ಬಳ್ಳಾರಿ: ಹೋಟೆಲ್‌ ಉದ್ಯಮ-ವ್ಯಾಪಾರ ವಹಿವಾಟು ಚೇತ​ರಿ​ಕೆ

ದೇವ​ಸ್ಥಾ​ನ​ಗ​ಳತ್ತ ಸುಳಿ​ಯದ ಜನ​ತೆ|  ಮಾರು​ಕಟ್ಟೆಯ​ಲ್ಲಿಲ್ಲ ಸಾಮಾ​ಜಿಕ ಅಂತ​ರಕ್ಕೆ ಬೆಲೆ| ವಿದ್ಯಾವಂತರಂತೆ ಕಾಣುವವರೇ ಮಾಸ್ಕ್‌ ಧರಿಸುತ್ತಿಲ್ಲ| ಕೊರೋನಾ ಪ್ರಕರಣಗಳು ಹೆಚ್ಚಾದರೆ ಮತ್ತೆ ಸ್ಥಗಿತವಾಗುವ ಆತಂಕ|

Re start Hotel business turnover in Ballari district

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜೂ.11): ದೇವಸ್ಥಾನಗಳು ಎಂದಿನಂತೆ ಬಣಬಣ. ಚೇತರಿಸಿಕೊಳ್ಳುತ್ತಿರುವ ಹೋಟೆಲ್‌ಗಳು. ಕುದುರಿಕೊಂಡ ವ್ಯಾಪಾರ ವಹಿವಾಟು. ನಗರದ ಪ್ರಮುಖ ರಸ್ತೆಗಳಲ್ಲಿ ಜನಜಂಗುಳಿ. ಸಾಮಾಜಿಕ ಅಂತರದ ಬಗ್ಗೆ ತಲೆ ಕೆಡಿಸಿಕೊಳ್ಳದ ಜನ! ನಗರದಲ್ಲಿ ಲಾಕ್‌ಡೌನ್‌ ಸಡಿಲಿಕೆ ಬಳಿಕ ನಗರದಲ್ಲಿ ಬುಧವಾರ ಕಂಡು ಬಂದ ದೃಶ್ಯಗಳಿವು.

ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಏರಿಕೆಯಾಗಿಲ್ಲ. ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರೂ ದೇವಾಲಯಗಳತ್ತ ಜನರ ಆಗಮನ ನಿರೀಕ್ಷೆಯಂತಿಲ್ಲ. ಭಕ್ತರ ದರ್ಶನಕ್ಕಾಗಿ ದೇವಾಲಯಗಳಲ್ಲಿ ಮುಕ್ತ ಪ್ರವೇಶ ನೀಡಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಸರ್‌ ಬಳಕೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದಾಗ್ಯೂ ಭಕ್ತರು ಆಗಮನವಿಲ್ಲದೆ ದೇವಾಲಯಗಳು ಬಣಗುಟ್ಟುತ್ತಿವೆ.

ಶಾಲು-ಹಾರ ಹಾಕಲು ಬಂದ ಶಿಕ್ಷಕರಿಗೆ ಸುರೇಶ್ ಕುಮಾರ್ 'ಸಾಮಾಜಿಕ ಅಂತರದ' ಕ್ಲಾಸ್!

ಎ ಶ್ರೇಣಿಯಲ್ಲಿ ಬರುವ ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಹಂಪಿಯ ಶ್ರೀ ವಿರುಪಾಕ್ಷೇಶ್ವರಸ್ವಾಮಿ ದೇವಸ್ಥಾನ, ಕೊಟ್ಟೂರಿನ ಶ್ರೀಗುರು ಕೊಟ್ಟೂರು ಬಸವೇಶ್ವರ, ಬಳ್ಳಾರಿಯ ಶ್ರೀಕನಕ ದುರ್ಗಮ್ಮ, ಕೋಟೆ ಮಲ್ಲೇಶ್ವರಸ್ವಾಮಿ ಸೇರಿದಂತೆ ಬಿ ಶ್ರೇಣಿಯ ದೇವಸ್ಥಾನಗಳಲ್ಲೂ ದೇವರ ದರ್ಶನಕ್ಕಾಗಿ ಭಕ್ತರ ಆಗಮನವಾಗುತ್ತಿಲ್ಲ.

