Asianet Suvarna News Asianet Suvarna News

ಧಾರವಾಡ ಎಂದರೆ ರವಿಗೆ ಎಲ್ಲಿಲ್ಲದ ಪ್ರೀತಿ, ಬಳ್ಳಾರಿಯಿಂದ ಬೈಕ್‌ ಮೇಲೆ ಬಂದಿದ್ದ ಬೆಳಗೆರೆ..!

ಧಾರವಾಡದ ಕವಿವಿಯಲ್ಲಿ ಎಂ.ಎ. ಇತಿಹಾಸ ಕಲಿತ ರವಿ| ಧಾರವಾಡದಲ್ಲಿ ಅನೇಕ ಸ್ನೇಹಿತರನ್ನು ಒಳಗೊಂಡಿದ್ದ ರವಿ ಬೆಳಗೆರೆ| ಹಾಯ್‌ ಬೆಂಗಳೂರು ಪ್ರಾರಂಭಿಸಿದ ಮೇಲೆ ಪ್ರತಿವರ್ಷಕ್ಕೆ ಒಂದು ಬಾರಿಯಾದರೂ ಯಾವುದಾದರೂ ಕೆಲಸದ ಮೇಲೆ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದ ಬೆಳಗೆರೆ| 

Ravi Belagere Loves Dharwad grg
Author
Bengaluru, First Published Nov 14, 2020, 12:54 PM IST

ಬಸವರಾಜ ಹಿರೇಮಠ/ಶಿವಾನಂದ ಗೊಂಬಿ

ಧಾರವಾಡ(ನ.14): ತಮ್ಮ ಬರಹದ ಮೂಲಕವೇ ಓದುಗರ ಗಮನ ಸೆಳೆಯುತ್ತಿದ್ದ ಹಿರಿಯ ಪತ್ರಕರ್ತ ದಿ. ರವಿ ಬೆಳಗೆರೆ ಅವರಿಗೆ ಧಾರವಾಡ ಎಂದರೆ ಬಹು ಪ್ರೀತಿ. ಇಲ್ಲಿಯೇ ಉನ್ನತ ಶಿಕ್ಷಣ ಪಡೆದ ಅವರನ್ನು ಧಾರವಾಡ ಪರಿಸರ, ಸ್ನೇಹಿತರ ಬಾಂಧವ್ಯ ಪದೇ ಪದೇ ಸೆಳೆಯುತ್ತಿತ್ತು. ಹೀಗಾಗಿಯೇ ಧಾರವಾಡಕ್ಕೆ ಅವರು ಬಂದು ಹೋಗಿದ್ದು ಲೆಕ್ಕವೇ ಇಲ್ಲ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಪದವಿ ಪಡೆದ ಬೆಳಗೆರೆ ಆರಂಭದಲ್ಲಿ ಉಪನ್ಯಾಸ ವೃತ್ತಿ ಆರಂಭಿಸಿದ್ದರು. ಆದರೆ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ ಕಾರಣ ಬರಹದತ್ತ ವಾಲಿದರು.

ಧಾರವಾಡದಲ್ಲಿ ಸಾಹಿತಿ, ರಂಗಭೂಮಿ ಕಲಾವಿದರ ಜೊತೆಗೆ ಉತ್ತಮ ನಂಟು ಹೊಂದಿದ್ದ ರವಿ ಬೆಳಗೆರೆ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಗಿರಡ್ಡಿ ಗೋವಿಂದರಾಜ ನೇತೃತ್ವದ ಅಂತರಂಗ ತಂಡದ ನಾಟಕಗಳು ನಡೆಯುತ್ತಿದ್ದವು. ಆ ತಂಡಗಳ ಜೊತೆಗೆ ಬೆಳಗೆರೆ ನಿರಂತರ ಸಂಪರ್ಕ ಹೊಂದಿದ್ದರು. ಭಾಷಾತಜ್ಞ ಡಾ. ಎ. ಮುರಿಗೆಪ್ಪ ಅವರು ಪ್ರೊ. ತಾರಾನಾಥ ಎಂಬ ಇಂಗ್ಲೀಷ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಆ ನಾಟಕದಲ್ಲಿ ಬೆಳಗೆರೆ ಪ್ರೊ. ತಾರನಾಥ ಪಾತ್ರವನ್ನು ನಿಭಾಯಿಸಿದ್ದು ಇದೀಗ ಸ್ಮರಣೆ ಮಾತ್ರ.

