ರಾಮನಗರ: ಹಣ್ಣುಗಳ ರಾಜನಿಗೆ ಆರಂಭದಲ್ಲೇ ಕೀಟಬಾಧೆ, ರೈತರಲ್ಲಿ ಆತಂಕ
* ಹಣ್ಣುಗಳ ರಾಜನಿಗೆ ಆರಂಭದಲ್ಲೇ ಆಘಾತ
* ರಾಮನಗರದಲ್ಲಿ ಮಾವಿಗೆ ಜಿಗಿಹುಳ ಆರಂಭ
* ಕಳೆದ ಬಾರಿಗಿಂತ ಈ ಬಾರಿ ಮಾವು ಬೆಳೆ ಕುಂಠಿತ
ವರದಿ - ಜಗದೀಶ್
ರಾಮನಗರ, (ಮಾ.21): ಮಾವು ಬೆಳೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವ ರಾಮನಗರದಲ್ಲಿ(Ramanagara) ಮಾವಿಗೆ ಜಿಗಿಹುಳ9Pests ) ಆರಂಭವಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಮಾವು ಬೆಳೆ ಕುಂಠಿತವಾಗುವ ಸಾಧ್ಯತೆಗಳಿವೆ.
ಆರಂಭದಲ್ಲಿ ಮಾವು ಬೆಳೆಗಾರರಿಗೆ (Mango Growers) ಸ್ವಲ್ಪ ಆತಂಕ ಶುರುವಾಗಿದೆ. ವಾತಾವರಣದ ಏರುಪೇರು ಹಾಗೂ ಕೀಟಬಾಧೆಯಿಂದ ಮಾವು ಬೆಳೆಗಾರರು ಭಯಗೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾವು ಮತ್ತು ಗೇರು ಬೆಳೆಗಾರರಿಗೆ ಅಗತ್ಯ ಸಲಹೆಗಳು
ರೇಷ್ಮೇ ನಗರಿಯಲ್ಲಿ ಮಾವಿನ ಶಕೆ ಆರಂಭವಾಗತೊಡಗಿದ್ದು, ಭೂತಾಯಿಗೆ ತಳಿರು ತೋರಣಗಳಿಂದ ಸಿಂಗಾರ ಮಾಡಿದಂತೆ ಮಾವಿನ ತೋಟಗಳು ಕಾಣುತ್ತಿವೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಜಡಿಮಳೆ, ವಾತಾವರಣದ ಏರುಪೇರಿನ ಪರಿಣಾಮದಿಂದ ಈ ಬಾರಿ ಮಾವಿನ ಮರಗಳು ಹೂ ತಡವಾಗಿದೆ. ಸದ್ಯ ಜಿಲ್ಲೆಯಾದ್ಯಂತ ಶೇ. 50 ರಷ್ಟು ಹೂ ಬಿಟ್ಟಿದ್ದು, ಕೆಲವು ಮಾವಿನ ಮರಗಳು ಚೆನ್ನಾಗಿ ಹೂವು ಬಿಟ್ಟಿದ್ದರೆ ಕೆಲವು ಮರಗಳಲ್ಲಿ ಇನ್ನೂ ಹೂವು ಬಿಟ್ಟಿಲ್ಲ. ಈ ಮೂಲಕ ಮಾವು ಬೆಳೆಗಾರರಿಗೆ ಆರಂಭದಲ್ಲೇ ಆತಂಕ ಎದುರಾಗಿದೆ.
ಈ ಹಿಂದೆ ಮಾವಿಗೆ ಯಾವುದೇ ರೋಗ ಕಾಣಿಸಿಕೊಂಡಿರಲಿಲ್ಲ. ಆದ್ರೆ ಕಳೆದ ನಾಲ್ಕು ವರ್ಷಗಳಿಂದ ಅಂಟು ರೋಗ, ಜೋನಿ ರೋಗ, ಕಾಯಿ ಕೊರಕ ಈಗೇ ನಾನಾ ರೋಗಳಿಂದ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದೇವೆ. ಈವರೆಗೂ ಯಾವ ಅಧಿಕಾರಿಗಳು ಬಂದು ಮಾಹಿತಿ ನೀಡುತ್ತಿಲ್ಲ. ಯಾರೋ ಕೊಟ್ಟ ಔಷಧಿ ಸಿಂಪಡಣೆ ಮಾಡುತ್ತಿದ್ದೇವೆ. ಅಲ್ಲದೇ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಉಢಾಫೆ ಉತ್ತರ ನೀಡುತ್ತಾರೆ ಎಂದು ರೈತರು ಗಂಭೀರವಾಗಿ ಆರೋಪಿಸಿದ್ದಾರೆ.
ಮಾಹಿತಿ ಕೇಳಿದ್ರೆ ಅಧಿಕಾರಿಗಳಿಂದ ಉಡಾಫೆ ಉತ್ತರ
ರಾಮನಗರ ಜಿಲ್ಲೆಯಲ್ಲಿ 23,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಗುಣಮಟ್ಟದ ಮಾವಿನ ಹಣ್ಣುಗಳು ದೇಶದ ಹಾಗೂ ವಿಶ್ವದ ಮೂಲೆ ಮೂಲೆಗೆ ಸರಬರಾಜು ಆಗುತ್ತದೆ. ಇಂತಹ ಗುಣಮಟ್ಟದ ಮಾವು ಬೆಳೆಯುವ ರೈತರಲ್ಲಿ ಈಗ ಆತಂಕ ಎದುರಾಗಿದ್ದು, ಈ ಬಾರಿ ತೇವಾಂಶ ಜಾಸ್ತಿಯಾಗಿದ್ದು, ಹೂ ಬಿಟ್ಟ ನಂತರವೂ ಮಾವು ಚಿಗುರಿ ಕಾಯಿ ಬಂದಿಲ್ಲ. ಅಲ್ಲದೇ ಜಿಗಿಹುಳ ಹಾಗೂ ಬೂದಿ ರೋಗ ಈ ಬಾರಿ ಮಾವನ್ನು ಕಾಡುತ್ತಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿದ್ದು, ರೈತರ ಕಚೇರಿಗೆ ಬಂದು ಮಾವಿಗೆ ಆಗಿರುವ ತೊಂದರೆ ತಿಳಿಸಿ ಔಷಧಿ ಬಗ್ಗೆ ಮಾಹಿತಿ ಪಡೆಯಿರಿ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮುನೇಗೌಡ.
ಒಟ್ಟಾರೆ ಜಿಲ್ಲೆಯಲ್ಲಿ ಉಂಟಾಗಿರುವ ವಾತಾವರಣದಲ್ಲಿನ ಏರುಪೇರಿನ ಪರಿಣಾಮ ಈ ಬಾರಿ ಮಾವು ಬೆಳೆಗಾರರಿಗೆ ಈ ಬೆಳೆ ಜೂಜಾಟದಂತಾಗಿದೆ. ಅದೃಷ್ಟ ಇದ್ದವರ ತೋಟದಲ್ಲಿ ಹೂ ಬಿಟ್ಟಿದ್ದರೆ ಅದೃಷ್ಟ ಇಲ್ಲದವರ ತೋಟದಲ್ಲಿ ಹೂ ಇನ್ನೂ ಬಿಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೀಟ ಬಾಧೆಯಂತಹ ರೋಗ ಭೀತಿ ಕೂಡ ಮಾವು ಬೆಳೆಗಾರರನ್ನು ಆತಂಕಕ್ಕೀಡು ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.