ಪುರಾಣ ವಾಚನ, ಪ್ರವಚನದಿಂದ ಶಾಂತಿ, ನೆಮ್ಮದಿ ಪ್ರಾಪ್ತಿ: ಆಸ್ರಣ್ಣ
ಎಲ್ಲೆಡೆ ಅಶಾಂತಿ ತುಂಬಿ ತುಳುಕುತ್ತಿದೆ, ಹಿಂಸೆ ತಾಂಡವವಾಡುತ್ತಿದೆ.. ಮನುಷ್ಯ ಹೊರಗೂ ಒಳಗೂ ನೆಮ್ಮದಿಯಾಗಿಲ್ಲ. ಇದಕ್ಕೆಲ್ಲ ಪರಿಹಾರ ಸಿಗಬೇಕು, ಶಾಂತಿ, ನೆಮ್ಮದಿಯಿಂದ ಜೀವಿಸಬೇಕು ಎಂದು ಪುರಾಣ ವಾಚನ, ಪ್ರವಚನ ಮಾಡುವುದೇ ಪರಿಹಾರ
ಬೆಳ್ತಂಗಡಿ(ಜು.18): ಪುರಾಣ ವಾಚನ- ಪ್ರವಚನದಿಂದ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ. ನಾವು ನೆಮ್ಮದಿಯಿಂದ ಜೀವಿಸಲು ಪುರಾಣ ವಾಚನ ಮಾಡುವುದು ರೂಢಿಸಿಕೊಳ್ಳಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಲಕ್ಷ್ಮೇನಾರಾಯಣ ಆಸ್ರಣ್ಣ ಹೇಳಿದ್ದಾರೆ. ಭಾನುವಾರ ಧರ್ಮಸ್ಥಳದಲ್ಲಿ 51ನೇ ವರ್ಷದ ಪುರಾಣ ಕಾವ್ಯ ವಾಚನ- ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ ಪ್ರತಿಯೊಬ್ಬರಿಗೂ ಜ್ಞಾನದಾಹ ಇರಬೇಕು.ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಹಿಂದೆ ಪ್ರತಿ ಮನೆಯಲ್ಲಿ ಪುರಾಣ ವಾಚನ ಮಾಡುವ ಸಂಪ್ರದಾಯವಿತ್ತು. ಆದರೆ, ಆಧುನಿಕ ಜೀವನ ಶೈಲಿ ಮತ್ತು ಕೆಲಸದ ಒತ್ತಡದಿಂದ ಸಂಪ್ರದಾಯವೆಲ್ಲ ಮರೆಯಾಗುತ್ತಿದೆ. ಪುರಾಣಗಳಲ್ಲಿ ನಮ್ಮ ಬದುಕಿನ ಎಲ್ಲ ಸಮಸ್ಯೆಗಳಿಗೆ, ಸವಾಲುಗಳಿಗೆ, ಸಾಂಸಾರಿಕ ತಾಪತ್ರಯಗಳಿಗೆ ಸೌಹಾರ್ದಯುತ ಪರಿಹಾರ ದೊರಕುತ್ತದೆ ಎಂದರು.
ಧರ್ಮಸ್ಥಳ ಯಕ್ಷಗಾನ ಮೇಳದ ನಿವೃತ್ತ ಕಲಾವಿದ ಕೆ. ಗೋವಿಂದ ಭಟ್ ಮಾತನಾಡಿ, ಧರ್ಮಸ್ಥಳಕ್ಕೆ ಭಕ್ತರು ಆರ್ತರಾಗಿ, ಜ್ಞಾನಿಗಳಾಗಿ, ಜಿಜ್ಞಾಸುಗಳಾಗಿ ಕುತೂಹಲದಿಂದ ತಮ್ಮ ಸವåಸ್ಯೆಗಳ ಪರಿಹಾರ ಹಾಗೂ ಶಾಂತಿ ಪಡೆಯಲು ಬರುತ್ತಾರೆ. ಅವರಿಗೆ ಬೇಕಾದ ಸಕಾಲಿಕ ಪರಿಹಾರ ಮತ್ತು ಮಾರ್ಗದರ್ಶನ ಹಾಗೂ ಸುಜ್ಞಾನದ ಬೆಳಕನ್ನು ನೀಡಿ ಸಾರ್ಥಕ ಬದುಕಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಆಗುಂಬೆ ಘಾಟಿಯ ನಾಲ್ಕನೇ ತಿರುವಲ್ಲಿ ರಸ್ತೆ ಬಿರುಕು
ಕಟೀಲು ಲಕ್ಷ್ಮೇನಾರಾಯಣ ಅಸ್ರಣ್ಣ ಮತ್ತು ಕೆ. ಗೋವಿಂದ ಭಟ್ ಅವರನ್ನು ಡಾ. ವೀರೇಂದ್ರ ಹೆಗ್ಗಡೆ ಗೌರವಿಸಿದರು. ಕಲಾವಿದ ಉಜಿರೆ ಆಶೋಕ ಭಟ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ವಂದಿಸಿದರು. ಸೆಪ್ಟೆಂಬರ್ 17ರ ವರೆಗೆ ಪ್ರತಿದಿನ ಸಂಜೆ ಗಂಟೆ 6.30ರಿಂದ 8 ಗಂಟೆಯ ವರೆಗೆ ಪುರಾಣ ಕಾವ್ಯ ವಾಚನ - ಪ್ರವಚನ ನಡೆಯುತ್ತದೆ.