ತದ ನಂತರ ಪತ್ರಕರ್ತರಾಗಿ, ಬರಹಗಾರರಾದ ರವಿ ಬೆಳಗೆರೆ ಧಾರವಾಡ ಜೊತೆಗೆ ನಿರಂತರ ಸಂಪರ್ಕ ಹೊಂದ್ದಿದರು. ಸಮಾರಂಭವೊಂದರಲ್ಲಿ ಖ್ಯಾತ ಮನೋಶಾಸ್ತ್ರಜ್ಞ ಡಾ. ಆನಂದ ಪಾಂಡುರಂಗಿ ಸಂಪರ್ಕಕ್ಕೆ ಬಂದು ನಂತರ ಅವರ ಕುಟುಂಬದಲ್ಲಿ ಒಬ್ಬರಾಗಿದ್ದರು ಬೆಳಗೆರೆ.

ರವಿ ಬೆಳಗೆರೆ ಕುಟುಂಬದ ಸದಸ್ಯರಲ್ಲಿ  ಒಬ್ಬರಾಗಿದ್ದರು. ಅವರು ಮಾತ್ರವಲ್ಲದೇ ಅವರ ಪತ್ನಿ, ಮಕ್ಕಳು ಇಡೀ ಕುಟುಂಬ ನಮ್ಮ ಮನೆಯಲ್ಲಿ ವಾರ, ಹದಿನೈದು ದಿನಗಳ ಕಾಲ ಇರುತ್ತಿದ್ದರು. ಅವರು ಬಂದರೆ ನಮಗೆ ಹಬ್ಬದ ವಾತಾವರಣ. ಸಣ್ಣವರೊಂದಿಗೆ ಸಣ್ಣವರಾಗಿ, ದೊಡ್ಡವರೊಂದಿಗೆ ದೊಡ್ಡವರಾಗಿ ಇರುತ್ತಿದ್ದರು. ಅವರೊಂದಿಗೆ ತಡರಾತ್ರಿ ವರೆಗೂ ಹರಟೆ ಹೊಡೆಯುತ್ತಿದ್ದೇವು. ಬೆಳಗೆರೆ ಬಗ್ಗೆ ತುಂಬ ಗೌರವವಿದೆ. ಯಾವುದೇ ವಿಷಯದ ಬಗ್ಗೆ, ಸಾಹಿತ್ಯ, ಸಂಗೀತ, ಚಿತ್ರರಂಗ, ಹೊರದೇಶಗಳ ಮಾಹಿತಿಗೆ ಹೀಗೆ ಗಂಟೆಗಟ್ಟಲೇ ಮಾತನಾಡುವ ಕಲೆ, ಜ್ಞಾನ ಅವರಲ್ಲಿತ್ತು. ಅದಕ್ಕಿಂತ ಅದ್ಭುತ ಓದುಗರು ಹೌದು. ಒಬ್ಬ ಬರಹಗಾರನಾಗಬೇಕೆಂದರೆ ಉತ್ತಮ ಓದುಗ ಆಗಬೇಕು ಎನ್ನುವುದನ್ನು ಅವರಿಂದ ಮಾತ್ರ ಕಲಿಯಬಹುದು. ಮನೆಯಲ್ಲಿ ಕುಳಿತೇ ಹಲವು ಪುಸ್ತಕಗಳನ್ನು ಸಹ ಬರೆದಿದ್ದಾರೆ ಎಂದು ಮನೋರೋಗ ತಜ್ಞ ಡಾ. ಆದಿತ್ಯ ಪಾಂಡುರಂಗಿ ಸ್ಮರಿಸಿಕೊಂಡರು.

ಬೀಚಿ ನನ್ನ ತಂದೆ, ಅವರನ್ನು ಸಾರ್‌ ಅಂತ ಕರೀತಿದ್ದೆ:ರವಿ ಬೆಳಗೆರೆ

ಬಳ್ಳಾರಿಯಿಂದ ಬೈಕ್‌ ಮೇಲೆ ಬಂದಿದ್ದ ಬೆಳಗೆರೆ!

ಅಕ್ಷರ ಲೋಕದ ಮಾಂತ್ರಿಕ ಎಂದೇ ಹೆಸರು ಪಡೆದಿದ್ದ ರವಿ ಬೆಳಗೆರೆಗೂ ಹುಬ್ಬಳ್ಳಿಗೂ ಅವಿನಾಭವ ನಂಟು. ಕೆಲಕಾಲ ಹುಬ್ಬಳ್ಳಿಯನ್ನು ತಮ್ಮ ಕರ್ಮಭೂಮಿ ಮಾಡಿಕೊಂಡಿದ್ದ ರವಿ, ಇಲ್ಲಿ ಸಾಹಿತ್ಯ ವಲಯ, ಪತ್ರಕರ್ತರು, ರಂಗಕರ್ಮಿಕ ಹೀಗೆ ಎಲ್ಲ ರಂಗಗಳ ಸ್ನೇಹವಲಯವನ್ನು ಸೃಷ್ಟಿಸಿಕೊಂಡವರು.

ರವಿ ಬೆಳಗೆರೆ ಆರಂಭಿಸಿದ್ದು ಬರೀ ‘ಹಾಯ್‌ ಬೆಂಗಳೂರು’ ಎಂಬ ವಾರಪತ್ರಿಕೆಯಷ್ಟೇ ಅಲ್ಲ. ಅದಕ್ಕೂ ಮುನ್ನ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಎಂ.ಎ.ಇತಿಹಾಸ ಮುಗಿಸಿಕೊಂಡು ಬಳ್ಳಾರಿಗೆ ತೆರಳಿದ ಬಳಿಕ ‘ಕ್ರೈಂ ನ್ಯೂಸ್‌’ ಎಂಬ ವಾರ ಪತ್ರಿಕೆಯನ್ನು ನಡೆಸಿದ್ದುಂಟು. ಈ ಕ್ರೈಂ ನ್ಯೂಸ್‌ ವಾರಪತ್ರಿಕೆಯನ್ನು ಮುದ್ರಿಸುವುದಕ್ಕಾಗಿ ಬಳ್ಳಾರಿಯಿಂದ ಪ್ರತಿವಾರ ಬೈಕ್‌ ಮೇಲೆ ಹುಬ್ಬಳ್ಳಿಗೆ ಬರುತ್ತಿದ್ದರು. ಆಗ ನಾಡೋಜ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರ ಮುದ್ರಣಾಲಯದಲ್ಲಿ ಕ್ರೈಂ ನ್ಯೂಸ್‌ ಪತ್ರಿಕೆಯನ್ನು ಮುದ್ರಿಸಿಕೊಂಡು ತೆಗೆದುಕೊಂಡು ಹೋಗಿ ಹಂಚುತ್ತಿದ್ದರು. ಆದರೆ ಅದು ಹೆಚ್ಚು ದಿನ ನಡೆಯಲಿಲ್ಲ.

