಗೆ ಬೇಕಾದ ದಾಖಲೆ ಪತ್ರವನ್ನು ಭೂಸುರಕ್ಷಾ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದು. ಪ್ರಸಕ್ತ ರೆಕಾರ್ಡ್‌ ರೂಂಗೆ ತೆರಳಿ ನಿಗದಿತ ಶುಲ್ಕ ಪಾವತಿಗೆ ಬೇಕಾದ ದಾಖಲೆ ಪತ್ರಗಳಿಗೆ ವಾರಗಟ್ಟಲೆ ಕಾಯಬೇಕಾಗುತ್ತದೆ. ಡಿಜಿಟಲೀಕರಣದ ಬಳಿಕ ಈ ಕಾಯುವಿಕೆ ತಪ್ಪಲಿದೆ.

ವರ್ಷದ ಮೊದಲ ಮಳೆಗೆ ಕಸದಿಂದ ಗಬ್ಬು ನಾರುತ್ತಿದೆ ಗಡಿನಾಡು ಚಾಮರಾಜನಗರ!

ಪ್ರತಿ ದಿನ ಕಡತಗಳ ಡಿಜಿಟಲೀಕರಣದ ಸಂಖ್ಯೆಯನ್ನು 30 ಸಾವಿರಕ್ಕೆ ಹೆಚ್ಚಳಗೊಳಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಇನ್ನೂ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕನಿಷ್ಠ ಆರು ತಿಂಗಳಲ್ಲಿ ಸಂಪೂರ್ಣ ದಾಖಲೆಗಳ ಡಿಜಿಟಲೀಕರಣದ ಗುರಿ ಹೊಂದಲಾಗಿದೆ.
-ಡಾ.ಸಂತೋಷ್‌ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ, ದ.ಕ.