* ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ  ಬಿ. ಶರತ್‌ * ಸಿಎಟಿ ನೀಡಿದ್ದ ಆದೇಶ ಪ್ರಶ್ನಿಸಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರ* ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ

ಬೆಂಗಳೂರು(ಜು.09): ಐಎಎಸ್‌ ಅಧಿಕಾರಿಗಳ ವರ್ಗಾವಣೆಗಳ ಮೇಲ್ವಿಚಾರಣೆಗೆ ಎರಡು ತಿಂಗಳಲ್ಲಿ ನಾಗರಿಕ ಸೇವಾ ಮಂಡಳಿ (ಸಿಎಸ್‌ಬಿ) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್‌, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್‌ ಅವರ ವರ್ಗಾವಣೆ ಪ್ರಕರಣವನ್ನು ಮರುಪರಿಶೀಲಿಸುವಂತೆ ನಿರ್ದೇಶಿಸಿದೆ.

ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ತಮ್ಮನ್ನು ಅವಧಿ ಪೂರ್ವ ವರ್ಗಾವಣೆ ಮಾಡಿ, ಆ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಐಎಎಸ್‌ ಅಧಿಕಾರಿ ಬಿ. ಶರತ್‌ ಹೈಕೋರ್ಟ್‌ ತಕರಾರು ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ, ಶರತ್‌ ಅವರ ವರ್ಗಾವಣೆ ಪ್ರಕರಣವನ್ನು ಮರುಪರಿಶೀಲಿಸುವಂತೆ ಸಿಎಟಿ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಹ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು. ಈ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ, ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮುಂದಿನ ಎರಡು ತಿಂಗಳಲ್ಲಿ ಸಿಎಸ್‌ಬಿ ರಚಿಸಬೇಕು. ಶರತ್‌ ಅವರನ್ನು ವರ್ಗಾವಣೆ ಮಾಡಿದ ಆದೇಶವನ್ನು ಸಿಎಸ್‌ಬಿಯಲ್ಲಿ ಕಾನೂನು ರೀತಿ ಮರುಪರಿಶೀಲನೆ ನಡೆಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. ಆ ಮೂಲಕ ಸಿಎಟಿ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

ರೋಹಿಣಿ ಸಿಂಧೂರಿ ನಿಯೋಜನೆ ರದ್ದು ಕೋರಿ ಹೈಕೋರ್ಟ್‌ಗೆ ಶರತ್‌ ಅರ್ಜಿ

ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ 2020ರ ಆ.28ರಂದು ಬಿ.ಶರತ್‌ ಅವರನ್ನು ನೇಮಕ ಮಾಡಿದ್ದ ಸರ್ಕಾರ, ಸೆ.28ರಂದು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಸೆ.28ರಂದು ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿತ್ತು. ಇದನ್ನು ಪ್ರಶ್ನಿಸಿ ಸಿಎಟಿ ಮೆಟ್ಟಿಲೇರಿದ್ದ ಶರತ್‌, ಸೇವಾ ನಿಯಮಗಳನ್ನು ಉಲ್ಲಂಘಿಸಿ 2 ವರ್ಷ ತುಂಬುವ ಮೊದಲೇ ತಮ್ಮನ್ನು ವರ್ಗಾವಣೆ ಮಾಡಲಾಗಿದೆ. ಅವಧಿಪೂರ್ವ ವರ್ಗಾವಣೆಗೆ ಸಕಾರಣಗಳನ್ನೂ ನೀಡಿಲ್ಲ. ಸರ್ಕಾರದ ಈ ಕ್ರಮ ಕಾನೂನುಬಾಹಿರವಾಗಿದ್ದು, ತಮ್ಮ ವರ್ಗಾವಣೆ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಅದರ ವಿಚಾರಣೆ ನಡೆಸಿದ್ದ ಸಿಎಟಿ, ಎಎಸ್‌ ಅಧಿಕಾರಿಗಳ ವರ್ಗಾವಣೆಗಳ ಮೇಲ್ವಿಚಾರಣೆಗೆ ಸಿಎಸ್‌ಬಿ ರಚಿಸಬೇಕು. ಶರತ್‌ ವರ್ಗಾವಣೆ ಆದೇಶವನ್ನು ಸಿಎಸ್‌ಬಿ ಶಿಫಾರಸಿನಂತೆ ಸಕ್ಷಮ ಪ್ರಾಧಿಕಾರ ಮರುಪರಿಶೀಲನೆ ನಡೆಸಬೇಕು ಎಂದು 2021ರ ಮಾ.29ರಂದು ಆದೇಶಿಸಿತ್ತು.