ಚೇತರಿಕೆ ಕಂಡು ಹೋಟೆಲ್‌ ವ್ಯಾಪಾರ:

ಇನ್ನು ಹೋಟೆಲ್‌ಗಳಲ್ಲಿ ಒಂದಷ್ಟುವ್ಯಾಪಾರ ಚೇತರಿಸಿಕೊಳ್ಳುತ್ತಿದ್ದು, ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿದೆ. ಮೊದಲೆರೆಡು ದಿನ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ಹೋಟೆಲ್‌ಗಳು ಗ್ರಾಹಕರಿಂದ ತುಂಬಿಕೊಳ್ಳಲಾರಂಭಿಸಿವೆ. ಸುರಕ್ಷತೆಯ ದೃಷ್ಟಿಯಿಂದ ಸ್ಯಾನಿಟೈಸರ್‌ ಬಳಕೆ ಹಾಗೂ ಸಾಮಾಜಿಕ ಅಂತರಕ್ಕೆ ಎಲ್ಲ ಹೋಟೆಲ್‌ಗಳಲ್ಲಿ ಆದ್ಯತೆ ನೀಡಲಾಗಿದೆ. ಒಂದೇ ಟೇಬಲ್‌ಗೆ ಎರಡೇ ಸೀಟ್‌ಗಳನ್ನು ಹಾಕಲಾಗುವುದು. ಒಂದು ಟೇಬಲ್‌ಗೆ ಇಬ್ಬರು ಕೂಡಲು ಮಾತ್ರ ಅವಕಾಶ ಕಲ್ಪಿಸಲಾಗುವುದು. ಹೋಟೆಲ್‌ಗೆ ಬರುವ ಗ್ರಾಹಕರಿಗೆ ಪ್ರವೇಶ ಮುನ್ನ ಕೈಗೆ ಸ್ಯಾನಿಟೈಸರ್‌ ಹಾಕಲಾಗುವುದು. ಮಾಸ್ಕ್‌ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು ಗ್ರಾಹಕರು ಸಹ ಸಹರಿಸುತ್ತಿದ್ದಾರೆ ಎಂದು ಇಲ್ಲಿನ ಬಾಲಾ ಹೋಟೆಲ್‌ ಮಾಲೀಕ ರಾಧಾಕೃಷ್ಣ ತಿಳಿಸಿದರು.

ವ್ಯಾಪಾರ ವಹಿವಾಟು ಜೋರು:

ನಗರದ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರಗಳಾದ ಬೆಂಗಳೂರು ರಸ್ತೆ, ಬ್ರಾಹ್ಮಣ ಬೀದಿ, ಕೆಸಿ ರಸ್ತೆ, ಟ್ಯಾಂಕ್‌ ಬಂಡ್‌ ರಸ್ತೆ, ಹೂವಿನ ಬಜಾರ್‌, ಗ್ರಹಂ ರಸ್ತೆ ಮತ್ತಿತರ ಕಡೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದ್ದು, ಲಾಕ್‌ಡೌನ್‌ ತೆರ​ವಿನ ಬಳಿ​ಕ ವ್ಯಾಪಾರ ಕುದುರಿಕೊಂಡಿದೆ. ಬೆಂಗಳೂರು ರಸ್ತೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸಾವಿರಾರು ಜನರು ಆಗಮಿಸಿ, ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ವಿಪರ್ಯಾಸ ಸಂಗತಿ ಎಂದರೆ ಮಾಸ್ಕ್‌ಗಳನ್ನು ಧರಿಸುತ್ತಿರುವವರ ಪ್ರಮಾಣ ಕುಸಿಯುತ್ತಿದ್ದು, ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡುತ್ತಿಲ್ಲ. ಇದರಿಂದ ಮತ್ತಷ್ಟೂವೈರಸ್‌ ಸೋಂಕಿತರ ಪ್ರಮಾಣ ಹೆಚ್ಚಾಗುವ ಆತಂಕವೂ ಶುರುವಾಗಿದೆ. ಮಾಸ್ಕ್‌ ಇಲ್ಲದೆ ಓಡಾಟ ಹಾಗೂ ಸಾಮಾಜಿಕ ಅಂತರದಿಂದ ದೂರ ಉಳಿದ ಜನರು ಬೆಂಗಳೂರು ರಸ್ತೆಯಲ್ಲಿ ಹೆಚ್ಚಾಗಿ ಕಂಡು ಬಂದರು.

