ರಾಮನಗರ ಜಿಲ್ಲೆಗೆ ಹೊಸ ಹೆಸರು!?
ರಾಮನಗರ ಜಿಲ್ಲೆ ಇನ್ನು ಹೊಸ ಹೆಸರು?| ಮರುನಾಮಕರಣಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚೆ| ನವಬೆಂಗಳೂರಿಗೆ ರಾಮನಗರವೇ ಜಿಲ್ಲಾ ಕೇಂದ್ರ ಸಂಭವ
ರಾಮನಗರ[ಜ.04]: ದೇಶ- ವಿದೇಶಗಳ ಬಂಡವಾಳದಾರರನ್ನು ಸೆಳೆಯುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯ ಹೆಸರನ್ನು ನವ ಬೆಂಗಳೂರು ಮರು ನಾಮಕರಣ ಮಾಡುವ ಚರ್ಚೆ ಆರಂಭವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ಕೆಲ ಭಾಗಗಳನ್ನು ರಾಮನಗರಕ್ಕೆ ಸೇರಿಸಿ ಪ್ರತ್ಯೇಕವಾಗಿ ರಾಮನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಜಿಲ್ಲೆಯಾಗಿ 13 ವರ್ಷ ಕಳೆದರೂ ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ರಾಮನಗರವನ್ನು ನವ ಬೆಂಗಳೂರು ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆ ರಾಜ್ಯಸರ್ಕಾರದ ಮುಂದೆ ಬಂದಿದೆ. ಇದೀಗ ಆ ಪ್ರಸ್ತಾವನೆ ಜಿಲ್ಲಾಡಳಿತಕ್ಕೆ ರವಾನೆಯಾಗಿದೆ.
ರಾಮನಗರ ಜಿಲ್ಲೆಯಲ್ಲಿ ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಿವೆ. ಆದರೂ ಜಿಲ್ಲೆಯು ನಿರೀಕ್ಷಿಸಿದಷ್ಟುಅಭಿವೃದ್ಧಿ ಹೊಂದಿಲ್ಲ. ಅಲ್ಲದೆ, ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗೆಯೂ ಆಗಿಲ್ಲ. ಇದಕ್ಕೆ ರಾಮನಗರ ಎಂಬ ಹೆಸರೇ ಕಾರಣ ಎನ್ನಲಾಗುತ್ತಿದೆ. ಈ ಉದ್ದೇಶದಿಂದಲೇ ರಾಮನಗರ ಪಟ್ಟಣ ಅಥವಾ ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಮರು ನಾಮಕರಣ ಮಾಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ. ಖುದ್ದು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೇ ಈ ಬಗ್ಗೆ ಆಸಕ್ತಿ ವಹಿಸಿ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ.
ಮಂಗಳೂರು ಜಿಲ್ಲಾ ಕೇಂದ್ರವಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರಿದೆ. ಉತ್ತರ ಕನ್ನಡ ಜಿಲ್ಲೆಯಾಗಿದ್ದರೂ, ಜಿಲ್ಲಾ ಕೇಂದ್ರ ಕಾರವಾರವಾಗಿದೆ. ಇನ್ನು ದೆಹಲಿಯ ಹೆಸರು ನವ ದೆಹಲಿ, ಬಾಂಬೆ ಹೆಸರು ಮುಂಬೈ ಆಗಿ ಬದಲಾಗಿವೆ. ರಾಮನಗರ ಜಿಲ್ಲೆಯ ಬದಲಿಗೆ ನವ ಬೆಂಗಳೂರು ಎಂಬ ಹೆಸರು ಘೋಷಣೆ ಮಾಡಬೇಕೆಂಬ ಸಲಹೆಗಳು ಕೇಳಿ ಬರುತ್ತಲೇ ಇತ್ತು.
ಐಟಿ-ಬಿಟಿ ಸಿಟಿ ಎಂದೇ ಬೆಂಗಳೂರು ಪ್ರಖ್ಯಾತಿ ಹೊಂದಿದೆ. ಅದರ ಸನಿಹದಲ್ಲಿಯೇ ಇರುವ ರಾಮನಗರ ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ವಿದೇಶಿ ಕಂಪನಿಗಳು ಮಾತ್ರವಲ್ಲದೆ ನೆರೆಯ ರಾಜ್ಯಗಳ ಕಾರ್ಖಾನೆಗಳು ರಾಮನಗರದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ರಾಮನಗರವು ಜಿಲ್ಲೆ ಎಂಬ ಮನೋಭಾವನೆಯೇ ಬಂದಿಲ್ಲ.
ಈಗಲೂ ಬಂಡವಾಳದಾರರು ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರುಪಾಯಿ ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ. ಹೀಗಾಗಿ ಅವರನ್ನು ರಾಮನಗರ ಜಿಲ್ಲೆಯತ್ತ ಸೆಳೆಯುವ ಚಿಂತನೆ ರಾಜ್ಯ ಸರ್ಕಾರದ್ದಾಗಿದೆ. ಆದ್ದರಿಂದ ರಾಮನಗರ ಜಿಲ್ಲೆ ಎಂಬ ಹೆಸರನ್ನು ನವ ಬೆಂಗಳೂರು ಎಂದು ಮರು ನಾಮಕರಣ ಮಾಡುವ ಆಲೋಚನೆ ನಡೆಯುತ್ತಿದೆ.
ನೂತನ ತಾಲೂಕಾಗಿ ಘೋಷಣೆಯಾಗಿರುವ ಹಾರೋಹಳ್ಳಿ ಸೇರಿದಂತೆ ಇನ್ನುಳಿದ ನಾಲ್ಕು ತಾಲೂಕುಗಳು ತನ್ನ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಿವೆ. ರಾಮನಗರ ತಾಲೂಕು ಸಹ ಹಾಗೆಯೇ ಇರಲಿದೆ. ಜಿಲ್ಲಾ ಕೇಂದ್ರವು ರಾಮನಗರ ಪಟ್ಟಣವೇ ಇರಲಿದೆ. ಆದರೆ, ಜಿಲ್ಲೆಯ ಹೆಸರನ್ನು ಮಾತ್ರ ರಾಮನಗರದ ಬದಲಿಗೆ ನವ ಬೆಂಗಳೂರು ಎಂದು ಬದಲಾಯಿಸಲಾಗುತ್ತಿದೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ತಾಲೂಕುಗಳು ಸಹ ಈ ನವ ಬೆಂಗಳೂರು ಜಿಲ್ಲೆಗೆ ಸೇರಿಸಬೇಕೆ, ಬೇಡವೇ ಎಂಬುದರ ಬಗ್ಗೆಯೂ ಚರ್ಚೆಗಳು ನಡೆದಿವೆ.
ಲಾಭ ಏನು?
ಜಿಲ್ಲೆಯಲ್ಲಿ ದೇಶ, ವಿದೇಶಗಳ ಕಂಪನಿಗಳು ಬಂಡವಾಳ ಹೂಡಿಕೆ ಮಾಡಲಿವೆ. ಜಿಲ್ಲೆಯು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲಿದೆ. ಬೆಂಗಳೂರು ಮಾದರಿಯಲ್ಲಿಯೇ ಜಿಲ್ಲೆ ಐಟಿ ಹಬ್ ಆಗಲಿದೆ. ರೈತರ ಭೂಮಿಗೆ ಚಿನ್ನದ ಬೆಲೆ ದೊರೆಯಲಿದೆ. ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೊಗ ದೊರೆಯಲಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