Ramanagara: ಅನಧಿಕೃತ ಬ್ಯಾನರ್, ಫ್ಲೆಕ್ಸ್ ಅಳವಡಿಸಿದರೆ ಜೈಲು ಶಿಕ್ಷೆ!
ಇನ್ನು ಮುಂದೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಅನಧಿಕೃತವಾಗಿ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಅಳವಡಿಸಿದರೆ ಒಂದು ಸಾವಿರ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಅ.13): ಇನ್ನು ಮುಂದೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಅನಧಿಕೃತವಾಗಿ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಅಳವಡಿಸಿದರೆ ಒಂದು ಸಾವಿರ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ರಾಜಕೀಯ ಸಮಾವೇಶ, ರಾಜಕಾರಣಿಗಳ ಜನ್ಮದಿನ, ಸಮಾರಂಭ, ಜಯಂತಿ, ಉತ್ಸವ, ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಸ್ಟಿಕ್ಕರ್, ಭಿತ್ತಿಪತ್ರ, ಸ್ವಾಗತ ಕಮಾನುಗಳು ನಗರ ಮತ್ತು ಪಟ್ಟಣದ ಎಲ್ಲೆಡೆ ರಾರಾಜಿಸುತ್ತವೆ. ನಗರದ ಸೌಂದರ್ಯಕ್ಕೆ ಧಕ್ಕೆ ತರುವ, ಅನುಮತಿ ಪಡೆಯದ ಇಂತಹ ಅನಧಿಕೃತ ಪ್ರಚಾರದ ವಿರುದ್ಧ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳದೇ ಪಕ್ಷಪಾತ ಮಾಡುತ್ತದೆ ಎನ್ನುವ ಆರೋಪವಿತ್ತು.
ನಗರ - ಪಟ್ಟಣದಲ್ಲಿ ಹಬ್ಬ, ಉತ್ಸವ, ಜಾತ್ರೆ ಸಮಯದಲ್ಲೂ ಪೋಸ್ಟರ್, ಕಟೌಚ್, ಬ್ಯಾನರ್, ಫ್ಲೆಕ್ಸ್‌ಗಳನ್ನು ಹಾಕಿ ಶುಭಾಶಯ ಕೋರುವ ಕಾರ್ಯ ಜೋರಾಗಿರುತ್ತದೆ. ರಾಜಕೀಯ ನಾಯಕರ ಜನ್ಮದಿನಕ್ಕೆ ಶುಭಾಶಯ ಕೋರುವ, ಪ್ರಮುಖ ನಟರು ನಟಿಸಿದ ಚಿತ್ರಗಳ ಪೋಸ್ಟರ್‌ಗಳು ಸೇರಿ ಅಕ್ರಮ ಕಟೌಟ್‌ಗಳು, ಫ್ಲೆಕ್ಸ್‌ಗಳ ಹಾವಳಿ ಮುಂದುವರಿದಿದೆ. ಹೆಚ್ಚು ಜನಸಂದಣಿ ಇರುವ ಪ್ರಮುಖ ವೃತ್ತಗಳು ಸೇರಿ ಪಾದಚಾರಿ ಮಾರ್ಗಗಳಲ್ಲಿ, ವಿಭಜಕಗಳಲ್ಲಿರುವ ಬೀದಿ ದೀಪದ ಕಂಬಗಳು, ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನೂ ಸ್ಥಳೀಯ ಸಂಸ್ಥೆಗಳು ಮಾಡುತ್ತಿಲ್ಲ.
Ramanagara; ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಕಾಡಾನೆಗಳ ಹಿಂಡು, ಆತಂಕದಲ್ಲಿ ಗ್ರಾಮಸ್ಥರು
ನಿಯಮವಿದೆ, ಪಾಲನೆ ಇಲ್ಲ!: ನಗರದಲ್ಲಿ ಸಂಘ-ಸಂಸ್ಥೆಗಳು, ಕಾರ್ಯಕ್ರಮ ಆಯೋಜಕರು ತಮಗೆ ತೋಚಿದೆಡೆ ಬ್ಯಾನರ್‌ಗಳು, ಫ್ಲೆಕ್ಸ್‌ಗಳನ್ನು ಹಾಕುತ್ತಾರೆ. ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ ಪಾಲಿಸುತ್ತಿಲ್ಲ. ಕಾರ್ಯಕ್ರಮ ಮುಗಿದರೂ ಅವುಗಳನ್ನು ತೆರವು ಮಾಡುತ್ತಿಲ್ಲ. ಅಧಿಕಾರಿಗಳು ಯಾರ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಅನಧಿಕೃತ ಬ್ಯಾನರ್ ಮತ್ತು ಫ್ಲೆಕ್ಸ್‌ಗಳ ಹಾವಳಿ ಮಿತಿ ಮೀರಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್ ಗಳು ಮತ್ತು ಫ್ಲೆಕ್ಸ್ ಗಳನ್ನು ಅಳವಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯದೆ ಯಾವುದೇ ವ್ಯಕ್ತಿ ಅಥವಾ ಮತ್ತೊಬ್ಬ ವ್ಯಕ್ತಿ ಮೂಲಕ ಯಾವುದೇ ಜಾಹಿರಾತುಗಳನ್ನು ಪ್ರದರ್ಶಿಸುವುದಾಗಲೀ, ಅಳ್ಲಿ ಜಾಹಿರಾತುಗಳನ್ನು ನಿಲ್ಲಿಸುವುದಾಗಲೀ, ಬರಹಗಳ ಮೂಲಕವಾಗಲೀ ಪ್ರಕಟಿಸಿದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳು ಹಾಗೂ ತೆರೆದ ಸ್ಥಳಗಳು ಅಂದರೆ ಸಾರ್ವಜನಿಕ ಪ್ರವೇಶವಿರುವ ಅಥವಾ ಆಶ್ರಯಿಸುವ ಹಕ್ಕುವಿರುವ ಅಥವಾ ಹಾದು ಹೋಗಲು ಹಕ್ಕು ಇರುವ ರಸ್ತೆ, ಬೀದಿ, ರಸ್ತೆ ಮಾರ್ಗ, ನಿಲುಗಡೆ ಪ್ರದೇಶಗಳು ಒಳಗೊಂಡಿವೆ. ಖಾಸಗಿ ಸ್ಥಳ ಅಥವಾ ಸ್ಮಾರಕ, ಪ್ರತಿಮೆ, ಪೋಸ್ಟ್, ಗೋಡೆ, ಬೇಲಿ, ಮರಗಳಲ್ಲಿ ವ್ಯಕ್ತಿಗಳಿಗೆ ಕಾಣಿಸುವ ಹಾಗೆ ಜಾಹಿರಾತು ಪ್ರದರ್ಶಿಸುವುದು. ಜಾಹಿರಾತುಗಳನ್ನು ಮತ್ತು ಹೋರ್ಡಿಂಗ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದ್ದು, ಅಂತಹುಗಳನ್ನು ಪ್ರಕಟಣೆ - ಪ್ರದರ್ಶನ ಮಾಡಿದರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ: ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಟ್ಟೆಯಿಂದ ತಯಾರಿಸಿದ ಬ್ಯಾನರ್ಸ್, ಫ್ಲೆಕ್ಸ್ ಮತ್ತು ಬಂಟಿಂಗ್ಸ್‌ಗಳನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವತಿಯಿಂದ ಅನುಮತಿ ಪಡೆಯುವ ಷರತ್ತಿಗೊಳಪಟ್ಟು ಉಳಿದೆಲ್ಲಾ ಪ್ಲಾಸ್ಟಿಕ್ ಮೂಲ ವಸ್ತುವಿನಿಂದ ತಯಾರಾಗುವ ಎಲ್ಲಾ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿ ಅವಿನಾಶ್ ಅವರು ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು/ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನೀತಿಸಂಹಿತೆ ಇದ್ದಾಗ ಕಡಿವಾಣ!: ನಗರ/ಪಟ್ಟಣದ ಪ್ರಮುಖ ರಸ್ತೆಗಳ ಬದಿಯಲ್ಲಿ ಪ್ರಚಾರಕ್ಕೆ ಕಟ್ಟುವ ಬ್ಯಾನರ್, ಬಂಟಿಂಗ್‌್ಸ ಮತ್ತು ಮುಖ್ಯರಸ್ತೆಯ ವಿಭಜಕದ ಗ್ರಿಲ್, ವಿದ್ಯುತ್ ಕಂಬಗಳಿಗೆ ಅಳವಡಿಸುವ ಪೋಸ್ಟರ್‌ಗಳ ತೆರವು ಕಾರ್ಯದಲ್ಲಿ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ವಹಿಸಿದೆ. ಚುನಾವಣೆಗಳ ನೀತಿಸಂಹಿತೆ ಜಾರಿಯಾದ ಸಮಯದಲ್ಲಿ ಕಡ್ಡಾಯವಾಗಿ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತದೆ. ನಂತರ ಅತ್ತ ತಲೆ ಹಾಕುವುದಿಲ್ಲ.
ಸ್ಥಳೀಯ ಆಡಳಿತದ ಅನುಮತಿ ಪಡೆಯದೇ ಫ್ಲೆಕ್ಸ್, ಬ್ಯಾನರ್ ಹಾಕುವುದರಲ್ಲಿ ರಾಜಕೀಯ ಪಕ್ಷಗಳ ಮುಖಂಡರೇ ಮುಂದೆ ಇದ್ದಾರೆ. ಇದರಲ್ಲಿ ಪಕ್ಷ ಭೇದವಿಲ್ಲ. ಸ್ಥಳೀಯ ನಾಯಕರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಇತರ ಗಣ್ಯರನ್ನು ಸ್ವಾಗತಿಸುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ನಗರದಾದ್ಯಂತ ರಾರಾಜಿಸುತ್ತವೆ. ಮುಖ್ಯಮಂತ್ರಿ, ಸಚಿವರು, ಪಕ್ಷದ ವರಿಷ್ಠರು ಜಿಲ್ಲೆಗೆ ಬರುವ ದಿನಗಳಲ್ಲಿ ವಾರದ ಮುನ್ನವೇ ಅವರನ್ನು ಸ್ವಾಗತಿಸುವ ತರಹೇವಾರಿ ಫ್ಲೆಕ್ಸ್, ಬ್ಯಾನರ್‌ಗಳು ಎಲ್ಲಡೆ ಕಾಣಸಿಗುತ್ತವೆ.
ಸರ್ಕಾರಿ ನಿಯಮ ಗಾಳಿಗೆ ತೂರಿ ಬಡಾವಣೆ ನಿರ್ಮಾಣ: ಗೌರ್ಮೆಂಟ್ ಅಧಿಕಾರಿಗಳೇ ಸಾಥ್..?
ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಜಾಗ ಗುರುತು ಮಾಡಿದ್ದಾರೆ. ಆ ಜಾಗದಲ್ಲಿ ಬಿಟ್ಟು ಬೇರೆಲ್ಲ ಜಾಗಗಳಲ್ಲೂ ಬ್ಯಾನರ್, ಫ್ಲೆಕ್ಸ್‌ಗಳ ಹಾವಳಿ ಇದೆ. ದೊಡ್ಡ ಬ್ಯಾನರ್ ಗಳಿಗೆ ಸಾವಿರಾರು ರುಪಾಯಿ ಖರ್ಚು ಮಾಡುವವರು ಅದನ್ನು ಹಾಕಲು ಅಷ್ಟೇ ಹಣ ಖರ್ಚು ಮಾಡುತ್ತಿದ್ದಾರೆ. ಸ್ಥಳೀಯಸಂಸ್ಥೆ ಗುರುತಿಸಿದ ಜಾಗದಲ್ಲಿ ಫ್ಲೆಕ್ಸ್ ಕಟ್ಟಲು ಸೂಕ್ತ ವ್ಯವಸ್ಥೆ ಮಾಡಿದರೆ, ಆದಾಯವೂ ಸಿಗುತ್ತದೆ. ಕಾರ್ಯಕ್ರಮ ಮುಗಿದ ಕೂಡಲೇ ತೆರವು ಮಾಡಲು ಅನುಕೂಲವಾಗುತ್ತದೆ. ನಗರದ ಸುಂದರವಾಗಿಯೂ ಇರುತ್ತದೆ.
- ನಿಜಾಮುದ್ದೀನ್ ಷರೀಫ್, ನಗರಸಭೆ ಸದಸ್ಯ