ಅತ್ಯಾಚಾರ ತಪ್ಪಿಸಿದ ಮೊಬೈಲ್‌ ಪ್ಯಾನಿಕ್‌ ಬಟನ್‌: ಡ್ರಾಪ್‌ ನೆಪದಲ್ಲಿ ಅಪರಿಚಿತನಿಂದ ಕೃತ್ಯ

ಸಿಲಿಕಾನ್‌ ಸಿಟಿ ಬೆಂಗಳೂರಿನ ನಿರ್ಜನ ಪ್ರದೇಶದಲ್ಲಿ ಕಾಮುಕನೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಆದರೆ ಸಂತ್ರಸ್ತೆ ತನ್ನ ಮೊಬೈಲ್‌ನಲ್ಲಿನ ಪ್ಯಾನಿಕ್‌ ಬಟನ್‌ ಒತ್ತಿ ಸಂದೇಶ ಕಳಿಸಿದ ಪರಿಣಾಮ ಆಕೆಯ ಸ್ನೇಹಿತರು ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ. 

Rape avoided mobile panic button Act by stranger on the pretext of drop in bengaluru gvd

ಬೆಂಗಳೂರು (ಆ.19): ಸಿಲಿಕಾನ್‌ ಸಿಟಿ ಬೆಂಗಳೂರಿನ ನಿರ್ಜನ ಪ್ರದೇಶದಲ್ಲಿ ಕಾಮುಕನೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಆದರೆ ಸಂತ್ರಸ್ತೆ ತನ್ನ ಮೊಬೈಲ್‌ನಲ್ಲಿನ ಪ್ಯಾನಿಕ್‌ ಬಟನ್‌ ಒತ್ತಿ ಸಂದೇಶ ಕಳಿಸಿದ ಪರಿಣಾಮ ಆಕೆಯ ಸ್ನೇಹಿತರು ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ 7ನೇ ಸೆಕ್ಟರ್‌ನ ರಾಜೀವ್‌ ಗಾಂಧಿನಗರದ ಹೊಸೂರು ಮುಖ್ಯರಸ್ತೆಯ ಬಳಿಯ ಗಿರಿಯಾಸ್‌ ಶೋ ರೂಮ್‌ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಭಾನುವಾರ ಮುಂಜಾನೆ 1 ಗಂಟೆಯಿಂದ 1.30 ಗಂಟೆ ನಡುವೆ ಈ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತೆಯ ಸ್ನೇಹಿತ ಹರ್ಷವರ್ಧನ್‌ ಚೌಹಾಣ್‌ ಎಂಬುವವರು ನೀಡಿದ ದೂರಿನ ಮೇರೆಗೆ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಯ ಪತ್ತೆಗೆ 40 ಪೊಲೀಸರ 5 ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ನೇಹಿತರ ಜತೆ ಪಾರ್ಟಿ
ಹೊರರಾಜ್ಯದ ಸಂತ್ರಸ್ತೆ ನಗರದ ಚಂದಾಪುರದಲ್ಲಿ ವಾಸಿಸುತ್ತಿದ್ದು, ಹೊರವಲಯದ ಖಾಸಗಿ ಕಾಲೇಜೊಂದರಲ್ಲಿ ಬಿಬಿಎ ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸಂತ್ರಸ್ತೆ ಹಾಗೂ ಸ್ನೇಹಿತರು ಶನಿವಾರ ರಾತ್ರಿ ಕೋರಮಂಗಲದ ಪಬ್‌ನಲ್ಲಿ ಪಾರ್ಟಿ ಮುಗಿಸಿದ ಬಳಿಕ ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಕಾರಿನಲ್ಲಿ ಹೊರಟ್ಟಿದ್ದಾರೆ. ಕೋರಮಂಗಲದ ಫೋರಂ ಮಾಲ್‌ ಬಳಿ ಸ್ನೇಹಿತ ಚಲಾಯಿಸುತ್ತಿದ್ದ ಕಾರು ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಆಟೋ ಚಾಲಕ ಹಾಗೂ ಸಂತ್ರಸ್ತೆ ಸ್ನೇಹಿತನ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.

ಮುಡಾ ಪ್ರಕರಣದಲ್ಲಿ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಹೋರಾಟ ಮಾಡಲು ಸಿದ್ದ: ಸಿಎಂ ಸಿದ್ದರಾಮಯ್ಯ

ಅಪರಿಚಿತ ಬೈಕ್‌ ಸವಾರನ ಜತೆಗೆ ಡ್ರಾಪ್‌
ಅಷ್ಟರಲ್ಲಿ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದಾಗ ಗಾಬರಿಗೊಂಡ ಸಂತ್ರಸ್ತೆ ಅಪರಿಚಿತ ದ್ವಿಚಕ್ರ ವಾಹನ ಸವಾರನ ಬಳಿ ಡ್ರಾಪ್‌ ಕೇಳಿದ್ದಾಳೆ. ಆತ ಸಂತ್ರಸ್ತೆಯನ್ನು ಸುಮಾರು ಎರಡು ಕಿ.ಮೀ. ವರೆಗೆ ಡ್ರಾಪ್‌ ನೀಡಿ ಹೊರಟು ಹೋಗಿದ್ದಾನೆ.