ತಮ್ಮ ವಾರಪತ್ರಿಕೆ ಮುಚ್ಚಿದ ಬಳಿಕ ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕರಾಗಿ ಕೆಲಸಕ್ಕೆ ಸೇರಿದ್ದರು. ಕೆಲವೇ ದಿನಗಳಲ್ಲೇ ತಮ್ಮ ಮಾತುಗಾರಿಕೆಯಿಂದಲೇ ಎಲ್ಲರನ್ನು ಮೋಡಿ ಮಾಡಿ ದೊಡ್ಡ ಸ್ನೇಹ ಬಳಗವನ್ನೇ ಸೃಷ್ಟಿಸಿಕೊಂಡಿದ್ದರು. ಮುಂದೆ ಸಂಯುಕ್ತ ಕರ್ನಾಟಕದಲ್ಲಿ ಮುಷ್ಕರ ನಡೆದಾಗ ಆಡಳಿತ ಮಂಡಳಿ ಪರವಾಗಿ ನೌಕರರ ಸಂಘವನ್ನು ಕಟ್ಟಲು ಶ್ರಮಿಸಿದವರಲ್ಲಿ ರವಿ ಬೆಳಗೆರೆ ಕೂಡ ಒಬ್ಬರು. ಅದರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭ ಹಾಗೂ ಕಸ್ತೂರಿ ನೋಡಿಕೊಳ್ಳುತ್ತಿದ್ದರು. ಕಸ್ತೂರಿಯಲ್ಲಿ ‘ಆರೋಗ್ಯದಂಗಳ’ ಎಂಬ ಅಂಕಣವನ್ನು ಪ್ರಾರಂಭಿಸಿದ್ದೆ ರವಿ ಬೆಳಗೆರೆ. ಈ ಅಂಕಣಕ್ಕಾಗಿ ಪ್ರತಿ ತಿಂಗಳು ವಿವಿಧ ರೋಗಗಳ ಒಬ್ಬೊಬ್ಬ ತಜ್ಞ ವೈದ್ಯರ ಸಂದರ್ಶನ ನಡೆಸಿ ಲೇಖನ ಪ್ರಕಟಿಸುತ್ತಿದ್ದರು. ಆ ಅಂಕಣ ಓದುಗರ ಅಚ್ಚುಮೆಚ್ಚಾಗಿತ್ತು. ಕರ್ಮವೀರ ಮುಚ್ಚಿದ್ದನ್ನು ಪುನಾರಂಭಿಸಿದ ಕೀರ್ತಿ ರವಿ ಬೆಳಗೆರೆ ಅವರಿಗೆ ಸಲ್ಲುತ್ತದೆ ಎಂದು ಅವರ ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.

ಖುಲ್ಲಂಖುಲ್ಲಂ ಮಾತುಗಾರ, ಖಾಸ್‌ ಬಾತ್ ಕಿಂಗ್ ರವಿ ಬೆಳಗೆರೆ ಮಾತುಗಳಿವು!

ಈಗಿನ ಫೋನ್‌ ಇನ್‌ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ರವಿ ಬೆಳಗೆರೆ. ಚಿತ್ರನಟ ಅನಂತನಾಗ ಅವರನ್ನು ಬೆಂಗಳೂರಿನಿಂದ ಕರೆದುಕೊಂಡು ಬಂದು ಸಂಯುಕ್ತ ಕರ್ನಾಟಕದಲ್ಲಿ ಪೋನ್‌ ಇನ್‌ ಕಾರ್ಯಕ್ರಮ ನಡೆಸಿದ್ದರು. ಪತ್ರಿಕಾ ಜಗತ್ತಿನಲ್ಲೇ ಈ ರೀತಿ ಫೋನ್‌ ಇನ್‌ ಕಾರ್ಯಕ್ರಮ ಪರಿಚಯಿಸಿದ್ದು ಅದೇ ಮೊದಲು. ಹೀಗೆ ಇಲ್ಲಿ ಸಂಯುಕ್ತ ಕರ್ನಾಟಕದಲ್ಲಿ ಇದ್ದಷ್ಟುದಿನ ಎಲ್ಲರೊಂದಿಗೆ ಬೆರೆಯುತ್ತಾ ತಮ್ಮ ಹಲವು ಕೃತಿಗಳಿಗೆ ರೂಪ ನೀಡಿದ್ದು ಇದೇ ಹುಬ್ಬಳ್ಳಿಯಲ್ಲಿ.

