ಬೆಂಗಳೂರು(ಫೆ.13): ನಿರ್ಭಯಾ ನಿಧಿಯಡಿ ರಾಜಧಾನಿ ಬೆಂಗಳೂರು ನಗರ ಸುರಕ್ಷಾ ಯೋಜನೆಯಲ್ಲಿ 670 ಕೋಟಿ ಮೊತ್ತದ ಸಿಸಿಟಿವಿ ಆಳವಡಿಸುವ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣವಾಗಿ ರದ್ದುಗೊಳಿಸದೆ ಹೊಸ ನಿಯಮಾನುಸಾರ ಹರಾಜಿನಲ್ಲಿ ಪಾಲ್ಗೊಳ್ಳಲು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವಕಾಶ ನೀಡಿದ್ದಾರೆ.

ಈ ಟೆಂಡರ್‌ ಅರ್ಜಿ ಸಲ್ಲಿಕೆ ಫೆ.8ರಂದು ಕೊನೆಯ ದಿನವಾಗಿತ್ತು. ಆದರೆ ಟೆಂಡರ್‌ನಲ್ಲಿ ಕೆಲವು ತಾಂತ್ರಿಕ ನಿಯಮಗಳನ್ನು ಪರಿಷ್ಕರಿಸಿರುವ ಆಯುಕ್ತರು, ಟೆಂಡರ್‌ ಹರಾಜಿನಲ್ಲಿ ಪಾಲ್ಗೊಳ್ಳಲು ಮಾ.10ರವರೆಗೆ ಅವಕಾಶ ಕಲ್ಪಿಸಿದ್ದಾರೆ. ಇದರಿಂದ ಈ ಮೊದಲು ಚಾಲ್ತಿಯಲ್ಲಿದ್ದ ಕೆಲವು ನಿಯಮಗಳಿಂದ ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಾಗದ ಕಂಪನಿಗಳಿಗೆ ಮರು ಪ್ರವೇಶ ಸಿಕ್ಕಂತಾಗಿದೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಶುಕ್ರವಾರ ಮಾತನಾಡಿದ ಆಯುಕ್ತ ಕಮಲ್‌ ಪಂತ್‌ ಅವರು, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ವಿಚಾರದಲ್ಲಿ ಬೆಂಗಳೂರು ನಗರ ಪೊಲೀಸರು ಸಂಪೂರ್ಣ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಾರೆ. ನಿರ್ಭಯಾ ನಿಧಿಯಡಿ ಸಿಸಿಟಿವಿ ಅಳವಡಿಸುವ ಯೋಜನೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಐಪಿಎಸ್‌ ಜಟಾಪಟಿಗೆ ಕಾರಣವಾಗಿದ್ದ ಟೆಂಡರ್‌ ರದ್ದು?

ಯೋಜನೆಯ ಟೆಂಡರ್‌ನಲ್ಲಿ ಮೊದಲು ರೂಪಿಸಿದ್ದ ತಾಂತ್ರಿಕ ನಿಯಮಗಳಲ್ಲಿ ಕೆಲವನ್ನು ಪುನರ್‌ ಪರಿಶೀಲನೆಗೊಳಪಡಿಸಲಾಗಿದೆ. ಆದರೆ ಟೆಂಡರ್‌ ಮೂಲ ಆರ್‌ಎಫ್‌ಪಿ (ರಿಕ್ವೆಸ್ಟ್‌ ಫಾರ್‌ ಪ್ರಪೋಸಲ್‌) ಮಾತ್ರ ಯಥಾಸ್ಥಿತಿಯಲ್ಲೇ ಉಳಿಸಿಕೊಳ್ಳಲಾಗಿದೆ. ಈ ಸಂಬಂಧ ಸರ್ಕಾರದ ಮುಖ್ಯಕಾರ್ಯದರ್ಶಿಗಳ ನೇತೃತ್ವದ ಉನ್ನತ ಮಟ್ಟದ ಸಮಿತಿ ಮುಂದೆ ಕೂಡಾ ಪ್ರಸ್ತಾಪಿಸಲಾಗಿದೆ. ಈ ಬೀಡ್‌ನಲ್ಲಿ ಪಾಲ್ಗೊಳ್ಳುವ ಕೊನೆ ದಿನಾಂಕವನ್ನು ಮಾ.10ವರೆಗೆ ಮುಂದೂಡಲಾಗಿದೆ. ಹರಾಜಿನಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಆಯುಕ್ತರು ಹೇಳಿದರು.

ರೂಪಾ ಆಕ್ಷೇಪಕ್ಕೆ ಗೆಲುವು

ಐಜಿಪಿ ಡಿ.ರೂಪಾ ಅವರು ಬಲವಾದ ಆಕ್ಷೇಪ ಎತ್ತಿದ ಪರಿಣಾಮ ನಗರ ಸುರಕ್ಷಾ ಯೋಜನೆಯ ಟೆಂಡರ್‌ ನಿಯಮಾವಳಿಯಲ್ಲಿ ಬದಲಾವಣೆಯಾಗಿದೆ ಎನ್ನಲಾಗಿದೆ. ಈ ಯೋಜನೆಯ ಟೆಂಡರ್‌ ಪ್ರಕ್ರಿಯೆ ಪಾರದರ್ಶವಾಗಿಲ್ಲ. ಖಾಸಗಿ ಕಂಪನಿ ಪರವಾಗಿ ಕೆಲವರು ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಗೃಹ ಕಾರ್ಯದರ್ಶಿ ಆಗಿದ್ದಾಗ ರೂಪಾ ಪತ್ರ ಬರೆದಿದ್ದರು. ಈ ಬಗ್ಗೆ ಸಾಕಷ್ಟುವಾದ ಪ್ರತಿವಾದವೂ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ರೂಪಾ ಅವರ ಆಕ್ಷೇಪಗಳನ್ನು ಪರಿಗಣಿಸಿದ ಸರ್ಕಾರ ಟೆಂಡರ್‌ನ ತಾಂತ್ರಿಕ ನಿಯಮಾವಳಿಗಳಲ್ಲಿ ಪರಿಷ್ಕರಣೆ ತರಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.