ಬಾಗಲಕೋಟೆ: ವಿಮಾನ ನಿಲ್ದಾಣಕ್ಕೆ ಭೂಮಿ ನೀಡಲು ಸಿದ್ಧ, ರೈತರು
ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನಕ್ಕೆ ಮುಂದಾದ ಸರ್ಕಾರಕ್ಕೆ ಕೆಲ ರೈತರ ಬೆಂಬಲ: ಮುಚ್ಚಳಿಕೆ ಪತ್ರ ಬರೆದುಕೊಟ್ಟಹ ಲವು ರೈತರು
ಬಾಗಲಕೋಟೆ(ಜ.03): ಕಳೆದ ನಾಲ್ಕು ತಿಂಗಳಿಂದ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಲಕುರ್ಕಿ ಸೇರಿದಂತೆ ಹಲವು ಗ್ರಾಮಗಳ ರೈತರಲ್ಲಿ ಇದೀಗ ಭಿನ್ನ ಧ್ವನಿ ವ್ಯಕ್ತವಾಗಿದ್ದು, ವಿಮಾನ ನಿಲ್ದಾಣಕ್ಕೆ ಭೂಮಿ ನೀಡಲು ಸಿದ್ಧವಿರುವುದಾಗಿ ಹಲಕುರ್ಕಿ ಸೇರಿದಂತೆ ಇತರ ಗ್ರಾಮಗಳ ರೈತರು ಬಹಿರಂಗವಾಗಿ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಹಲಕುರ್ಕಿ, ಹಂಗರಗಿ, ಬೂದಿಹಾಳ ಹಾಗೂ ಹಿರೇಮುಚ್ಚಳಗುಡ್ಡ ಗ್ರಾಮದ ಕೆಲ ರೈತರು ಮಾತನಾಡಿ, ಕೈಗಾರಿಕೆ ಹಾಗೂ ವಿಮಾನ ನಿಲ್ದಾಣದ ಸ್ಥಾಪನೆಗೆ ಭೂಮಿ ನೀಡುವುದಾಗಿ ಹೇಳಿದರಲ್ಲದೇ, ಇದಕ್ಕಾಗಿ ಈಗಾಗಲೇ ಮುಚ್ಚಳಿಕೆ ಪತ್ರವನ್ನು ಸಹ ಬರೆದುಕೊಟ್ಟಿದ್ದಾಗಿ ತಿಳಿಸಿದರು.
ಹಲಕುರ್ಕಿ ಗ್ರಾಮದ ಚನ್ನಬಸಪ್ಪ ಹಲಕುರ್ಕಿ ಹಾಗೂ ಆನಂದ ಉಂಡಿ ಮತ್ತು ಹಂಗರಗಿ ಗ್ರಾಮದ ಪ್ರಮೋದ ಕವಡಿಮಟ್ಟಿಅವರು ಬರಡು ಭೂಮಿಯಾಗಿರುವ ಈ ಪ್ರದೇಶದಲ್ಲಿನ ನಮ್ಮ ಒಡೆತನದ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ನೀಡಲು ನಮ್ಮ ಸಂಪೂರ್ಣ ಒಪ್ಪಿಗೆ ಇದ್ದು, ಏನನ್ನು ಬೆಳೆಯದ ಭೂಮಿಯನ್ನು ಇಟ್ಟುಕೊಂಡು ನಾವು ಸಾಕಷ್ಟುನಷ್ಟ ಅನುಭವಿಸಿದ್ದು, ಇದೀಗ ಸರ್ಕಾರ ಉತ್ತಮ ಬೆಲೆ ಘೋಷಣೆ ಮಾಡಿದ್ದರಿಂದ ಭೂ ಸ್ವಾಧೀನಕ್ಕೆ ನಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.
BAGALKOTE: ಬಸ್ ಇಲ್ಲದೇ ಪರದಾಡುತ್ತಿರುವ ವಿದ್ಯಾರ್ಥಿಗಳು
ಬರಡು ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆಯಾದರೇ ಉದ್ಯೋಗ ಸೃಷ್ಟಿಯಾಗಲಿದ್ದು, ಈ ಭಾಗದ ಸಮೀಪ ರಾಷ್ಟ್ರೀಯ ಹೆದ್ದಾರಿ ಸಹ ನಿರ್ಮಾಣಗೊಳ್ಳುತ್ತಿರುವುದರಿಂದ ಸಹಜವಾಗಿ ಅಭಿವೃದ್ಧಿಯ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ. ಕ್ಷೇತ್ರದ ಶಾಸಕರು ಹಾಗೂ ಸಚಿವರು ಆಗಿರುವ ಮುರಗೇಶ ನಿರಾಣಿ ಅವರ ಈ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ ಎಂದರು.
600 ಎಕರೆ ಭೂಮಿ ನೀಡಲು ಸಿದ್ಧ :
ಹಲಕುರ್ಕಿ ಗ್ರಾಮದ ವ್ಯಾಪ್ತಿಯಲ್ಲಿ ಏನನ್ನು ಬೆಳೆಯಲಾರದ ಭೂಮಿ ಸಾಕಷ್ಟಿದೆ. ಅಂದಾಜು 300 ಎಕರೆ ಭೂಮಿ ಇದಾಗಿದ್ದು, ಹಂಗರಗಿ ಹಾಗೂ ಹಿರೇಬೂದಿಹಾಳ ಗ್ರಾಮದ 300 ಎಕರೆ ಜಮೀನನ್ನು ಕೈಗಾರಿಕೆಗೆ ನೀಡಲು ರೈತರ ಒಪ್ಪಿಗೆ ಇದೆ. ಇದಕ್ಕಾಗಿ ಬಾದಾಮಿ ತಹಸೀಲ್ದಾರ್‌ಗೆ ಮತ್ತು ಧಾರವಾಡದ ಕೆಐಡಿಬಿ ಕಚೇರಿಗೆ ಭೂಮಿ ನೀಡುವ ಒಪ್ಪಿಗೆ ಪತ್ರವನ್ನು ಕೆಲವರು ನೀಡಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಗೆ ಪತ್ರವನ್ನು ಪ್ರದರ್ಶಿಸಿದರು.
ದಲಿತರ ಶ್ರೇಯೋಭಿವೃದ್ಧಿಗೆ ಸವಲತ್ತು ಪಡೆದುಕೊಳ್ಳಿ: ಸಚಿವ ಕಾರಜೋಳ
ಎಕರೆಗೆ 18 ಲಕ್ಷ ನೀಡುವ ಕುರಿತು ಸ್ಪಷ್ಟಣೆ ಸಿಗಲಿ:
ಬರಡು ಭೂಮಿಗೆ ಸರ್ಕಾರ ಕೈಗಾರಿಕೆಗಳ ಹೆಸರಿನಲ್ಲಿ ಭೂಸ್ವಾಧೀನ ಕೈಗೊಂಡ ನಂತರ ಪ್ರತಿ ಎಕರೆಗೆ 18 ಲಕ್ಷ ಹಣ ನೀಡುವುದಾಗಿ ಘೋಷಿಸಿದೆ. ಆದರೆ, ಇಷ್ಟೊಂದು ಹಣವನ್ನು ಸರ್ಕಾರ ನೀಡಬಹುದೇ ಎಂಬ ಸಂಶಯ ಈ ಭಾಗದ ರೈತರಲ್ಲಿ ಕಾಡುತ್ತಿದೆ. ರೈತರಲ್ಲಿರುವ ಸಂಶಯ ನಿವಾರಣೆಯನ್ನು ಸರ್ಕಾರ ಮಾಡಿದರೆ ಮತ್ತಷ್ಟುರೈತರು ಸ್ವಯಂ ಪ್ರೇರಿತರಾಗಿ ಭೂಮಿ ನೀಡಲು ಸಿದ್ಧರಿದ್ದಾರೆ ಎಂದರು.
ಭೂಸ್ವಾಧೀನ ವಿರೋಧಿಸಿ ಹಲಕುರ್ಕಿ ಗ್ರಾಮದಲ್ಲಿ ನಡೆದಿರುವ ರೈತರ ಚಳುವಳಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಫಲವತ್ತಾದ ಭೂಮಿಯನ್ನು ಭೂಸ್ವಾಧೀನ ಮಾಡುವ ವಿಷಯದಲ್ಲಿ ರೈತರ ನಿರ್ಧಾರ ಅಂತಿಮ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಏನೂ ಬೆಳೆಯದ ಭೂಮಿಯನ್ನು ಇಟ್ಟುಕೊಂಡು ನಾವೇನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಸ್ವಯಂ ಪ್ರೇರಣೆಯಿಂದ ಸರ್ಕಾರಕ್ಕೆ ಭೂಮಿ ನೀಡಲು ನಮ್ಮ ಒಪ್ಪಿಗೆ ಇದೆ ಎಂದರಲ್ಲದೇ, ಸರ್ಕಾರ ಯಾವುದೇ ಕಾರಣಕ್ಕೂ ಸದ್ಯ ಆರಂಭಿಸಿರುವ ಕೈಗಾರಿಕೆ ಹಾಗೂ ವಿಮಾನ ನಿಲ್ದಾಣ ಪ್ರಕ್ರಿಯೆಯನ್ನು ಮುಂದುವರೆಸಬೇಕು ಎಂದು ಮನವಿ ಮಾಡಿದರು.