ಮತದಾರರಿಗಾಗಿ ಅಭ್ಯರ್ಥಿಗಳಿಂದ ಹುಡುಕಾಟ : ರಾಮನಗರದಲ್ಲಿ ಫುಲ್ ಪಾಲಿಟಿಕ್ಸ್

ರಾಮನಗರದಲ್ಲಿ  ಚುನಾವಣೆ ಅಬ್ಬರ ಜೋರಾಗಿದೆ. ಅಭ್ಯರ್ಥಿಗಳು ಮತದಾರರನ್ನು ಹುಡುಕಿಕೊಂಡು ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ ಮತ ಬೇಟೆ ವೇಳೆ ಸವಾಲುಗಳನ್ನೇ ಎದುರಿಸುತ್ತಿದ್ದಾರೆ. 

Ramanagara KASAPA Election Candidates Starts Campaign snr

ವರದಿ : ಎಂ. ಅಫ್ರೋಜ್‌ ಖಾನ್‌

 ರಾಮನಗರ (ಏ.20):  ಅವ್ರು ಈಗ ಇಲ್ಲಿಲ್ಲ. ಮನೆ ಖಾಲಿ ಮಾಡಿ ಬಹಳ ವರ್ಷಗಳೇ ಆಯಿತು. ಎಲ್ಲಿದ್ದಾರಂತ ನಮ್ಗೂ ಗೊತ್ತಿಲ್ಲ... ಅವಳು ಮದ್ವೆಯಾಗಿ ಗಂಡನ ಮನೇಲಿ ಇದಾಳೆ. ಬರೋದು ಡೌಟು, ಬಂದ್ರೆ ಖಂಡಿತಾ ಹೇಳ್ತಿನಪ್ಪ. ಅವ್ರು ತೀರೋಗಿ ಬಹಳ ವರ್ಷಗಳೇ ಆಯಿತು. ಇನ್ನೂ ಅವ್ರ ಹೆಸರು ಇದಿಯಾ 

ಇದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನದ ಚುನಾವಣೆ ಅಖಾಡದಲ್ಲಿ ಮತಬೇಟೆ ಆರಂಭಿಸಿರುವ ಅಭ್ಯರ್ಥಿಗಳಿಗೆ ಎದುರಾಗುತ್ತಿರುವ ಸವಾಲುಗಳು. ಕಸಾಪ ಜಿಲ್ಲಾ ಘಟಕದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತದಾರರು ಅಷ್ಟುಸುಲಭವಾಗಿ ಕೈಗೆ ಸಿಗುತ್ತಿಲ್ಲ. ಮತದಾರರ ಪಟ್ಟಿಯಲ್ಲಿರುವ ಕೆಲ ಮತದಾರರ ಹೆಸರು ಒಂದೆಡೆಯಾದರೆ, ವಾಸ ಮತ್ತೊಂದೆಡೆ. ಅಲ್ಲದೆ, ಮೃತಪಟ್ಟವರ ಹೆಸರು ಇನ್ನೂ ಮತಪಟ್ಟಿಯಲ್ಲಿ ಜೀವಂತವಾಗಿದೆ.

ಜಿಲ್ಲೆಯಲ್ಲಿ 9,680 ಕನ್ನಡ ಸಾಹಿತ್ಯ ಪರಿಷತ್‌ ಮತದಾರರು ಇದ್ದಾರೆ. ಈ ಮತದಾರರ ಪಟ್ಟಿಪರಿಷ್ಕರಣೆಗೊಂಡು ಹಲವು ದಶಕಗಳೇ ಕಳೆದಿವೆ. ಹಿಂದಿದ್ದ ವಾಸ ಸ್ಥಳದಿಂದ ಬೇರೆಡೆಗೆ ವರ್ಗಾವಣೆಯಾದವರು ಆನಂತರದಲ್ಲಿ ವಿಳಾಸ ಬದಲಾಯಿಸಿಕೊಂಡಿಲ್ಲ. ಪರಿಷತ್‌ ಸದಸ್ಯರಾಗಿದ್ದ ಯುವತಿಯರು ಮದುವೆಯಾಗಿ ಬೇರೆ ಊರಿಗೆ ಹೋಗಿದ್ದಾರೆ. ಅವರ ವಿಳಾಸವೂ ಬದಲಾಗಿಲ್ಲ. ಮೃತಪಟ್ಟಿರುವ ಸದಸ್ಯರ ಹೆಸರನ್ನು ಕೈಬಿಟ್ಟಿಲ್ಲ. ಹಲವು ಮತದಾರರ ವಿಳಾಸದಲ್ಲಿ ಊರಿನ ಹೆಸರುಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಮತದಾರರನ್ನು ಹುಡುಕುವುದು ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ರಾಮನಗರ ರಾಜಕೀಯ ವಲಯದಲ್ಲಿ ಮಹತ್ತರ ಬದಲಾವಣೆ : ಕ್ಷೇತ್ರಗಳ ಹೆಸರು ಬದಲು ...

ವಾಪಸ್ಸಾಗುತ್ತಿರುವ ಅಂಚೆ ಪತ್ರಗಳು:  ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸುವಂತೆ ಕೋರಿ ಅಭ್ಯರ್ಥಿಗಳು ಮತದಾರರಿಗೆ ಅಂಚೆ ಪತ್ರದ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ತಪ್ಪು ವಿಳಾಸ ಹಾಗೂ ಮೃತಪಟ್ಟಿರುವ ಕೆಲ ಸದಸ್ಯರ ಹೆಸರಿನಲ್ಲಿ ರವಾನಿಸಿದ್ದ ಮತಯಾಚನೆಯ ನೂರಾರು ಅಂಚೆಪತ್ರಗಳು ಅಭ್ಯರ್ಥಿಗಳಿಗೆ ವಾಪಸ್ಸಾಗಿವೆ.

ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ವಿಳಾಸ ತಪ್ಪಾಗಿ ಮುದ್ರಿತವಾಗಿದ್ದವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಇದು ಬಹುತೇಕ ಮತದಾರರಿಗೆ ತಲುಪೇ ಇಲ್ಲ. ಕೆಲವರಿಗೆ ತಲುಪಿದ್ದರೂ ಹೆಸರು ಮತ್ತು ವಿಳಾಸವನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಮತದಾರರ ಪಟ್ಟಿಸ್ಪಷ್ಟತೆಯಿಲ್ಲದೆ ಗೋಜಲಾಗಿದೆ. ಕಾಲ ಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯಕ್ಕೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಲಿಲ್ಲ. ಪರಿಷ್ಕರಣೆ ಕಾರ್ಯವನ್ನು ನಡೆಸಿದ್ದರೆ ಮತದಾರರ ಸ್ಪಷ್ಟಚಿತ್ರಣ ಅಭ್ಯರ್ಥಿಗಳಿಗೆ ದೊರಕುತ್ತಿತು.

ಪರಿಷ್ಕರಣೆ ನೆನೆಗುದಿಗೆ:  ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು, ಹೋಬಳಿ ಘಟಕಗಳನ್ನು ಬಳಸಿಕೊಂಡು ಶಿಕ್ಷಣ ಇಲಾಖೆ ಮತ್ತು ಅಂಗನವಾಡಿಯವರ ನೆರವಿನಿಂದ ಕಾಲ ಕಾಲಕ್ಕೆ ಸಾಹಿತ್ಯ ಪರಿಷತ್‌ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಬಹುದಾಗಿತ್ತು. ಅಂತಹದೊಂದು ಕಾರ್ಯಕ್ಕೆ ಪರಿಷತ್‌ ಮುಂದಾಗಲೇ ಇಲ್ಲ.

HDK ಕರ್ಮಭೂಮಿ ರಾಮನಗರದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್: ಮಾಜಿ ಶಾಸಕ ಕಾಂಗ್ರೆಸ್​ ಸೇರ್ಪಡೆ ..

ಸಮಯ - ಹಣ ವ್ಯರ್ಥ:  ಮತದಾರರ ಹಳೇ ಪಟ್ಟಿಯನ್ನು ಹಿಡಿದುಕೊಂಡು ಅಭ್ಯರ್ಥಿಗಳು ಅಲ್ಲಿಗೆ ತೆರಳುತ್ತಿದ್ದಾರೆ. ಆದರೆ, ಬಹುತೇಕ ಮತದಾರರ ವಿಳಾಸ ಬದಲಾಗಿರುವುದನ್ನು ಕಂಡು ದಿಕ್ಕು ತೋಚದಂತಾಗಿದ್ದರೆ, ಮೃತಪಟ್ಟವರ ಹೆಸರು ಪಟ್ಟಿಯಲ್ಲಿರುವುದನ್ನು ಕಂಡು ಬೆಸ್ತು ಬೀಳುತ್ತಿದ್ದಾರೆ. ಮತದಾರರನ್ನು ಹುಡುಕುವುದರಲ್ಲೇ ಸಾಕಷ್ಟುಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ ಎಂದು ಕೆಲ ಅಭ್ಯರ್ಥಿಗಳು  ಅಳಲು ತೋಡಿಕೊಂಡರು.

ಕಣದಲ್ಲಿರುವ ಅಭ್ಯರ್ಥಿಗಳು:  ಮಾಗಡಿಯ ಕಲ್ಪನಾ ಶಿವಣ್ಣ, ರಾಮ​ನ​ಗ​ರದ ಡಿ.ಕೃ​ಷ್ಣ​ಮೂರ್ತಿ, ಚನ್ನ​ಪ​ಟ್ಟ​ಣದ ಬಿ.ಟಿ.​ನಾ​ಗೇಶ್‌ , ಯೋಗೀಶ್‌ ಚಕ್ಕೆರೆ, ವಿ.ಸಂದೇಶ್‌ ಹಾಗೂ ಕನ​ಕ​ಪು​ರದ ಪಾರ್ವ​ತೀಶ್‌ ಪ್ರಚಾರದಲ್ಲಿ ತೊಡಗಿದ್ದಾರೆ. ಗೆಲುವನ್ನು ಗುರಿಯಾಗಿಸಿಕೊಂಡು ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ತಮ್ಮದೇ ಹಾದಿ ಹಿಡಿದಿದ್ದಾರೆ. ಮತದಾರರ ಪಟ್ಟಿಗೊಂದಲಮಯವಾಗಿರುವುದರಿಂದ ಮತದಾರರನ್ನು ತಲುಪಲು ಹರಸಾಹಸ ನಡೆಸುತ್ತಿದ್ದಾರೆ. ಪಟ್ಟಿಪರಿಷ್ಕೃತವಾಗದಿರುವುದೂ ಸಾಹಿತ್ಯ ಪರಿಷತ್‌ ಮತದಾನದ ಪ್ರಮಾಣ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

Latest Videos
Follow Us:
Download App:
  • android
  • ios