ಹೋಟೆಲ್‌, ಬೇಕರಿ ಸೇರಿದಂತೆ ವಿವಿಧ ವ್ಯಾಪಾರ ವಹಿವಾಟುಗಳು ಚೇತರಿಸಿಕೊಳ್ಳುತ್ತಿವೆ ಎಂದುಕೊಳ್ಳುತ್ತಿರುವಾಗಲೇ ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್‌ ಸೋಂಕು ಪ್ರಕರಣಗಳು ಜನರನ್ನು ಭಯಭೀತರನ್ನಾಗಿಸಿದೆ. ಸದ್ಯಕ್ಕೆ ವ್ಯಾಪಾರ ಸುಧಾರಿಸಿಕೊಳ್ಳುತ್ತಿದೆ. ಕೊರೋನಾ ಪ್ರಕರಣಗಳು ಹೆಚ್ಚಾದರೆ ಮತ್ತೆ ಸ್ಥಗಿತವಾಗುವ ಆತಂಕವೂ ನಮ್ಮನ್ನು ಕಾಡುತ್ತಿದೆ ಎನ್ನುತ್ತಾರೆ ನಗರದ ರೇಣುಕಾ ಕಿಚನ್‌ ಹೋಟೆಲ್‌ ಮಾಲೀಕ ಹರೀಶ್‌.

ಇಷ್ಟು ದಿನ ಲಾಕ್‌ಡೌನ್‌ ಆಗಿತ್ತು. ಅನಿವಾರ್ಯವಾಗಿ ಹೋಟೆಲ್‌ ಮುಚ್ಚಿದ್ದೆವು. ಇದೀಗ ಸರ್ಕಾರ ಹೋಟೆಲ್‌ ಸೇವೆ ನೀಡಲು ಅನುಮತಿ ನೀಡಿದೆ. ಆದರೆ, ವೈರಸ್‌ ಹಬ್ಬುತ್ತಿರುವುದರಿಂದ ಜನರು ಹೋಟೆಲ್‌ಗಳಿಂದ ದೂರ ಉಳಿಯುವ ಆತಂಕವಿದೆ ಎಂದು ಆತಂಕ ಹೇಳಿಕೊಂಡರು.

ಜಿಲ್ಲಾಡಳಿತ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ ಧರಿಸುವಿಕೆಯನ್ನು ಕಡ್ಡಾಯಗೊಳಿಸಬೇಕು. ಈ ಹಿಂದಿನಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ವೈರಸ್‌ ಹಬ್ಬುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ನಗರದ ಪ್ರಜ್ಞಾವಂತರ ಅಭಿಮತ. ನಗರದಲ್ಲಿ ಮಾಸ್ಕ್‌ ಧರಿಸುವವರು ಕಡಿಮೆಯಾಗುತ್ತಿದ್ದಾರೆ. ಹಳ್ಳಿಯಿಂದ ಬಂದವರಲ್ಲಿ ಅರಿವಿದೆ. ಆದರೆ, ಪ್ರಜ್ಞಾವಂತ, ವಿದ್ಯಾವಂತರಂತೆ ಕಾಣುವವರೇ ಮಾಸ್ಕ್‌ ಧರಿಸುತ್ತಿಲ್ಲ. ಸಾಮಾಜಿಕ ಅಂತರದ ಕಡೆ ಗಮನ ಕೊಡುತ್ತಿಲ್ಲ. ಇದು ಅಪಾಯದ ಸಂಕೇತ. ನಿರ್ಲಕ್ಷ್ಯ ವಹಿಸಿದರೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಎಂದು ಕಿಚನ್‌ ಹೋಟೆಲ್‌ ಮಾಲೀಕ ಹರೀಶ್‌ ರೇಣುಕಾ ಅವರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios