ಬೆಂಗಳೂರು[ಡಿ.26] ಅಖಿಲ ಹವ್ಯಕ ಮಹಾಸಭೆಯ ಅಮೃತ ಮಹೋತ್ಸವ ಮತ್ತು  ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಸಮುದಾಯದ ಎಲ್ಲರೂ ಬನ್ನಿ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಆಹ್ವಾನ ನೀಡಿದ್ದಾರೆ.

ಟ್ವೀಟ್ ಮಾಡಿರುವ ಸ್ವಾಮೀಜಿ, ಸಮಸ್ತ ಹವ್ಯಕರೇ! ವಿಶ್ವ ಹವ್ಯಕ ಸಮ್ಮೇಳನಕ್ಕಾಗಿ ನಾಡಿದ್ದು ಅರಮನೆ ಮೈದಾನದಲ್ಲಿ ಸಾಗರೋಪಾದಿಯಲ್ಲಿ ಸೇರಬನ್ನಿ! ಸಂಸಾರದಲ್ಲಿಯೇ ಸರ್ವೋತ್ತಮವೆನಿಸಿದ, ನಮ್ಮ ಹೆಮ್ಮೆಯ ಹವ್ಯಕ ಸಂಸ್ಕೃತಿಯ ಸಾರವನ್ನು ಸರ್ವ ಜಗತ್ತಿಗೆ ಸಾರಬನ್ನಿ! ಸಮಾಜ-ಸಂಘಟನೆಯ ಮಹಾಶಕ್ತಿಯನ್ನು ವಿಶ್ವವೇ ವಿಸ್ಮಯಗೊಳ್ಳುವಂತೆ ತೋರಬನ್ನಿ! ಎಂದು ಕರೆ ನೀಡಿದ್ದಾರೆ.

ಅಮೃತ ಮಹೋತ್ಸವ ಸಂಭ್ರಮ, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ.. ಬನ್ನಿ ಅರಮನೆ ಮೈದಾನಕ್ಕೆ

ಅಮೃತ ಮಹೋತ್ಸವದ ಗುರುತಾಗಿ 75 ಪುಸ್ತಕಗಳ ಬಿಡುಗಡೆ ಹಾಗೂ 75 ಸಾಹಿತಿಗಳಿಗೆ ಸನ್ಮಾನ, 75 ಕೃಷಿಕರಿಗೆ ‘ಹವ್ಯಕ ಕೃಷಿರತ್ನ’ ಪ್ರಶಸ್ತಿ ಪ್ರದಾನ, 75 ಯೋಧರಿಗೆ ‘ಹವ್ಯಕ ದೇಶರತ್ನ’ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ‘ಹವ್ಯಕರು ಸಾಗಿ ಬಂದ ದಾರಿ’, ‘ಹವ್ಯಕರ ಇತಿಹಾಸ’ ಮೊದಲಾದ ವಿಷಯಗಳ ಕುರಿತು ಚರ್ಚಾ ಗೋಷ್ಠಿ ಏರ್ಪಡಿಸಲಾಗಿದೆ.