ರಮೇಶ್ ಜಾರಕಿಹೊಳಿ  ರಾಜೀನಾಮೆ ನೀಡಿದ್ದು ಈ ಸಂಬಂಧ ಹಲವೆಡೆ ಆಕ್ರೋಶ ಭುಗಿಲೆದ್ದಿದೆ. ಗೋಕಾಕ್‌ನಲ್ಲಿ ಪ್ರತಿಭಟನೆ ತೀವ್ರವಾಗಿದೆ. 

 ಗೋಕಾಕ (ಮಾ.04): ಸಿಡಿ ಪ್ರಕರಣವೊಂದರಲ್ಲಿ ಸಚಿವ ಸ್ಥಾನಕ್ಕೆ ರಮೇಶ ಜಾರಕಿಹೊಳಿ ಬುಧವಾರ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಅವರ ತವರು ಕ್ಷೇತ್ರ ಗೋಕಾಕದಲ್ಲಿ ಅವರ ಅಭಿಮಾನಿಗಳು, ಬೆಂಬಲಿಗರು ಸ್ವಯಂಪ್ರೇರಿತ ಬಂದ್‌ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಯಾವ ಕಾರಣಕ್ಕೂ ರಾಜೀನಾಮೆಯನ್ನು ಅಂಗೀಕರಿಸದಂತೆ ಟೈರ್‌ಗೆ ಬೆಂಕಿ ಹಚ್ಚಿ, ರಸ್ತೆ ತಡೆ ಪ್ರತಿಭಟನೆಯನ್ನೂ ನಡೆಸಿದರು. ಕೆಲ ಅಭಿಮನಿಗಳು ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದು ಸಕಾಲದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಅನಾಹುತ ತಪ್ಪಿಸಿದರು.

ಗೋಕಾಕ ನಗರದಲ್ಲಿ ಮಾತ್ರವಲ್ಲದೆ ಗೋಕಾಕ್‌ ಫಾಲ್ಸ್‌, ಕೊಣ್ಣೂರ, ಮಮದಾಪುರ, ಪಾರನಟ್ಟಿಕ್ರಾಸ್‌, ಘಟಪ್ರಭಾದಲ್ಲೂ ಅಭಿಮಾನಿಗಳು ರಸ್ತೆತಡೆ ಪ್ರತಿಭಟನೆ ನಡೆಸಿದರು. ಇದೆವೇಳೆ ಬಸ್‌ಗಳ ಮೇಲೆಯೂ ಕಲ್ಲು ತೂರಾಟವಾದ ಘಟನೆ ನಡೆದಿದ್ದು, ನಾಲ್ಕೈದು ಬಸ್‌ಗಳ ಗಾಜುಗಳು ಒಡೆದಿವೆ. ಬಂದ್‌ ವೇಳೆ ಬಸ್‌ ಸಂಚಾರ ಸ್ಥಗಿತವಾಗಿದ್ದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ನ್ಯೂಸ್ ಅವರ್; ರಮೇಶ್ ರಾಜೀನಾಮೆ, ಇನ್ನೂ ಮೂವರದ್ದು ಇದೆಯಂತೆ!

ರಮೇಶ ಜಾರಕಿಹೊಳಿ ರಾಜೀನಾಮೆ ನೀಡುತ್ತಿದ್ದಂತೆ ಬೆಂಬಲಕ್ಕೆ ನಿಂತ ಗೋಕಾಕ ಬಿಜೆಪಿ ನಾಯಕರು, ಅಭಿಮಾನಿಗಳು ನಗರದ ರಮೇಶ್‌ ಜಾರಕಿಹೊಳಿ ನಿವಾಸದ ಮುಂದೆ ಜಮಾಯಿಸಿ, ಅಲ್ಲಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಿರೋಧಿಗಳು ಎಷ್ಟೇ ಷಡ್ಯಂತ್ರ ರೂಪಿಸಿದರೂ ತಮ್ಮ ಪರವಾಗಿ ನಾವಿದ್ದೇವೆ ಎಂದು ಘೋಷಣೆಗಳನ್ನು ಕೂಗುತ್ತ ನಗರದಲ್ಲಿ ಅಳವಡಿಸಿದ ರಮೇಶ ಜಾರಕಿಹೊಳಿ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಜೈಕಾರ ಕೂಗಿದರು.

ಗೋಕಾಕ್‌ ಮಿಲ್‌ನ ಕಾರ್ಮಿಕರೂ ಮಧ್ಯಾಹ್ನದ ನಂತರ ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಿದರು. ರಮೇಶ್‌ ಜಾರಕಿಹೊಳಿ ಮಿಲ್‌ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾದ ಹಿನ್ನೆಲೆ ಬೆಂಬಲ ಸೂಚಿಸಿ ಪ್ರತಿಭಟಿಸಿದರು. ಬಳಿಕ ರಮೇಶ ಜಾರಕಿಹೊಳಿ ಕರೆಯ ಮೂಲಕ ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಿದರು. ಹೀಗಾಗಿ ವಾತಾವರಣ ತಿಳಿಯಾಗಿದ್ದು, ನಾಳೆಗೆ ಕರೆ ನೀಡಲಾಗಿದ್ದ ಗೋಕಾಕ ಬಂದ್‌ ಅನ್ನು ಮೊಟಕುಗೊಳಿಸಲಾಗಿದೆ.