ಬೆಳಗಾವಿ(ಡಿ.09): ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೇಲೆ ಮುಖದ ಮೇಲೆ ಹೊಡೆದ ಹಾಗೇ ಜನ ತೀರ್ಮಾನ ಕೊಟ್ಟಿದ್ದಾರೆ. ನಮ್ಮ ವಿರುದ್ಧ ಹಲವರು ಸುಳ್ಳು ಪ್ರಚಾರ ಮಾಡಿದ್ದರು. ಮಹಾರಾಷ್ಟ್ರ ಹರಿಯಾಣದಲ್ಲಿ ಪಕ್ಷಾಂತರಿಗಳಿಗೆ ವಿರುದ್ಧ ಮತಗಳು ಬಂದಿದ್ದವು, ಆದರೆ, ನಮ್ಮ ರಾಜ್ಯದ ಜನ ಜನತಾ ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ಕೊಟ್ಟಿದೆ ಎಂದು ಗೋಕಾಕ್ ಕ್ಷೇತ್ರದ ವಿಜೇತ ಅಭ್ಯರ್ಥಿ ರಮೇಶ ಜಾರಕಿಹೊಳಿ‌ ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಉಪಚುನಾವಣೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಚೆನ್ನಾಗಿ ಎಲೆಕ್ಷನ್ ಮಾಡಿದ್ದಾರೆ ಅವರಿಗೂ ವಂದನೆಗಳು, ಸಿದ್ದರಾಮಯ್ಯ ಇಂದಿಗೂ ನಮ್ಮ ನಾಯಕರಾಗಿದ್ದಾರೆ. ಆದರೆ ಎಂಟಿಬಿ ನಾಗರಾಜ್ ಸೋಲಿಸುವ ಉದ್ದೇಶದಿಂದ ಸಿದ್ದರಾಮಯ್ಯ ಕುರುಬ ಸಮುದಾಯದ ಹೆಣ್ಣು ಮಗಳನ್ನು ನಿಲ್ಲಿಸಿದ್ರು, ಎಂಟಿಬಿ ನಾಗರಾಜ್‌ಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ. 

LIVE: ಬಿಜೆಪಿ ನಾಗಲೋಟ, ಕುಂಟಿದ ಕಾಂಗ್ರೆಸ್, ಮುಗ್ಗರಿಸಿದ ಜೆಡಿಎಸ್

ಲಖನ್ ಜಾರಕಿಹೊಳಿ‌ ಇಂದಿನಿಂದ ನನ್ನ ತಮ್ಮ, ದೇವರು ಒಳ್ಳೆಯದು ಮಾಡಲಿ ಎಂದು ತಿಳಿಸಿದ್ದಾರೆ. ಹೆಣ್ಣು ಮಗಳಾಗಿ ಹೆಣ್ಣು ಮಗಳ ರೀತಿ ಇರೋದು ಒಳ್ಳೆಯದು. ಸಣ್ಣ ಮನೆತನದಿಂದ ಆರಿಸಿ ಬಂದವಳು ಮರಾಠಾ ಸಮುದಾಯದ ಮತಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ ಗೆದ್ದಿದ್ದಾರೆ. ಗಂಡಸ್ತನ ಬಗ್ಗೆ ಮಾತನಾಡ್ತಾರೆ, ಕುಮಠಳ್ಳಿಗೆ ಇಬ್ಬರು ಮಕ್ಕಳಿದ್ದಾರೆ. ದೇವರ ಸಾಕ್ಷಿಯಾಗಿ ನನ್ನ ಮಕ್ಕಳ ಆಣೆಗೂ ಆಕೆಯನ್ನು ಬಿಜೆಪಿಗೆ ಕರೆದಿಲ್ಲ ಎಂದು ಹೇಳಿದ್ದಾರೆ. 

ಲಕ್ಷ್ಮಿ ಹೆಬ್ಬಾಳ್ಕರ್ ವಿಷಕನ್ಯೆ, ಅವಳಿಂದ ಪಕ್ಷ ಹಾಳಾಗಿದೆ. ಭಸ್ಮಾಸುರ ಇತಿಹಾಸ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಗೊತ್ತಿಲ್ಲ ಆತನೊಬ್ಬ ಶೂರನಾಗಿದ್ದನು ಎಂದು ಹೇಳಿದ್ದಾರೆ. ನನಗೆ ಐವತ್ತು ಸಾವಿರಕ್ಕಿಂತ ಹೆಚ್ಚು ಲೀಡ್ ಬರಬೇಕಾಗಿತ್ತು, 25 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದೆ ಹೀಗಾಗಿ ಹತ್ತು ಸಾವಿರ ಮತಗಳು ಕಾಂಗ್ರೆಸ್‌ಗೆ ಹೋಗಿವೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜ್ಯ ಬಿಡೋದು ಒಳ್ಳೆಯದು ಎಂದು ತಿಳಿಸಿದ್ದಾರೆ.