ಬೆಳಗಾವಿ(ಮಾ.28): ಇಂದು ಬೆಳಗಾವಿಗೆ ಆಗಮಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಪ್ರತಿಭಟ‌ನಾ ಬಿಸಿ ತಟ್ಟುವ ಸಾಧ್ಯತೆ ಇದೆ. ಹೌದು, ರಾಸಲೀಲೆ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಂತ್ರಸ್ತ ಯುವತಿಯ ಸಹೋದರ ನೇರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಬೆಂಬಲಿಗರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಇಂದು ಸಂಜೆ 6.30ಕ್ಕೆ ಬೆಳಗಾವಿಗೆ ಡಿಕೆಶಿ ಆಗಮಿಸಲಿದ್ದಾರೆ. ಈ ವೇಳೆ ರಮೇಶ್ ಜಾರಕಿಹೊಳಿ‌ ಬೆಂಬಲಿಗರ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಸಿಡಿ ಪ್ರಕರಣ ಮಧ್ಯೆಯೂ ಡಿಕೆಶಿ ಚುನಾವಣಾ ರಣತಂತ್ರ ಹೆಣೆದಿದ್ದಾರೆ. ಶತಾಯಗತಾಯ ಬೆಳಗಾವಿ ಲೋಕಸಭಾ ಕ್ಷೇತ್ರವನ್ನ ಕಾಂಗ್ರೆಸ್‌ ವಶಕ್ಕೆ ಪಡೆದುಕೊಳ್ಳಲು ಡಿಕೆಶಿ ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇಂದು(ಭಾನುವಾರ) ಸಂಜೆ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಸಭೆ ನಡೆಸಲಿರುವ ಡಿ.ಕೆ.ಶಿವಕುಮಾರ್‌ ಅವರು, ಚುನಾವಣಾ ಪ್ರಚಾರ ರೂಪರೇಷೆ ಬಗ್ಗೆ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಹಾಲಿ, ಮಾಜಿ ಶಾಸಕರ ಜತೆ ಸಭೆ ನಡೆಸಲಿದ್ದಾರೆ.

ಇಡೀ ಕೇಸ್ ಮಹಾನಾಯಕ ಡಿಕೆಶಿ ಷಡ್ಯಂತ್ರ, 11 ಸಾಕ್ಷ್ಯಗಳನ್ನೂ SIT ಗೆ ಕೊಡ್ತೀನಿ: ಜಾರಕಿಹೊಳಿ

ಕಾಂಗ್ರೆಸ್ ವೋಟ್ ಬ್ಯಾಂಕ್ ಜೊತೆಗೆ ಇತರ ಮತಗಳನ್ನು ಸೆಳೆಯಲು ರಣತಂತ್ರ ಹೆಣೆಯಲಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳನ್ನ ನೇಮಕ ಮಾಡಿ ನಿರ್ದೇಶನ ಹೊರಡಿಸಲಿದ್ದಾರೆ. ಸಿಡಿ ವಿಚಾರ ಪ್ರಸ್ತಾಪಿಸಿ ಮತಬೇಟೆಗೆ ಇಳಿಯಬೇಕಾ ಎಂಬ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಸಿಡಿ ವಿಚಾರ ಚುನಾವಣೆ ಮೇಲೆ ಪ್ರಭಾವ ಬೀರಲ್ಲ 

ಸಿಡಿ ವಿಚಾರ ಚುನಾವಣೆ ಮೇಲೆ ಪ್ರಭಾವ ಬೀರಲ್ಲ. ಈ ಬಗ್ಗೆ ವರಿಷ್ಠರ ಜೊತೆ ಚರ್ಚಿಸುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 

ಡಿಕೆಶಿ ವಿರುದ್ಧ ಪ್ರತಿಭಟನೆ

ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ‌ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಷಡ್ಯಂತ್ರ ಆರೋಪದ ಬಗ್ಗೆ ಜಿಲ್ಲೆಯ ಗೋಕಾಕ್‌ ನಗರದಲ್ಲಿ ಇಂದು ರಮೇಶ್ ಜಾರಕಿಹೊಳಿ‌ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. 

ಸಿಡಿಯಲ್ಲಿದ್ದ ಸಂತ್ರತ್ತ ಯುವತಿಯ ಸಹೋದರ ಡಿಕೆಶಿ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ.

ಯುವತಿ ಪೋಷಕರಿಗೆ ತೀವ್ರ ವಿರೋಧ

ಇನ್ನು ಸಿಡಿ ಪ್ರಕರಣದಲ್ಲಿದ್ದ ಎನ್ನಲಾದ ಸಂತ್ರಸ್ತ ಯುವತಿಯ ಪೋಷಕರು ಬೆಳಗಾವಿಯಲ್ಲಿ ವಾಸವಿದ್ದ ಬಾಡಿಗೆ ಮನೆಗೆ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಂದ ಬೆಳಗಾವಿಗೆ ಬಂದಿದ್ದಾರೆ. ಎಪಿಎಂಸಿ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಗೆ ಬೆಳಗಿನ ಜಾವ 4.30ಕ್ಕೆ ಪೊಲೀಸರು ಬಂದು ಹೋಗಿದ್ದಾರೆ.  ಈ ವೇಳೆ ಮನೆ ಮಾಲೀಕರಿಂದ ಯುವತಿ ಪೋಷಕರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ನೀವು ಹೋದಮೇಲೆ ಪೊಲೀಸರು, ಮಾಧ್ಯಮದವರು ಬಂದಿದ್ರು, ನಮಗೆ ಮುಜುಗುರವಾಗುತ್ತಿದೆ. ಹೀಗಾಗಿ ನೀವು ನಿಮ್ಮ ಊರಿಗೆ ಹೋಗಿಬಿಡಿ ಎಂದು ಮನೆ ಮಾಲೀಕರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಎಪಿಎಂಸಿ ಸಿಪಿಐ ದಿಲೀಪ್‌ ಕುಮಾರ್‌ ಅವರು ಮನೆ ಮಾಲೀಕರನ್ನ ಮನವೊಲಿಸಿ ಬಾಡಿಗೆ ಮನೆಯಲ್ಲಿರಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.