ಮೊಬೈಲ್‌ನಲ್ಲಿ ಪ್ಯಾನಿಕ್‌ ಬಟನ್‌ ಒತ್ತಿದ ಸಂತ್ರಸ್ತೆ
ಬಳಿಕ ಮತ್ತೊಬ್ಬ ಅಪರಿಚಿತ ದ್ವಿಚಕ್ರ ವಾಹನ ಸವಾರನನ್ನು ಸಂತ್ರಸ್ತೆ ಡ್ರಾಪ್‌ ಕೇಳಿದ್ದಾಳೆ. ಆತ ಸಂತ್ರಸ್ತೆಯನ್ನು ಕೂರಿಸಿಕೊಂಡು ಸ್ವಲ್ಪ ದೂರ ಹೋಗಿ ಮಾರ್ಗ ಬದಲಾಯಿಸಿದ್ದಾನೆ. ಈ ವೇಳೆ ಆತಂಕಗೊಂಡ ಸಂತ್ರಸ್ತೆ ತನ್ನ ಮೊಬೈಲ್‌ನಲ್ಲಿ ತುರ್ತು ಸಂದರ್ಭಗಳಲ್ಲಿ ಬಳಸುವ ಎಸ್‌ಒಎಸ್‌(ಸೇವ್‌ ಅವರ್‌ ಸೋಲ್‌) ಬಟನ್‌ ಒತ್ತಿದ್ದಾಳೆ. ಆಗ ಸಂತ್ರಸ್ತೆಯ ಸ್ನೇಹಿತೆ ಮತ್ತು ಸ್ನೇಹಿತನ ಮೊಬೈಲ್‌ಗೆ ತುರ್ತು ಸಂದೇಶ ಹಾಗೂ ಸಂತ್ರಸ್ತೆ ಇದ್ದ ಸ್ಥಳದ ಲೊಕೇಶನ್‌ ಹೋಗಿದೆ. ಅಷ್ಟರಲ್ಲಿ ದ್ವಿಚಕ್ರ ವಾಹನ ಸವಾರ ಎಚ್‌ಎಸ್‌ಆರ್‌ ಲೇಔಟ್‌ 7ನೇ ಸೆಕ್ಟರ್‌ನ ರಾಜೀವ್‌ಗಾಂಧಿನಗರದ ಹೊಸೂರು ಮುಖ್ಯರಸ್ತೆಯ ಬಳಿಯ ಗಿರಿಯಾಸ್‌ ಶೋ ರೂಮ್‌ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಸಂತ್ರಸ್ತೆಯನ್ನು ಕರೆದೊಯ್ದಿದ್ದಾನೆ. ಈ ವೇಳೆ ಸಂತ್ರಸ್ತೆಯನ್ನು ಬೆತ್ತಲೆ ಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಸಂತ್ರಸ್ತೆಯು ಸಾಕಷ್ಟು ಪ್ರತಿರೋಧವೊಡ್ಡಿದ್ದಾಳೆ. ಕಾಮುಕನ ಮುಖವನ್ನು ಪರಚಿ ಗಾಯಗೊಳಿಸಿದ್ದಾಳೆ ಎಂದು ತಿಳಿದು ಬಂದಿದೆ.

ದೂರಿನಲ್ಲಿ ಏನಿದೆ
ಇತ್ತ ಪ್ಯಾನಿಕ್‌ ಬಟನ್‌ ಸಂದೇಶ ತಲುಪಿದ ಕೂಡಲೇ ಸ್ನೇಹಿತೆ ಸಂತ್ರಸ್ತೆಯ ಕರೆ ಮಾಡಿದ್ದಾಳೆ. ಆದರೆ, ಸಂತ್ರಸ್ತೆ ಕರೆ ಸ್ವೀಕರಿಸಿಲ್ಲ. ಬಳಿಕ ಆತಂಕಗೊಂಡ ಸ್ನೇಹಿತೆ, ಈ ತುರ್ತು ಸಂದೇಶದ ಬಗ್ಗೆ ಸ್ನೇಹಿತ ಹರ್ಷವರ್ಧನ್‌ಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಹರ್ಷವರ್ಧನ್‌, ಸಂತ್ರಸ್ತೆ ಮೊಬೈಲ್‌ನಿಂದ ಬಂದಿದ್ದ ಲೊಕೇಶನ್‌ ಆಧಾರದ ಮೇಲೆ ಹೊಸೂರು ಸರ್ವಿಸ್ ರಸ್ತೆಯ ಗಿರಿಯಾಸ್‌ ಶೋ ರೂಮ್‌ ಹಿಂಭಾಗದ ನಿರ್ಜನ ಪ್ರದೇಶಕ್ಕೆ ತೆರಳಿ ಹುಡುಕಾಡಿದ್ದಾರೆ. ಈ ವೇಳೆ ಲಾರಿಯ ಹಿಂಭಾಗ ಸಂತ್ರಸ್ತೆ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬೆತ್ತಲೆಯಾಗಿ ಬಿದ್ದಿರುವುದನ್ನು ನೋಡಿದ್ದಾರೆ.
ಪ್ಯಾಂಟ್‌ ಧರಿಸಿ ನಿಂತಿದ್ದ ವ್ಯಕ್ತಿ ಪರಾರಿ:

