ಕಾರವಾರ (ಏ.01):  ಹೊಸನಗರದ ರಾಮಚಂದ್ರಾಪುರ ಮಠಕ್ಕೆ  10 ಕೋಟಿ ರು. ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದಲ್ಲಿ ತಮ್ಮ ವಿರುದ್ಧದ ಪ್ರಕರಣಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ರಾಜು ಅಡಿ (ರಾಜಗೋಪಾಲ ಅಡಿ) ಸೇರಿದಂತೆ ಐದು ಜನರು ಮಾಡಿದ್ದ ಮನವಿಯನ್ನು ಬೆಂಗಳೂರು ನಗರ ನ್ಯಾಯಾಲಯ ತಿರಸ್ಕರಿಸಿದೆ.

ಶ್ರೀಮಠದ ಧರ್ಮಚಕ್ರ ಟ್ರಸ್ಟ್‌ನಲ್ಲಿ ಅವ್ಯವಹಾರ ಆಗಿದೆ ಎಂದು ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇವೆ; ಅದು ವಿಚಾರಣೆಗೆ ಬರಲಿದ್ದು, ಮಠದ ಮರ್ಯಾದೆ ಹರಾಜು ಹಾಕುತ್ತೇವೆ ಎಂದು ಪ್ರಕರಣದ ಆರೋಪಿಗಳು ಶ್ರೀಮಠದ ಭಕ್ತರಿಗೆ ದೂರವಾಣಿ ಕರೆ ಮಾಡಿ, ಪಿಐಎಲ್‌ ವಾಪಾಸು ಪಡೆಯಬೇಕಿದ್ದರೆ   10 ಕೋಟಿ ರು. ನೀಡುವಂತೆ ಒತ್ತಾಯಿಸಿದ್ದರು. ಈ ಸಂಬಂಧ ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಂಗಳೂರಿನ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಗಿರಿನಗರ ಪೊಲೀಸರು ಕುಟುಕು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದರು. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ ಚಾಜ್‌ರ್‍ಶೀಟ್‌ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ಚಾಜ್‌ರ್‍ ಫ್ರೇಮಿಂಗ್‌ ಹಂತಕ್ಕೆ ಬಂದಿತ್ತು.

ಗೋಕರ್ಣ ಮಹಾಬಲೇಶ್ವರ ದೇಗುಲದ ಮೊಬೈಲ್‌ ಆ್ಯಪ್‌ ಲೋಕಾರ್ಪಣೆ .

ಈ ಮಧ್ಯೆ ಆರೋಪಿಗಳಾದ ರಾಜಗೋಪಾಲ ಅಡಿ, ಶೇಷಾನಂದ ವಿಶ್ವೇಶ್ವರ ಅಡಿ, ಗೋಪಾಲ ಸದಾಶಿವ ಗಾಯತ್ರಿ, ಅಮಿತ್‌ ನಾಡಕರ್ಣಿ ಮತ್ತು ಗಣಪತಿ ಗಜಾನನ ಹಿರೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಹೆಸರನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಕೋರಿದ್ದರು. ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮತ್ತು ಚಾಜ್‌ರ್‍ ಫ್ರೇಮಿಂಗ್‌ಗೆ ತಡೆ ನೀಡುವಂತೆ ಪ್ರಧಾನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಪರಾಮರ್ಶನಾ ಅರ್ಜಿ ಸಲ್ಲಿಸಲಾಗಿತ್ತು. (ಸಿಆರ್‌ಐ.ಆರ್‌.ಪಿ.607/2019). ಈ ಬಗ್ಗೆ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ, ಆರೋಪಿಗಳ ಅರ್ಜಿಯನ್ನು ವಜಾ ಮಾಡಿದೆ.

ಭಾರತದ ಅಪರಾಧ ದಂಡಸಂಹಿತೆಯ ಸೆಕ್ಷನ್‌ 239ರ ಅನ್ವಯ, ಆರೋಪಿಗಳ ವಿರುದ್ಧ ಮಾಡಿರುವ ಆರೋಪ ಆಧಾರರಹಿತ ಎಂದು ಮ್ಯಾಜಿಸ್ಪ್ರೇಟರಿಗೆ ಮನವರಿಕೆಯಾದಲ್ಲಿ ಮಾತ್ರ ಅವರನ್ನು ಪ್ರಕರಣದಿಂದ ಕೈಬಿಡಬಹುದಾಗಿದೆ. ಆರೋಪಿಗಳ ವಿರುದ್ಧ ಚಾಜ್‌ರ್‍ ಫ್ರೇಮ್‌ ಮಾಡಲು ಅಗತ್ಯವಾದ ಸಾಕಷ್ಟುಪುರಾವೆಗಳು ಇರುವುದನ್ನು ವಿಚಾರಣಾ ನ್ಯಾಯಾಲಯ ದೃಢಪಡಿಸಿದೆ ಎಂದು ಬೆಂಗಳೂರಿನ 64ನೇ ಹೆಚ್ಚುವರಿ ನಗರ ಸಿವಿಲ್‌ ಸೆಷನ್ಸ್‌ ನ್ಯಾಯಾಧೀಶ ರಾಜೇಶ್ವರ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.