ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಗಳನ್ನು ನೀಡಿದ 'ಅದೃಷ್ಟದ ವಿಧಾನಸಭಾ ಕ್ಷೇತ್ರ' ಯಾವುದು ಗೊತ್ತಾ? ಆ ಕ್ಷೇತ್ರದ ರೋಚಕ ರಾಜಕೀಯ ಇತಿಹಾಸದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ವಿಶೇಷವಾದ 'ರಾಜಕೀಯ ಅದೃಷ್ಟ' ಅಥವಾ 'ಶಕ್ತಿ ಕೇಂದ್ರ'ದ ಪಟ್ಟವಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ, ಒಂದೇ ಕ್ಷೇತ್ರದಿಂದ ಗೆದ್ದು ಅತಿ ಹೆಚ್ಚು ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಅಪರೂಪದ ದಾಖಲೆ ಕೇವಲ ಎರಡು ಕ್ಷೇತ್ರಗಳ ನಡುವೆ ಹಂಚಿಹೋಗಿದೆ. ಆ ಕ್ಷೇತ್ರ ಯಾವುವು? ಆ ಕ್ಷೇತ್ರದಿಂದ ಗೆದ್ದವರು ಯಾರು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಮೊದಲ ಶಕ್ತಿ ಕೇಂದ್ರ; ರಾಮನಗರ !

ಒಂದೇ ಕ್ಷೇತ್ರದಿಂದ ಗೆದ್ದು ಮೂವರು ವಿಭಿನ್ನ ನಾಯಕರು ಮುಖ್ಯಮಂತ್ರಿಯಾದ ಏಕೈಕ ದಾಖಲೆ ರಾಮನಗರ ಕ್ಷೇತ್ರಕ್ಕಿದೆ. 1952ರಲ್ಲಿ ರಾಜ್ಯದ 2ನೇ ಮುಖ್ಯಮಂತ್ರಿಯಾಗಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ರಾಮನಗರದಿಂದ ಗೆದ್ದು ಸಿಎಂ ಆಗಿದ್ದರು. ಆ ನಂತರ 1994ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್‌.ಡಿ, ದೇವೆಗೌಡ ರಾಮನಗರದಿಂದ ಗೆದ್ದು ಮುಖ್ಯಮಂತ್ರಿಯಾದರು, ನಂತರ ದೇಶದ ಪ್ರಧಾನಿಯೂ ಆದರು. ಅದಾದ ನಂತರ 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ರಾಮನಗರ ಕ್ಷೇತ್ರದ ಶಾಸಕರಾಗಿದ್ದರು.

ಎರಡನೇ ಶಕ್ತಿ ಕೇಂದ್ರ: ಶಿಕಾರಿಪುರ!

ಒಂದೇ ಕ್ಷೇತ್ರದಿಂದ ಗೆದ್ದು ಅತಿ ಹೆಚ್ಚು ಬಾರಿ (4 ಬಾರಿ) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಾಖಲೆ ಶಿಕಾರಿಪುರ ಕ್ಷೇತ್ರದ ಹೆಸರಲ್ಲಿದೆ. ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿ.ಎಸ್. ಯಡಿಯೂರಪ್ಪ ಒಬ್ಬರೇ 2007, 2008, 2018 ಮತ್ತು 2019ರಲ್ಲಿ ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪಕ್ಕದ ಕ್ಷೇತ್ರದ ವಿಶೇಷ!

ರಾಮನಗರ ಜಿಲ್ಲೆಯದೇ ಆದ ಕನಕಪುರ ಕ್ಷೇತ್ರದಿಂದಲೂ ಇಬ್ಬರು ಪ್ರಭಾವಿ ನಾಯಕರು ಮುಖ್ಯಮಂತ್ರಿಯಾಗಿದ್ದಾರೆ. 1983ರಲ್ಲಿ ರಾಮಕೃಷ್ಣ ಹೆಗಡೆ ಉಪಚುನಾವಣೆಯಲ್ಲಿ ಗೆದ್ದು ಸಿಎಂ ಆಗಿದ್ದರು, ಹಾಗೂ 2026ರಲ್ಲಿ ಡಿ.ಕೆ. ಶಿವಕುಮಾರ್ ಕನಕಪುರ ಶಾಸಕರಾಗಿ ಸಿಎಂ ಪಟ್ಟಕ್ಕೇರಿದ್ದಾರೆ. ವ್ಯಕ್ತಿಗಳ ಲೆಕ್ಕಾಚಾರದಲ್ಲಿ (3 ಬೇರೆ ಬೇರೆ ಸಿಎಂಗಳು) ರಾಮನಗರ ನಂಬರ್ 1 ಆದರೆ, ಪ್ರಮಾಣವಚನ/ಅವಧಿಗಳ ಲೆಕ್ಕಾಚಾರದಲ್ಲಿ (4 ಬಾರಿ ಸಿಎಂ) ಶಿಕಾರಿಪುರ ಅಗ್ರಸ್ಥಾನದಲ್ಲಿದೆ. ಈ ಮೂಲಕ ಹಳೇ ಮೈಸೂರು ಭಾಗದ ರಾಮನಗರ ಮತ್ತು ಮಲೆನಾಡಿನ ಶಿಕಾರಿಪುರ ಕರ್ನಾಟಕ ರಾಜಕಾರಣದ ನಿಜವಾದ 'ಪವರ್ ಸೆಂಟರ್'ಗಳಾಗಿ ಗುರುತಿಸಿಕೊಂಡಿವೆ.