ಈ ವೇಳೆ ಆಕೆಯ ಮೇಲೆ ಕೆಂಪು ಬಣ್ಣದ ಜಾಕೆಟ್‌ ಇರುವುದು ಕಂಡು ಬಂದಿದೆ. ಬಳಿಕ ಹರ್ಷವರ್ಧನ್‌ ತನ್ನ ಬಟ್ಟೆಯಿಂದ ಸಂತ್ರಸ್ತೆಯ ಮೈ ಮುಚ್ಚಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಮತ್ತೊಬ್ಬ ಸ್ನೇಹಿತ ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಇಬ್ಬರೂ ಸೇರಿಕೊಂಡು ಕಾರಿನ ಸೀಟ್‌ ಕವರ್‌ನಿಂದ ಸಂತ್ರಸ್ತೆಯ ದೇಹ ಮುಚ್ಚಿ ಕಾರಿನಲ್ಲಿ ಮಲಗಿಸಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕೇವಲ ಪ್ಯಾಂಟ್‌ ಧರಿಸಿ ಗಾಬರಿಯಲ್ಲಿ ನಿಂತಿರುವುದು ಕಂಡು ಬಂದಿದೆ. ಆತನ ಮುಖದಲ್ಲಿ ಪರಚಿದ ಗಾಯ ನೋಡಿದ್ದಾರೆ. ಬಳಿಕ ಇಬ್ಬರೂ ಸೇರಿ ಆತನನ್ನು ಹಿಡಿದುಕೊಳ್ಳಲು ಮುಂದಾದಾಗ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅಸ್ವಸ್ಥೆಯನ್ನು ಸ್ನೇಹಿತರಿಬ್ಬರೂ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಪರಿಶೀಲಿಸಿ ಹರ್ಷವರ್ಧನ್‌ ರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಂಕಾಸ್ಪದ ವ್ಯಕ್ತಿ ವಶಕ್ಕೆ?
ದೂರು ದಾಖಲಾದ ಬೆನ್ನಲ್ಲೇ ಪೊಲೀಸರು, ಪಬ್‌, ಆಟೋಗೆ ಡಿಕ್ಕಿಯಾದ ಸ್ಥಳ ಹಾಗೂ ಸಂತ್ರಸ್ತೆ ದ್ವಿಚಕ್ರ ವಾಹನದಲ್ಲಿ ಡ್ರಾಪ್‌ ಪಡೆದ ಸ್ಥಳ ಸೇರಿದಂತೆ ಸುತ್ತಮುತ್ತಲ ಕಟ್ಟಡಗಳ ನೂರಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಈ ವೇಳೆ ಸಿಕ್ಕ ಸುಳಿವಿನ ಮೇರೆಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಾರ್ಟಿಯಲ್ಲಿ ಸಂತ್ರಸ್ತೆ ಮದ್ಯ ಸೇವನೆ?
ಪಬ್‌ವೊಂದರಲ್ಲಿ ನಡೆದ ಪಾರ್ಟಿಯಲ್ಲಿ ಸಂತ್ರಸ್ತೆಯ ಸ್ನೇಹಿತ ಮದ್ಯ ಸೇವಿಸಿರುವುದು ಕಂಡು ಬಂದಿದೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುವಾಗ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಇನ್ನೂ ಸಂತ್ರಸ್ತೆಯು ಸಹ ಪಾರ್ಟಿಯಲ್ಲಿ ಮದ್ಯ ಸೇವಿಸಿದ್ದಾಳೆ ಎನ್ನಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ನೇರ ಆರೋಪಿಗಳು: ಸಂಸದ ಜಗದೀಶ್‌ ಶೆಟ್ಟರ್

ಡ್ರಾಪ್‌ ನೀಡುವ ಸಂದರ್ಭವನ್ನು ಅಪರಿಚಿತ ದ್ವಿಚಕ್ರ ವಾಹನ ಸವಾರ ದುರ್ಬಳಕೆ ಮಾಡಿಕೊಂಡು ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸದ್ಯ ಸಂತ್ರಸ್ತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಘಟನೆ ಸಂಬಂಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಯ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ
-ರಮಣ್‌ ಗುಪ್ತಾ, ಹೆಚ್ಚುವರಿ ಪೊಲೀಸ್‌ ಆಯುಕ್ತ

Latest Videos
Follow Us:
Download App:
  • android
  • ios