ಕಾಂಗ್ರೆಸ್ ಮುಖಂಡಗೆ ಸೋಲಿನ ಭೀತಿ : ಜೆಡಿಎಸ್ ನಾಯಕರಿಂದ ತಿರುಗೇಟು
ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ತಿರುಗೇಟು ನೀಡಿದ್ದಾರೆ.
ರಾಮನಗರ (ಏ.23): ನಗರಸಭೆಯ 25ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಗೆ ಸೋಲುವ ಭೀತಿ ಆವರಿಸಿದೆ. ಹೀಗಾಗಿ ಹತಾಶೆಯಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಮತದಾರರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರರಾದ 25ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಬಿ.ಉಮೇಶ್ ತಿರುಗೇಟು ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಮುತ್ತುರಾಜು ಹಾಗೂ ಗುತ್ತಿಗೆದಾರ, ಕಾಂಗ್ರೆಸ್ ಮುಖಂಡ ಜಗದೀಶ್ ಅವರ ಆರೋಪಗಳಿಗೆ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ನಾನು ಕೆಂಗೇರಿಗೆ ವಾಸಸ್ಥಾನ ಬದಲಾಯಿಸಿರುವುದಾಗಿ ಹೇಳಿದ್ದಾರೆ. ಆದರೆ ನಾನು ಈಗಲೂ ನನ್ನ ತಂದೆ ಕಟ್ಟಿಸಿರುವ 1964 ಎ, ಮಾಗಡಿ ರಸ್ತೆ, ಕೆಂಪೇಗೌಡ ವೃತ್ತದ ಬಳಿಯ ನಿವಾಸದಲ್ಲೇ ವಾಸವಿದ್ದೇನೆ ಎಂದರು.
HDK ಕರ್ಮಭೂಮಿ ರಾಮನಗರದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್: ಮಾಜಿ ಶಾಸಕ ಕಾಂಗ್ರೆಸ್ ಸೇರ್ಪಡೆ .
ನನ್ನ ಪುತ್ರನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಕೆಂಗೇರಿ ಬಳಿ ತಾತ್ಕಾಲಿಕವಾಗಿ ಮನೆ ಮಾಡಿದ್ದೇವೆ. ಎದುರಾಳಿಗಳು ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡು, ನಾನು ರಾಮನಗರವನ್ನೇ ತೊರೆದಿರುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ನಾನು ಉದ್ಯಮಿಯಾಗಿರುವ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಹೇಳಿದ್ದಾರೆ. ಉದ್ಯಮಿ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಮ್ಮ ಸಂವಿಧಾನದ ಯಾವ ವಿಧಿಯಲ್ಲಿದೆ ಎಂಬುದನ್ನು ತಿಳಿಸಲಿ ಎಂದು ಹೇಳಿದರು.
ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ವಾರ್ಡ್ ನಾಲ್ಕು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದೇನೆ. ಮತ್ತೆ ನನಗೆ ಅಧಿಕಾರ ಕೊಟ್ಟರೆ ವಾರ್ಡಿನ ಸಮಸ್ಯೆಗಳನ್ನು ಪರಿಹರಿಸುವ ಜತೆಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತೇನೆ. ವಾರ್ಡಿನ ಅಭಿವೃದ್ಧಿ ದೃಷ್ಟಿಯಿಂದ ತಮ್ಮ ಅಮೂಲ್ಯ ಮತಗಳನ್ನು ಜೆಡಿಎಸ್ ಅಭ್ಯರ್ಥಿಯಾದ ನನಗೇ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಹಾಗೂ ಇಲ್ಲಿವರೆಗೆ ವಾರ್ಡನ್ನು ಪ್ರತಿನಿಧಿಸಿದ್ದವರು ಇಬ್ಬರೂ ಕೂಡ ಉಪಾಧ್ಯಕ್ಷರಾಗಿದ್ದವರು. ಅವರು ನಗರಸಭೆಯಲ್ಲಿ ನಡೆಸಿರುವ ಭ್ರಷ್ಟಾಚಾರ, ನಗರಸಭೆಯನ್ನು ಯಾವ ರೀತಿ ಲೂಟಿ ಮಾಡಿದ್ದಾರೆ ಎಂಬುದು ನಗರದ ಪ್ರತಿಯೊಬ್ಬ ಮತದಾರನಿಗೂ ತಿಳಿದಿರುವ ವಿಚಾರವಾಗಿದೆ. ನಾನು ಅವರ ವಿರುದ್ಧ ಟೀಕೆ ಮಾಡುವ ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ಯಾರು ಸೂಕ್ತ ಎಂಬುದನ್ನು ಮತದಾರರೇ ತೀರ್ಮಾನಿಸಲಿದ್ದಾರೆ ಎಂದು ಉಮೇಶ್ ಹೇಳಿದರು.
ಇದೇ ಏಪ್ರಿಲ್ 27 ರಂದು ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.