ತಿಪಟೂರು (ಅ.28):  ಇತ್ತೀಚಿನ ಹಲವಾರು ವರ್ಷಗಳಿಂದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದುರಾಸೆ, ಅನಾಚಾರ, ಅನ್ಯಾಯ, ಅಧರ್ಮ ಮಾರ್ಗಗಗಳಿಂದ ಬದುಕು ಕಟ್ಟಿಕೊಳ್ಳಲು ಮುಂದಾಗಿರುವುದರಿಂದಲೇ ಇಂದು ಮನುಕುಲವನ್ನೇ ನಾಶಮಾಡುವಂತ ಮಹಾಮಾರಿ ಕೊರೋನಾ ವೈರಸ್‌ ಸೇರಿದಂತೆ ಪ್ರಳಯಾಂತಕಕಾರಿ ಪ್ರವಾಹಗಳು ವಿಶ್ವದಾದ್ಯಂತ ಉಂಟಾಗುತ್ತಿವೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಶ್ರೀಮಠದ ಗುರುಪರಂಪರೆಯಂತೆ ಮಂಗಳವಾರ ಬೆಳಿಗ್ಗೆ ತಾಲೂಕಿನ ಕೆರೆಗೋಡಿ ಮಹಾನವಮಿ ಮಂಟಪದ ತೋಪಿನಲ್ಲಿ ಅಂಬುಹಾಯಿಸುವ (ಶಮಿಪೂಜೆ) ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ನಂತರ ಶ್ರೀಗಳು ಮಾತನಾಡಿದರು.

ಕೊರೋನಾ ಲಸಿಕೆಯ ಪ್ರಯೋಗಕ್ಕೆ ಒಳಗಾದ ಮೈಸೂರಿನ ವೈದ್ಯೆ, ಸುವರ್ಣ ನ್ಯೂಸ್ ಜತೆ ಮಾತು..!

ಮನುಷ್ಯ ತನ್ನ ಅಹಂಕಾರಿ ವರ್ತನೆಯಿಂದ ದೇವರು, ಧರ್ಮ ಮಾರ್ಗ, ಗುರು-ಹಿರಿಯರು ಸೇರಿದಂತೆ ಎಲ್ಲ ಉತ್ತಮ ಪರಂಪರೆಗಳಿಗೆ ಅಪಚಾರ, ಅವಮಾನ ಮಾಡಿಕೊಂಡೇ ಮುನ್ನುಗ್ಗುತ್ತಿದ್ದಾನೆ. ಈ ಬಗ್ಗೆ ಎಚ್ಚರಿಸಲೆಂದೇ ಪ್ರಕೃತಿ ಮುನಿಯತೊಡಗಿದ್ದು ಇದಕ್ಕೆ ಇತ್ತೀಚಿಗೆ ವಕ್ಕರಿಸಿರುವ ಕೊರೋನಾ ವೈರಸ್‌ ಹಾಗೂ ಎಡಬಿಡದೆ ಉಂಟಾಗುತ್ತಿರುವ ಪ್ರಳಯಾಸುರನಾದ ಪ್ರವಾಹಗಳು ತಾಜಾ ಉದಾಹರಣೆಯಾಗಿವೆ. ಯಾವಾಗ ಮಾನವನಲ್ಲಿ ಭಯ-ಭಕ್ತಿಗಳು ಮಾಯವಾಗಿ ದುರಾಲೋಚನೆಗಳು ಮನೆ ಮಾಡುತ್ತಿವೆಯೋ ಅವುಗಳನ್ನು ಭಗವಂತ, ಗುರುಗಳು ಸೇರಿದಂತೆ ಪ್ರಕೃತಿಮಾತೆಯೂ ಸಹಿಸಲಾರಳು. ಹಾಗಾಗಿ ಮನುಕುಲದ ಉದ್ಧಾರಕ್ಕಾಗಿ ಇನ್ನು ಮುಂದಾದರೂ ಮನುಷ್ಯ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಧೈವಭಕ್ತಿ, ನಂಬಿಕೆ, ಸರಳತೆ, ಹೆತ್ತವರನ್ನು ಗೌರವಿಸುವ ಗುಣಗಳನ್ನು ಪೋಷಿಸುತ್ತ ಪ್ರಕೃತಿಗೆ ಸೆಡ್ಡುಹೊಡೆಯುವಂತ ದುರಂಹಕಾರಗಳನ್ನು ಕೈಬಿಡುವ ಬಗ್ಗೆ ಮುಂದಾಗಬೇಕೆಂದು ತಿಳಿಸಿದರು. 

ಶ್ರೀಕ್ಷೇತ್ರದ ಆರಾಧ್ಯ ದೈವರಾದ ಶ್ರೀಶಂಕರೇಶ್ವರ ಮತ್ತು ಶ್ರೀ ರಂಗನಾಥಸ್ವಾಮಿಯವರ ಕೃಪೆ ಹಾಗೂ ಹಿರಿಯ ಗುರುಗಳ ತಪೋಶಕ್ತಿಯಿಂದ ಮುಂದಿನ ದಿನಮಾನಗಳಲ್ಲಿ ನಾಡಿಗೆ ಒದಗಿ ಬಂದಿರುವ ಸಂಕಷ್ಟಗಳು ದೂರವಾಗಿ ಆಶಾದಾಯಕ ದಿನಗಳು ಬರಲಿವೆ ಎಂದು ಶ್ರೀಗಳು ತಿಳಿಸಿದರು.

ಶತ್ರುಗಳ ಸಂಹಾರ ಪ್ರತೀಕವಾದ ಆಯುಧ ಪೂಜೆ, ವಿಜಯದಶಮಿ ಹಾಗೂ ಅಂಬುಹಾಯಿಸುವ ಕಾರ್ಯಕ್ರಮಗಳು ಹಿಂದೂ ದೇಶದ ಅತ್ಯಂತ ಪಾವಿತ್ರ್ಯವಾದ ಹಬ್ಬಗಳು. ನಾಡಿನಲ್ಲಿ ಉಂಟಾಗಿರುವ-ಉಂಟಾಗಲಿರುವ ಕೆಟ್ಟಶಕ್ತಿಗಳನ್ನು ಮಟ್ಟಹಾಕಿ ಶಾಂತಿ, ನೆಮ್ಮದಿಗಾಗಿ ಇವುಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಾರತೀಯ ಪರಂಪರೆಯಲ್ಲಿ ಶತ್ರುಗಳನ್ನು, ಭ್ರಷ್ಟಾಚಾರಿಗಳನ್ನು ಮತ್ತು ದೌರ್ಜನ್ಯ ನಡೆಸುವವರನ್ನು ಸದೆಬಡಿದು ದೇಶಕ್ಕೆ, ಸಮಾಜದ ಒಳತಿಗಾಗಿ ದೇವರು, ದೇವತೆಗಳನ್ನು ಪೂಜಿಸುವ ಮೂಲಕ ಒಳಿತನ್ನು ಆಶಿಸುವ ಈ ಸಂದರ್ಭದಲ್ಲಿ ಮಾನವ ಕುಲಕ್ಕೆ ಯಾವುದೇ ಕೆಡುಕುಂಟಾಗದೆ ಒಳ್ಳೆಯದಾಗಲೆಂದು ಶ್ರೀಗಳು ತಿಳಿಸಿದರು.