ಕೆಲಸದಾಚೆ ಸ್ನೇಹ:

ಇನ್ನೂ ಕೆಲಸಾದಾಚೆಯೂ ಹುಬ್ಬಳ್ಳಿಯೊಂದಿಗೆ ಬಹಳ ನಂಟು ಇಟ್ಟುಕೊಂಡವರು ರವಿ. ಇಲ್ಲಿನ ಕೆಲ ಸಾಹಿತಿಗಳು ನಿರ್ದೇಶಿಸಿದ್ದ, ರಚಿಸಿದ್ದ ನಾಟಕಗಳನ್ನು ಅಭಿನಯಿಸಿದ್ದರು. ಇಲ್ಲಿಂದ ಬೆಂಗಳೂರಿಗೆ ತೆರಳಿದ ಮೇಲೂ ಹುಬ್ಬಳ್ಳಿಯ ನಂಟು ಬಿಟ್ಟಿರಲಿಲ್ಲ.

ಹಾಯ್‌ ಬೆಂಗಳೂರು ಪ್ರಾರಂಭಿಸಿದ ಮೇಲೆ ಪ್ರತಿವರ್ಷಕ್ಕೆ ಒಂದು ಬಾರಿಯಾದರೂ ಯಾವುದಾದರೂ ಕೆಲಸದ ಮೇಲೆ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದರು. ಹೀಗೆ ಹುಬ್ಬಳ್ಳಿಗೆ ಬಂದಾಗ ಕಡ್ಡಾಯವಾಗಿ ತಮ್ಮ ಸ್ನೇಹ ವಲಯವನ್ನು ಕಂಡು ಹರಟೆ ಹೊಡೆದು ತೆರಳುತ್ತಿದ್ದರು ಎಂದು ಅವರ ಒಡನಾಡಿ ಗಣೇಶ ಜೋಶಿ ನೆನಪಿಸಿಕೊಳ್ಳುತ್ತಾರೆ.

ಕಿಮ್ಸ್‌, ಎಸ್‌ಡಿಎಂನಲ್ಲಿ ಚಿಕಿತ್ಸೆ:

ಇನ್ನೂ ಕಳೆದ ಐದು ವರ್ಷದ ಹಿಂದೆ ರವಿ ಬೆಳಗೆರೆ ಇಲ್ಲಿನ ಎಸ್‌ಡಿಎಂ ಹಾಗೂ ಕಿಮ್ಸ್‌ನಲ್ಲಿ ದಾಖಲಾಗಿ ಏಳೆಂಟು ದಿನ ಚಿಕಿತ್ಸೆ ಪಡೆದಿದ್ದರು. ಆಗ ಇವರ ಬಂಧನದ ವಾರೆಂಟ್‌ ಇಸ್ಯೂ ಆಗಿತ್ತು. ಸುದ್ದಿಯೊಂದಕ್ಕೆ ಸಂಬಂಧಪಟ್ಟಂತೆ ಸ್ಪೀಕರ್‌ ಆಗಿದ್ದ ಕೆ.ಬಿ.ಕೋಳಿವಾಡ ಕೇಸ್‌ ದಾಖಲಿಸಿದ್ದರು. ಒಟ್ಟಿನಲ್ಲಿ ರವಿ ಬೆಳಗೆರೆ ಹುಬ್ಬಳ್ಳಿಯೊಂದಿಗೆ ಅವಿನಾಭವ ನಂಟು ಹೊಂದಿದ್ದರು ಎಂಬುದು ಮಾತ್ರ ಸುಳ್ಳಲ್ಲ.
 

Follow Us:
Download App:
  • android
  • ios