ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ನೀಡಿ : ರಾಜಣ್ಣ

 ಪ್ರತಿ ಹೋಬಳಿಯ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ಅಧಿಕಾರಿಗಳು ನಡೆಸಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಬೇಕೆಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.

Receive complaints from the public, give relief on the spot: Rajanna snr

  ತುಮಕೂರು: ಪ್ರತಿ ಹೋಬಳಿಯ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ಅಧಿಕಾರಿಗಳು ನಡೆಸಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಬೇಕೆಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ಐ.ಡಿ ಹಳ್ಳಿಯಲ್ಲಿ ಆಗಸ್ಟ್‌ 23ರಂದು ಮತ್ತು ದೊಡ್ಡೆರಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ಆಗಸ್ಟ್‌ 30ರಂದು ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಸಭೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಬೇಕು. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳಬೇಕು. ಇದಕ್ಕಾಗಿ ಅಗತ್ಯ ನೆರವನ್ನು ಒದಗಿಸಲಾಗುವುದು. ತಾಲೂಕಿನಲ್ಲಿ ಸರ್ಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸಲು ಕ್ರಮವಹಿಸಬೇಕು. ಮಾಯಗೊಂಡನಹಳ್ಳಿ ಗ್ರಾಮದಲ್ಲಿ ಮಕ್ಕಳು ಶಾಲೆಗೆ ಹೋಗಲು ದಾರಿ ಬಿಡದೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದು, ಇದನ್ನು ಕೂಡಲೇ ಬಗೆಹರಿಸಬೇಕೆಂದು ತಿಳಿಸಿದರು.

ತಾಲೂಕು ವ್ಯಾಪ್ತಿಯ ರೈಲ್ವೆ ಯೋಜನೆಗಳು, ಎತ್ತಿನಹೊಳೆ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಭೂಸ್ವಾಧೀನಕ್ಕೆ ಸರ್ಕಾರದಿಂದ ಬಿಡುಗಡೆಯಾಗಿರುವ ಹಣವನ್ನು ಸಂಪೂರ್ಣವಾಗಿ ಬಳಸಿ ರೈತರಿಗೆ ತ್ವರಿತವಾಗಿ ಪಾವತಿಸಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಿ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಮಾರ್ಗದ ಬದಿಯಲ್ಲಿ ಅಳವಡಿಸಲಾಗಿರುವ ಪೈಪ್‌ಗಳಿಗೆ ಹಾನಿಯಾಗುತ್ತಿದ್ದು, ಆದ್ದರಿಂದ ವಿದ್ಯುತ್‌, ಕುಡಿಯುವ ನೀರು, ಅನಿಲ ಕೊಳವೆ ಮೊದಲಾದ ಮಾರ್ಗಗಳನ್ನು ರಸ್ತೆ ಬದಿಯಲ್ಲಿ ಅಳವಡಿಸುವಾಗ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಕಚೇರಿಗಳು ಶೀಘ್ರವಾಗಿ ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಗೊಳ್ಳಬೇಕು ಹಾಗೂ ಹೊಸ ಕಟ್ಟಡ ನಿರ್ಮಾಣದ ಅವಶ್ಯಕತೆ ಇದ್ದಲ್ಲಿ ಕೂಡಲೇ ವರದಿಯನ್ನು ಸಲ್ಲಿಸಬೇಕು. ತಾಲೂಕಿನಲ್ಲಿ ಅಗತ್ಯವಿರುವ ಕಡೆ ರುದ್ರ ಭೂಮಿಗಳನ್ನು ತ್ವರಿತವಾಗಿ ಮಂಜೂರು ಮಾಡಬೇಕು. ನಗರದಲ್ಲಿ ಕಳೆದ 5 ವರ್ಷಗಳಿಂದ ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲೂಕಿನಲ್ಲಿ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 56 ಉಪ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಹೊಸದಾಗಿ ಅಗತ್ಯವಿರುವ ಕಡೆ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.

ತಾಲೂಕಿನಲ್ಲಿ ಅನುಷ್ಟಾನಗೊಳ್ಳುತ್ತಿರುವ 376 ಜಲಜೀವನ್‌ ಮಿಷನ್‌ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡುವಂತೆ ಸೂಚಿಸಿದ ಸಚಿವರು, ತಾಲೂಕಿನಲ್ಲಿ ಹೆಚ್ಚು ಕೂಲಿಕಾರ್ಮಿಕರಿದ್ದು, ಇವರನ್ನು ಸಮರ್ಪಕವಾಗಿ ನರೇಗಾ ಯೋಜನೆಯಡಿ ಬಳಸಿಕೊಂಡು ಶೇ.100ರಷ್ಟುಪ್ರಗತಿ ಸಾಧಿಸಬೇಕೆಂದು ತಿಳಿಸಿದರು.

ಅಂತರಾಜ್ಯ ಸಂಪರ್ಕ ಕಲ್ಪಿಸುವ ಗಡಿ ಭಾಗಗಳಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕು ಕಾನೂನುಬಾಹಿರ ಕೃತ್ಯಗಳ ಎಸಗಿದ ಅಪರಾಧಿಗಳು ತಪ್ಪಿಸಿಕೊಳ್ಳುವುದನ್ನು ತಡೆಯಲು ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಗಾಂಜಾ ಸೇವನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೊಲೀಸರು ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲಾ ಮಟ್ಟದ ಆಡಳಿತವು ಇಂದು ತಾಲೂಕಿನಲ್ಲಿ ಸಭೆ ಸೇರಿದ್ದು, ಇದರ ಮಹತ್ವವನ್ನು ನಾವೆಲ್ಲಾ ಅರಿತುಕೊಂಡು ಕಾರ್ಯಪ್ರವೃತ್ತರಾಗಿ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕಿದೆ. ಸುಮಾರು 600 ಕೋಟಿ ಹಣವನ್ನು ವಿವಿಧ ಇಲಾಖೆಗಳಿಗೆ ಹಂಚಲಾಗಿದ್ದು, ವೇತನೇತರ ವೆಚ್ಚಗಳು ಸ್ಪಷ್ಟವಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿಗದಿತ ಅವಧಿಯಲ್ಲಿ ಗುರಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿರುವ 211 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 38 ಘಟಕಗಳು ದುರಸ್ತಿಗೊಳಗಾಗಿದ್ದು, ಇದರಲ್ಲಿ ಈಗಾಗಲೇ 34 ಘಟಕಗಳನ್ನು ದುರಸ್ತಿಪಡಿಸಲಾಗಿದೆ. ಉಳಿದ 4 ಘಟಕಗಳನ್ನು ತ್ವರಿತವಾಗಿ ದುರಸ್ತಿಪಡಿಸಲು ಕ್ರಮವಹಿಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಶಾಸಕರಾದ ರಾಜೇಂದ್ರ ರಾಜಣ್ಣ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪೂರ್‌ ವಾಡ್‌, ಉಪವಿಭಾಗಾಧಿಕಾರಿ ರಿಷಿ ಆನಂದ್‌, ಡಿಎಚ್‌ಒ ಡಾ. ಮಂಜುನಾಥ್‌, ಆಯುಷ್‌ ಇಲಾಖೆಯ ಡಾ. ಮಾರುತಿ, ಡಾ. ಪ್ರಿಯದರ್ಶಿನಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios