ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೋವಿಡ್  ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ  ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು  ಮತ್ತೆ ಲಾಕ್‌ಡೌನ್ ವಿಚಾರ ಪ್ರಸ್ತಾಪವಾಗಿದೆ. 

ರಾಮನಗರ (ಮಾ.23): ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಪಡೆದುಕೊಂಡರು. ನಂತರ ಕೆಲ ಹೊತ್ತು ನಿಗಾ ಕೊಠಡಿಯಲ್ಲಿದ್ದರು. ಡಿಎಚ್‌ಒ ಡಾ.ನಿರಂಜನ್‌, ವೈದ್ಯೆ ಡಾ.ಯಶೋದಾ ಮತ್ತಿತರರು ಹಾಜರಿದ್ದು ಶಾಸಕರ ಆರೋಗ್ಯ ಗಮನಿಸಿದರು. ಶಾಸಕರು ತಮಗೇನು ಆಗಿಲ್ಲ ಎಂದು ದೃಢಪಡಿಸಿದರು.

ತದನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್‌ ಲಸಿಕೆ ಪಡೆದುಕೊಂಡಿದ್ದೇನೆ. ತಾವು ಜನಪ್ರತಿನಿ​ಧಿಯಾಗಿದ್ದು, ಹತ್ತಾರು ಮಂದಿಯನ್ನು ಭೇಟಿಯಾಗುವುದು, ಓಡಾಡುವುದು ಇದ್ದೇ ಇರುತ್ತದೆ. ಹೀಗಾಗಿ ಲಸಿಕೆ ಪಡೆದುಕೊಳ್ಳುವುದು ಸೂಕ್ತ ಎನಿಸಿದ್ದರಿಂದ ತಾವು ಲಸಿಕೆ ಪಡೆದುಕೊಂಡಿದ್ದಾಗಿ ತಿಳಿಸಿದರು.

4 ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ, RTPCR ಟೆಸ್ಟ್ ವರದಿ ಕಡ್ಡಾಯ .

ಇದೇ ವೇಳೆ ಅವರು ಅರ್ಹರೆಲ್ಲರು ಲಸಿಕೆ ಪಡೆಯಬೇಕು, ವಿಶೇಷವಾಗಿ ತಮ್ಮ ಕ್ಷೇತ್ರದ ಜನ ಲಸಿಕೆ ಪಡೆಯಬೇಕು. ತಾವೇ ಸ್ವಪ್ರೇರಿತರಾಗಿ ಆಸ್ಪತ್ರೆಗಳಿಗೆ ಬಂದು ಲಸಿಕೆ ಪಡೆಯಬೇಕು ಎಂದು ಕರೆ ನೀಡಿದರು.

 ಅಗತ್ಯವಿದ್ದರೆ ಲಾಕ್‌ಡೌನ್‌ ಮಾಡಲಿ: ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಅಗತ್ಯವಿದ್ದಲ್ಲಿ ಸರ್ಕಾರ ಒಂದು ವಾರ ಇಲ್ಲ ಹದಿನೈದು ದಿನಗಳ ಕಾಲ ಲಾಕ್‌ಡೌನ್‌ ಮಾಡಲಿ, ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದುನೋಡೋಣ ಎಂದು ಅನಿತಾಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ಶೀಲ್ಡ್‌ ವ್ಯಾಕ್ಸಿನ್‌ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಮತ್ತೆ ಹಬ್ಬುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಅಗತ್ಯ, ಮಾಸ್ಕ್‌ ದರಿಸುವುದು, ಸ್ಯಾನಿಟೈಜೇಷನ್‌ ಹಾಗೂ ಸಾಮಾಜಿಕ ಅಂತರವನ್ನು ತಾವೇ ಕಾಪಾಡಿಕೊಳ್ಳ ಬೇಕು ಎಂದು ಅವರು ಸಲಹೆ ನೀಡಿದರು.