ಕೆ.ಎಂ. ಮಂಜುನಾಥ್‌

ಬಳ್ಳಾರಿ(ಮೇ.01):  ಕೊರೋನಾ ವೈರಸ್‌ ಹೊಡೆತಕ್ಕೆ ರಿಯಲ್‌ ಎಸ್ಟೇಟ್‌ ಉದ್ಯಮ ಮಕಾಡೆ ಮಲಗುವ ಆತಂಕ ಸೃಷ್ಟಿಸಿದೆ. ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಕಾಡಿದ ಬರಗಾಲದಿಂದ ನಾನಾ ಉದ್ಯಮಗಳು ಚೇತರಿಕೆ ಕಾಣದೆ ನಲುಗಿ ಹೋಗಿದ್ದವು. ಈ ಬಾರಿ ಭೂ ವ್ಯವಹಾರಗಳು ಚೇತರಿಕೆ ಕಾಣಲಿವೆ ಎಂಬ ನಿರೀಕ್ಷೆಗಳು ಬಲಗೊಂಡಿದ್ದವು. ಆದರೆ, ದಿಢೀರನೆ ಬಂದು ವಕ್ಕರಿಸಿದ ‘ಕೊರೋನಾ’ ರಿಯಲ್‌ ಎಸ್ಟೇಟ್‌ ಸೇರಿದಂತೆ ನಾನಾ ಉದ್ಯಮಗಳ ಮೇಲೆ ಕರಿಛಾಯೆ ಮೂಡಿಸಿದೆ.

ಭವಿಷ್ಯದಲ್ಲಿ ಮನೆ ಕಟ್ಟುವ ಕನಸು ಹೊತ್ತಿರುವ ಮಧ್ಯಮ ವರ್ಗದವರು ‘ಸೈಟ್‌’ ಖರೀದಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರಕ್ಕೆ ಬರುವ ಸಾಧ್ಯತೆ ಹೆಚ್ಚು. ಇದು ಕೋಟ್ಯಂತರ ಬಂಡವಾಳ ಹೂಡಿ ರಿಯಲ್‌ ಎಸ್ಟೇಟ್‌ ನಡೆಸುತ್ತಿರುವವರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೂ ರಿಯಲ್‌ ಎಸ್ಟೇಟ್‌ ಉದ್ಯಮ ಗರಿಗೆದರಿತ್ತು.

ಜಿಲ್ಲಾ ಕೇಂದ್ರದಲ್ಲಿ ಸ್ಥಳೀಯರು ಸೇರಿದಂತೆ ಆಂಧ್ರದಿಂದ ಬಂದು ಇಲ್ಲಿಯೇ ನೆಲೆಸಿರುವವರು ಸಹ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಲೇಔಟ್‌ಗಳು ಸತತವಾಗಿ ತಲೆ ಎತ್ತಿದವು. ಪರಿಣಾಮ ನಗರದಲ್ಲಿಯೇ ಸುಮಾರು 70ಕ್ಕೂ ಹೆಚ್ಚು ಹೊಸ ಲೇಔಟ್‌ಗಳು ನಿರ್ಮಾಣಗೊಂಡು ಖರೀದಿಗೆ ಸಿದ್ಧಗೊಂಡಿವೆ. ಏತನ್ಮಧ್ಯೆ ಹೊಸ ಹೊಸ ಲೇಔಟ್‌ಗಳ ನಿರ್ಮಾಣ ಕಾರ್ಯ ಬಿರುಸುಗೊಂಡಿತ್ತು. ಆದರೆ, ಏಕಾಏಕಿ ಬಂದೆರಗಿದ ‘ಕೊರೋನಾ’ ರಿಯಲ್‌ ಎಸ್ಟೇಟ್‌ ಉದ್ಯಮವನ್ನು ನೆಲಕಚ್ಚುವಂತೆ ಮಾಡಿದ್ದು, ಇದು ಭರ್ತಿ ಲಾಭದ ನಿರೀಕ್ಷೆ ಹೊತ್ತಿದ್ದವರಿಗೆ ಬರಸಿಡಿಲು ಬಡಿದಂತಾಗಿದೆ.

ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ

ನಮ್ಮ ಸ್ಥಿತಿ ಯಾರಿಗೂ ಬೇಡ

ಬಳ್ಳಾರಿಯಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಬಹಳ ಚೆನ್ನಾಗಿತ್ತು. ಕಳೆದ ಒಂದು ವರ್ಷದಿಂದ ಅತ್ಯುತ್ತಮ ಚೇತರಿಕೆ ಕಂಡಿತ್ತು. ಆದರೆ, ‘ಕೊರೋನಾ’ ನಮ್ಮ ವ್ಯವಹಾರಕ್ಕೆ ಬಹುದೊಡ್ಡ ಆಘಾತ ನೀಡಿತು. ಬೇರೆಡೆಯಿಂದ ಸಾಲ ತಂದು ಕೋಟ್ಯಂತರ ಹೂಡಿಕೆ ಮಾಡಿದ್ದೇವೆ. ಸದ್ಯದ ಪರಿಸ್ಥಿತಿ ನೋಡಿದರೆ ಇನ್ನು ಮೂರು ವರ್ಷಗಳ ಕಾಲ ಜನರು ಬದುಕು ಸರಿದಾರಿಗೆ ಬರುವ ಲಕ್ಷಣಗಳಿಲ್ಲ. ನಮಗೆ ಮಧ್ಯಮ ವರ್ಗದವರೇ ಆಧಾರ. ಆದರೆ, ಆರ್ಥಿಕ ಸಮಸ್ಯೆಯಿಂದ ಯಾರೂ ಸೈಟ್‌ ಖರೀದಿ ಮಾಡಲು ಮುಂದೆ ಬರುವುದಿಲ್ಲ. ಹೀಗಾದರೆ ನಮ್ಮ ಗತಿ ಏನು ಎಂಬ ಆತಂಕ ಶುರುವಾಗಿದೆ. ಬ್ಯಾಂಕ್‌ ಸೇರಿದಂತೆ ಖಾಸಗಿಯಾಗಿ ಮಾಡಿದ ದುಬಾರಿ ಸಾಲ ಕಟ್ಟುವುದು ಸಹ ನಮಗೆ ತೀರಾ ಸಮಸ್ಯೆಯಾಗಲಿದೆ ಎನ್ನುತ್ತಾರೆ ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿ ರಂಗಾರೆಡ್ಡಿ.

ಈ ಹಿಂದೆ 2016ರಲ್ಲಿ ನೋಟು ಅಮಾನ್ಯೀಕರಣದಿಂದ ಉದ್ಯಮಕ್ಕೆ ಬಹುಪೆಟ್ಟು ಬಿದ್ದಿತ್ತು. ಇದರಿಂದ ಹಣದ ವ್ಯವಹಾರಕ್ಕೆ ಕುತ್ತು ಬಂತು. ಇದರಿಂದ ಹೊರ ಬರಲು ಉದ್ಯಮಿಗಳು ಸಾಕಷ್ಟುಹೆಣಗಾಡಬೇಕಾಯಿತು. ಬಳಿಕ ಒಂದಷ್ಟುಚೇತರಿಕೆ ಕಂಡು ಬಂದಿದ್ದರಿಂದ ಇದೇ ಕ್ಷೇತ್ರವನ್ನು ಆಶ್ರಯಿಸಿದ್ದವರು ಒಂದಷ್ಟುನಿರಾಳಗೊಂಡರಲ್ಲದೆ, ರಿಯಲ್‌ ಎಸ್ಟೇಟ್‌ ಉದ್ಯಮವನ್ನು ವಿಸ್ತಾರಗೊಳಿಸಿದರು. ಇನ್ನೇನು ಹಾಕಿದ ಬಂಡವಾಳ ಒಂದೆರೆಡು ವರ್ಷಗಳಲ್ಲಿ ಕೈಸೇರುತ್ತದೆ ಎಂದುಕೊಳ್ಳುವಷ್ಟರಲ್ಲಿಯೇ ‘ಕೊರೋನಾ’ ಬಹುದೊಡ್ಡ ಪೆಟ್ಟು ಕೊಟ್ಟಿತು ಎಂಬುದು ಉದ್ಯಮಿಗಳ ಅಳಲು.

ಕೊರೋನಾದಿಂದಾಗಿ ರಿಯಲ್‌ ಎಸ್ಟೇಟ್‌ ತೀವ್ರ ಹಿನ್ನಡೆ ಅನುಭವಿಸುವ ಆತಂಕ ಶುರುವಾಗಿದೆ. ಮಧ್ಯಮ ವರ್ಗದವರು ಯಾರೂ ದುಬಾರಿ ಹಣ ನೀಡಿ ಸೈಟ್‌ ಖರೀದಿಸುವ ಸ್ಥಿತಿ ಇಲ್ಲ. ಹಣ ಇದ್ದರೂ ಆರ್ಥಿಕ ಸಮಸ್ಯೆ ಎದುರಾಗಬಹುದು ಎಂಬ ಅಳಕು ಅವರಲ್ಲಿದೆ. ಹೀಗಾಗಿ, ರಿಯಲ್‌ ಎಸ್ಟೇಟ್‌ ಉದ್ಯಮ ಸದ್ಯಕ್ಕೆ ತಟಸ್ಥಗೊಳ್ಳುವ ಸಾಧ್ಯತೆ ಇದೆ ಎಂದು ಬಳ್ಳಾರಿಯ ರಿಯಲ್‌ ಎಸ್ಟೇಟ್‌ ಉದ್ಯಮಿ ರವಿಬಾಬು ಹೇಳಿದ್ದಾರೆ.