Asianet Suvarna News Asianet Suvarna News

Belagavi: ಪಡಿತರ ಅಕ್ಕಿಯೂ ಕಾಳಸಂತೆಯಲ್ಲಿ ಮಾರಾಟ?

ರಾಜ್ಯದಲ್ಲಿ ಅನೇಕ ಬಡ ಕುಟುಂಬಗಳು ಹೊಟ್ಟೆಗೆ ಆಹಾರವಿಲ್ಲದೆ ಜೀವ ಬಿಡುವ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರದಿಂದ ಬರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವುದು ವಿಪರ್ಯಾಸ. ಮನೆ ಮನೆಗೆ ತೆರಳಿ ಅಕ್ರಮವಾಗಿ ಸಂಗ್ರಹಿಸಿ ಬೃಹತ್‌ ಗೋದಾಮುಗಳಲ್ಲಿ ಸಂಗ್ರಹಿಸಿ ಅಕ್ಕಿ ಪಾಲಿಶ್‌ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

Ration rice also sold in blackmarket at belagavi rav
Author
First Published Feb 3, 2023, 3:17 PM IST

ಭೀಮಶಿ ಭರಮಣ್ಣವರ

ಗೋಕಾಕ (ಫೆ.3) : ರಾಜ್ಯದಲ್ಲಿ ಅನೇಕ ಬಡ ಕುಟುಂಬಗಳು ಹೊಟ್ಟೆಗೆ ಆಹಾರವಿಲ್ಲದೆ ಜೀವ ಬಿಡುವ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರದಿಂದ ಬರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿರುವುದು ವಿಪರ್ಯಾಸ. ಮನೆ ಮನೆಗೆ ತೆರಳಿ ಅಕ್ರಮವಾಗಿ ಸಂಗ್ರಹಿಸಿ ಬೃಹತ್‌ ಗೋದಾಮುಗಳಲ್ಲಿ ಸಂಗ್ರಹಿಸಿ ಅಕ್ಕಿ ಪಾಲಿಶ್‌ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದು ಅನೇಕ ಕಾಣದ ಕೈಗಳು ಈ ದಂಧೆಯಲ್ಲಿ ಭಾಗಿಯಾಗಿವೆ ಎನ್ನಲಾಗಿದೆ. ಸುಮಾರು 30ಕ್ಕೂ ಅಧಿಕ ಅಕ್ರಮ ಅನ್ನಭಾಗ್ಯ ಅಕ್ಕಿ ಸಂಗ್ರಹಕಾರರಿದ್ದು ಅವರು ತಮ್ಮ ಗ್ರಾಮದಿಂದ ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ತೆರಳಿ ಮತ್ತು ನ್ಯಾಯ ಬೆಲೆ ಅಂಗಡಿಕಾರರಿಂದ ಪ್ರತಿ ಕೆಜಿ ಅಕ್ಕಿಗೆ .10ರಿಂದ .12ಗೆ ಖರೀದಿಸುತ್ತಾರೆ. ಖರೀದಿಸಿದ ಅಕ್ಕಿ ಗೋದಾಮಿನಲ್ಲಿ ಸಂಗ್ರಹಿಸಿ ಕಾಗವಾಡ, ಕೊಲ್ಹಾಪೂರ, ಸೊಲ್ಲಾಪೂರ, ಮುಂಬೈ, ರಾಜಸ್ಥಾನ, ಗುಜರಾತವರೆಗೆ ಪ್ರತಿ ಕೆಜಿ ಅಕ್ಕಿಗೆ .35 ಅಧಿಕ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ.

ಅನ್ನಭಾಗ್ಯಕ್ಕೆ ಖದೀಮರ ಕನ್ನ..!

ಗುಣಮಟ್ಟದ ಅಕ್ಕಿ ಜತೆ ಮಿಕ್ಸಿಂಗ್‌:

ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಅಷ್ಟೇ ಅಲ್ಲದೇ ಜಿಲ್ಲೆಯ ಎಲ್ಲ ತಾಲೂಕಿನಿಂದ ಸಂಗ್ರಹವಾದ ಅನ್ನಭಾಗ್ಯ ಅಕ್ಕಿ ರೈಸ್‌ ಮಿಲ್‌ಗಳಿಗೆ ಹೆಚ್ಚಿನ ಬೆಲೆಗೆ ಸರಬರಾಜಾಗುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಅನ್ನಭಾಗ್ಯ ಅಕ್ಕಿ ಖರೀದಿಸುವ ರೈಸ್‌ ಮಿಲ್‌ ಮಾಲೀಕರು ಅಕ್ಕಿ ಪಾಲಿಶ್‌ ಮಾಡಿ ತಮ್ಮ ಗುಣಮಟ್ಟದ ಅಕ್ಕಿಯೊಂದಿಗೆ ಪ್ರತಿ ಕ್ವಿಂಟಾಲ್‌ಗೆ 15 ರಿಂದ 20 ಕೆಜಿವರೆಗೆ ಬೆರೆಸಿ 25 ಕೆಜಿ ಬ್ಯಾಗ್‌ ಮಾಡಿ ದಿನಸಿ ಅಂಗಡಿ, ಹೋಟೆಲ್‌ಗಳ ಮೂಲಕ ಗ್ರಾಹಕರಿಗೆ ಸರಬರಾಜು ಮಾಡಲಾಗುತ್ತಿದೆ. ಇದರ ಬಗ್ಗೆ ಜಿಲ್ಲೆ ಮತ್ತು ತಾಲೂಕು ಮಟ್ಟದ ಆಹಾರ ಇಲಾಖೆ ಅಧಿಕಾರಿಗಳ ಗಮನದಲ್ಲಿ ಇಲ್ಲವೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಅನ್ಯ ರಾಜ್ಯದ ಪಾಲು:

ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಕೈತನಾಳ, ಮದವಾಲ, ಸಂಗನಕೇರಿ, ರಾಜಾಪುರ, ತಳಕಟ್ನಾಳ, ಮೂಡಲಗಿಯ ಹಳ್ಳೂರ, ಕಲ್ಲೋಳ್ಳಿ ಸೇರಿ ಹೀಗೆ 30ಕ್ಕೂ ಹೆಚ್ಚು ಅಕ್ರಮ ಅಕ್ಕಿ ಸಂಗ್ರಹ ಮಾಡುವ ಗೋದಾಮುಗಳಿದ್ದು ಈ ಎಲ್ಲ ಗೋದಾಮುಗಳಿಂದ ಸಂಗ್ರಹವಾದ ಅಕ್ಕಿ ಹುಕ್ಕೇರಿ, ಕಾಗವಾಡಕ್ಕೆ ಸಾಗಾಟ ಮಾಡಲಾಗುತ್ತದೆ. ಗೋಕಾಕ ನಗರ ಹಾಗೂ ತಾಲೂಕಿನಿಂದ ಸಂಗ್ರಹವಾದ ಅಕ್ಕಿ ಹುಕ್ಕೇರಿ ಸಾಗಾಟವಾಗುತ್ತಿದ್ದು, ಅಲ್ಲಿಂದ ಕೊಲ್ಹಾಪೂರ, ಸೋಲ್ಲಾಪೂರ, ರಾಜಸ್ಥಾನ ಮತ್ತು ಗುಜರಾತಗೆ ರಫ್ತಾಗುತ್ತದೆ. ಮೂಡಲಗಿ ತಾಲೂಕಿನ ಅಕ್ರಮವಾಗಿ ಸಂಗ್ರಹವಾದ ಅಕ್ಕಿಯು ಕಾಗವಾಡಕ್ಕೆ ಅಲ್ಲಿಂದಲ್ಲೂ ಮಹಾರಾಷ್ಟ್ರಕ್ಕೆ ಹೋಗುತ್ತಿರುವುದು ಕಂಡುಬಂದಿದೆ.

ಗೋಕಾಕ, ಮೂಡಲಗಿ ಅಷ್ಟೇ ಅಲ್ಲದೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಹಾವೇರಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ಬೆಳಗಾವಿ ಮಾರ್ಗವಾಗಿಯೇ ಕೊಲ್ಹಾಪೂರ, ಸೊಲ್ಲಾಪೂರ, ಮುಂಬೈ, ರಾಜಸ್ಥಾನ, ಗುಜರಾತವರೆಗೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟವಾಗುತ್ತಿದೆ. ಗದಗ, ಹುಬ್ಬಳ್ಳಿ-ಧಾರವಾಡ, ಹಾವೇರಿಯಿಂದ ಬೆಳಗಾವಿ ಜಿಲ್ಲೆ ಹತ್ತರಗಿ ಟೋಲ್‌ ನಾಕಾ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯರಾತ್ರಿ ಸಾಗಾಟವಾಗುತ್ತದೆ.

ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಬಡವರಿಗೆ ನೀಡುವ ಅಕ್ಕಿಯ ಮೇಲೆ ಖನ್ನಹಾಕಿದ ಖದೀಮರಿಗೆ ಕಠಿಣ ಶಿಕ್ಷೆ ಯಾವಾಗ? ಜಿಲ್ಲಾಡಳಿತ, ಆಹಾರ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಮೌನವಾಗಿರುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದ್ದು, ಇನ್ನಾದರೂ ಸರ್ಕಾರ ಕಠಿಣ ಕ್ರಮಕೈಗೊಳ್ಳುವುದೇ ಎಂದು ಕಾದು ನೋಡಬೇಕಿದೆ.

ಬಾಗಲಕೋಟೆ: ಸಸಾಲಟ್ಟಿ ಪಡಿತರ ಅಕ್ಕಿಯಲ್ಲಿ ಕಂಡುಬಂದ ಪ್ಲಾಸ್ಟಿಕ್‌ ಅಕ್ಕಿ?

ಈಗಾಗಲೇ ನಮ್ಮ ಗಮನಕ್ಕೆ ಬಂದಿರುವ ದೂರು ಆಧರಿಸಿ ದೂರು ದಾಖಲಿಸಿಕೊಳ್ಳಲಾಗಿದೆ. ಗೋಕಾಕ ನಗರದಲ್ಲಿ ಎರಡು ಪ್ರಕರಣ, ಅಂಕಲಗಿ ಗ್ರಾಮದಲ್ಲಿ ಒಂದು ಪ್ರಕರಣ, ಘಟಪ್ರಭಾದಲ್ಲಿ ಒಂದು ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಮತ್ತೆ ಯಾವುದೇ ದೂರು ಬಂದಲ್ಲಿ ಕ್ರಮ ಜರುಗಿಸಲಾಗುವುದು.

- ಐ.ಬಿ.ದೇಯನ್ನವರ, ಉಪತಹಶೀಲ್ದಾರ ಆಹಾರ ಇಲಾಖೆ ಗೋಕಾಕ

Follow Us:
Download App:
  • android
  • ios