ಮಂಗಳೂರು [ಸೆ.01]:  ರಾಜ್ಯ ವಿಧಾನಸಭೆಗೆ ಯಾವಾಗ ಬೇಕಾದರೂ ಅವಧಿಗೆ ಮುನ್ನ ಚುನಾವಣೆ ನಡೆಯಬಹುದು. ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಲು ಸಜ್ಜಾಗಿ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ದ. ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಶನಿವಾರ ಸಂಜೆ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಹಿಂಬಾಗಿಲ ಮೂಲಕ ಅಧಿಕಾರ ಪಡೆದ ಅನೈತಿಕ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು. ಈಗಿನ ಪರಿಸ್ಥಿತಿ ನೋಡಿದರೆ ಚುನಾವಣೆ ನಡೆಯುವ ಸಾಧ್ಯತೆಯೇ ಹೆಚ್ಚು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಬೇಕು ಎಂದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.

ಪ್ರಧಾನಿ ಮೋಜು-ಮಸ್ತಿ: ರಾಜ್ಯದಲ್ಲಿ ನೆರೆ ಪ್ರವಾಹ ಪರಿಸ್ಥಿತಿ ಇದ್ದರೂ ಇಲ್ಲಿಗೆ ಮುಖ ಮಾಡದ ಪ್ರಧಾನಿಯವರು ವಿದೇಶಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗಿ, ಪೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಪ್ರಧಾನಿಯವರೇ ನಿಮ್ಮ ಆದ್ಯತೆ ಏನೆಂದು ಪ್ರಶ್ನಿಸಿದರು. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ಆದರೂ ಪ್ರವಾಹ ಸಂತ್ರಸ್ತರಿಗೆ ನೋವಿಗೆ ಸ್ಪಂದಿಸದ ಮನುಷ್ಯತ್ವ ಕಳೆದುಕೊಂಡ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನಿಷ್ಠ ಪ್ರಧಾನಿಯವರು ವೈಮಾನಿಕ ಸಮೀಕ್ಷೆ ನಡೆಸುವ ನಿರೀಕ್ಷೆ ಇತ್ತು. ಪ್ರವಾಹ ಬಂದು ಇಷ್ಟುದಿನವಾದರೂ ರಾಜ್ಯಕ್ಕೆ ಬಿಡಿಗಾಸು ಕೇಂದ್ರ ಸರ್ಕಾರ ನೀಡಿಲ್ಲ. ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳುತ್ತಾರೆ, ಪ್ರಧಾನಿಯವರು ಬರುತ್ತಿದ್ದಾರೆ, ಪರಿಸ್ಥಿತಿಯ ಬಗ್ಗೆ ಅವರ ಗಮನ ಸೆಳೆಯುತ್ತೇವೆ ಎನ್ನುತ್ತಾರೆ. ಈಗ ಇಂತಹ ಹೇಳಿಕೆ ನೀಡಲು ನಾಚಿಕೆ ಆಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ದೇಶದ ಆರ್ಥಿಕ ಹಿಂಜರಿತಕ್ಕೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಕಾರಣ. ಬ್ಯಾಂಕ್‌ಗಳ ವಿಲೀನದ ಮೂಲಕ ಆರ್ಥಿಕತೆಯ ಮೇಲೆ ಮತ್ತಷ್ಟೂಏಟು ನೀಡಲು ಹೊರಟಿದ್ದಾರೆ. ಬಿಜೆಪಿಯವರು ರೈತರ, ಕೂಲಿ ಕಾರ್ಮಿಕರ, ಬಡ ಜನರ ಪರವಾಗಿಲ್ಲ. ಅವರು ಇರುವುದು ಬಂಡವಾಳಶಾಹಿ, ಶ್ರೀಮಂತರು, ಮೇಲ್ವರ್ಗದವರು, ಉದ್ಯಮಿಗಳ ಪರ ಎಂದು ಅವರು ಟೀಕಿಸಿದರು.

ಅಂತರ್‌ ಪಿಶಾಚಿಗಳು: ಇಡಿ, ಸಿಬಿಐ, ಆರ್‌ಬಿಐ, ಆದಾಯ ತೆರಿಗೆ ಇಲಾಖೆ ಮೂಲಕ ವಿರೋಧ ಪಕ್ಷದ ನಾಯಕರನ್ನು ಬೆದರಿಸುವ ಕೆಲಸವಾಗುತ್ತಿದೆ. ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ 35ರಿಂದ 49 ಕೋಟಿ ರು. ನೀಡಿ ಕುದುರೆ ವ್ಯಾಪಾರ ಮಾಡಿದ ಬಿಜೆಪಿಗರಿಗೆ ಇಡಿ, ಐಟಿ ದಾಳಿ ಇಲ್ಲ. ಇವರು ಖರೀದಿಸಿ ರಾಜೀನಾಮೆ ನೀಡಿದ 17 ಮಂದಿ ಶಾಸಕರು ಅಂತರ್‌ ಪಿಶಾಚಿಗಳಾಗಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಸದನದಲ್ಲಿ ಅಶ್ಲೀಲ ಚಿತ್ರ ನೋಡಿದವರಿಗೆ ಡಿಸಿಎಂ ಪದವಿ ನೀಡಿದ ಇವರಿಗೆ ಏನು ಹೇಳಬೇಕು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಲೋಕಸಭಾ, ವಿಧಾನಸಭಾ, ಪಂಚಾಯತ್‌, ಮುನ್ಸಿಪಲ್‌ ಚುನಾವಣೆ ಬೇರೆ ಬೇರೆ, ಲೋಕಸಭಾ ಚುನಾವಣೆಯ ಸೋಲು ಶಾಶ್ವತವಲ್ಲ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.