ಬೆಳಗಾವಿ (ಅ.29): ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅವರು ಬಿಜೆಪಿಗೆ ಬರುವಂತೆ ಆಹ್ವಾನಿಸಿದ ಘಟನೆ ಬೆಳಗಾವಿಯಲ್ಲಿ  ನಡೆದಿದೆ.

ಹೌದು, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ನಡೆಸುತ್ತಿದ್ದ ಹೋರಾಟದ ವೇದಿಕೆಯಲ್ಲಿ ಇಂತಹದ್ದೊಂದು ಘಟನೆ ಸಾಕ್ಷಿಯಾಯಿತು. ಹೋರಾಟದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಕೂಡ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ವಿನಯ್‌ ಕುಲಕರ್ಣಿ ಮನವಿ ಅರ್ಪಿಸಿದರು. 

ಕಾಂಗ್ರೆಸ್ ಮಾಜಿ ಸಚಿವ ಬಿಜೆಪಿ ಸೇರ್ತಾರಾ? ...

ಜತೆಗೆ ಸಮುದಾಯದ ಮನವಿಗೆ ಸ್ಪಂದಿಸುವಂತೆ ಅಲ್ಲಿಯೇ ಮನವಿಯೊಂದನ್ನು ಮುಂದಿಟ್ಟರು. ಆಗ ಸಚಿವ ರಮೇಶ್‌ ಜಾರಕಿಹೊಳಿ ಅವರು ‘ನೀನೆ ಬಿಜೆಪಿಗೆ ಬರ್ತಿಯಲ್ಲಾ’ ಎಂದು ಹೇಳಿಬಿಟ್ಟರು. ಆಗ ಅಲ್ಲಿದ್ದವರು ಕಕ್ಕಾಬಿಕ್ಕಿಯಾದರು. ಆದರೆ ಸಂದರ್ಭ ಅರಿತ ವಿನಯ್‌ ಕುಲಕರ್ಣಿ ಕೈಮುಗಿದು ನಸುನಕ್ಕಿ ಸುಮ್ಮನಾದರು. ಆದರೆ ಅವರ ನಗು ಮಾತ್ರ ಬೇರೆಯದೇ ಸಂದೇಶ ನೀಡುವಂತಿತ್ತು.

ಈ ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ವಿನಯ್‌ ಕುಲಕರ್ಣಿ, ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ನನ್ನನ್ನು ಬಿಜೆಪಿಗೆ ಕರೆದರು. ನಾನು ಅವರಿಗೆ ಕೈಮುಗಿದು ಸುಮ್ಮನಾದೆ. ಬಿಜೆಪಿಗೆ ಹೋಗುವ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.