ಡಾ.ವಿರೇಂದ್ರ ಹೆಗ್ಗಡೆಗೆ ಅಭಿನಂದನೆ: ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದರಾದ ಸೂರಿಕುಮೇರಿ ಕೆ. ಗೋವಿಂದ ಭಟ್ ಮತ್ತು ನಂದಳಿಕೆ ಮುದ್ದಣ ಅಧ್ಯಯನ ಕೇಂದ್ರದ ಅಧ್ಯಕ್ಷ ನಂದಳಿಕೆ ಬಾಲಚಂದ್ರ ರಾವ್ ಅವರು ಅಭಿನಂದಿಸಿದರು. ಈ ಸಂದರ್ಭ ಯಕ್ಷಗಾನ ಭಾಗವತರಾದ ಗಿರೀಶ್ ರೈ ಕಕ್ಕೆಪದವು ಮತ್ತು ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ದಿನೇಶ್ ನಾಯಕ್ ಉಪಸ್ಥಿತರಿದ್ದರು.
ಕುದ್ರೋಳಿ ದೇವಸ್ಥಾನದಿಂದ ಉಡುಗೊರೆ: ರಾಜ್ಯಸಭೆಗೆ ಶಿಫಾರಸುಗೊಂಡ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದ ಆಡಳಿತದಿಂದ ಶನಿವಾರ ಭೇಟಿ ಮಾಡಿ ಅಭಿನಂದಿಸಲಾಯಿತು.
ತುಳು ಭಾಷೆ, ತುಳು ಸಂಸ್ಕೃತಿ ಮೇಲೆ ಅಪಾರ ಅಭಿಮಾನ ಹೊಂದಿರುವ ಅವರ ಹೆಸರನ್ನು ರಾಷ್ಟ್ರಪತಿಗೆ ಶಿಫಾರಸು ಮಾಡಿರುವುದು ತುಳುನಾಡಿಗೆ ಹೆಮ್ಮೆಯ ವಿಚಾರ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಎಲ್ಲ ಪ್ರಯತ್ನ ಅವರಿಂದ ನೆರವೇರಲಿ, ಹೆಗ್ಗಡೆಯವರ ಸಾಮಾಜಿಕ ಕಾರ್ಯ ಭಾರತಾದ್ಯಂತ ಪಸರಿಸಲಿ ಎಂದು ಆಶಿಸಿ ಅವರಿಗೆ ನಾರಾಯಣ ಗುರುಗಳ ಫೋಟೋ ಉಡುಗೋರೆಯಾಗಿ ನೀಡಲಾಯಿತು. ಇದನ್ನೂ ಓದಿ: ದ.ಕ., ಉಡುಪಿ: ಮಳೆ ಕಡಿಮೆ, ಇಂದು ಆರೆಂಜ್ ಅಲರ್ಟ್
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ಆರ್, ಎಸ್‌ಡಿಎಂ ಕಾನೂನು ಕಾಲೇಜು ನಿವೃತ್ತ ಪ್ರಾಂಶುಪಾಲರ ರಾಜೇಂದ್ರ ಶೆಟ್ಟಿ, ಗುರು ಬೆಳದಿಂಗಳು ಸಂಸ್ಥೆಯ ಪ್ರವೀಣ್ ಅಂಚನ್ ಅರ್ಕುಳ, ಸುಜಿತ್ ಕುಮಾರ್, ವಿವೇಕ್ ಬಿ. ಕೋಟ್ಯಾನ್, ಸಂಜಿತ್, ಪತ್ರಕರ್ತ ಮನೋಹರ್ ಬಳಂಜ ಇದ್ದರು.