Asianet Suvarna News Asianet Suvarna News

Vijayapura: ಮೈನವಿರೇಳಿಸಿದ ಟಗರಿನ ಕಾಳಗ: ವೀಕ್ಷಣೆಗೆ ಅಪಾರ ಜನಸ್ತೋಮ

ಸೆಣಸಲೆಂದೆ ಸಜ್ಜುಗೊಂಡ ಬಲಿಷ್ಠ ಟಗರುಗಳ ರಭಸದ ಟಕ್ಕರ್‌ನಿಂದ ಹೊರಡುತ್ತಿದ್ದ ಶಬ್ಧ ನೆರೆದ ಅಪಾರ ಜನರಲ್ಲಿ ರೋಮಾಂಚನ ಮೂಡಿಸುವ ಮೂಲಕ ಕಾಳಗದ ಅಖಾಡ ರಣಕೇಕೆಯ ರಂಗು ಪಡೆದುಕೊಳ್ಳುತ್ತಿತ್ತು. ಜನರಿಗೆ ಬಾರಿ ಮನರಂಜನೆ ಸಿಕ್ಕಿತ್ತು. 

Ram Fighting Tagaru Kalaga at Vijayapura District gvd
Author
Bangalore, First Published Aug 20, 2022, 1:20 AM IST

ಬಸವರಾಜ ನಂದಿಹಾಳ

ಬಸವನಬಾಗೇವಾಡಿ (ಆ.20): ಸೆಣಸಲೆಂದೆ ಸಜ್ಜುಗೊಂಡ ಬಲಿಷ್ಠ ಟಗರುಗಳ ರಭಸದ ಟಕ್ಕರ್‌ನಿಂದ ಹೊರಡುತ್ತಿದ್ದ ಶಬ್ಧ ನೆರೆದ ಅಪಾರ ಜನರಲ್ಲಿ ರೋಮಾಂಚನ ಮೂಡಿಸುವ ಮೂಲಕ ಕಾಳಗದ ಅಖಾಡ ರಣಕೇಕೆಯ ರಂಗು ಪಡೆದುಕೊಳ್ಳುತ್ತಿತ್ತು. ಜನರಿಗೆ ಬಾರಿ ಮನರಂಜನೆ ಸಿಕ್ಕಿತ್ತು. ಟಗರಿನ ಕಾಳಗ ವೀಕ್ಷಿಸಲು ಶಾಲೆಯ ಮಾಳಿಗೆ ಮೇಲೆ, ಮರದ ಮೇಲೆ ಕುಳಿತು, ಸುತ್ತಲೂ ಅಪಾರ ಸಂಖ್ಯೆ ಜನರು. ಪಟ್ಟಣದ ಬಸವೇಶ್ವರ ದೇವಸ್ಥಾನದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಪಟ್ಟಣದ ಆರಾಧ್ಯದೈವ ಬಸವೇಶ್ವರ (ಮೂಲನಂದೀಶ್ವರ) ಜಾತ್ರಾಮಹೋತ್ಸವದಂಗವಾಗಿ ಗುರುವಾರ ಜರುಗಿದ ರಾಜ್ಯಮಟ್ಟದ ಟಗರಿನ ಕಾಳಗದಲ್ಲಿ ಕಂಡುಬಂದ ದೃಶ್ಯ. 

ನಾಲ್ಕು ಹಲ್ಲು, ಎಂಟು ಹಲ್ಲು ಹೀಗೆ ಟಗರುಗಳನ್ನು ವಿಂಗಡಿಸಿ ನಡೆದ ಈ ಸ್ಪರ್ಧೆಯಲ್ಲಿ ಟಗರುಗಳ ಸೆಣಸಾಟ ನೆರೆದಿದ್ದವರಲ್ಲಿ ರೋಮಾಂಚನ ಸೃಷ್ಟಿಸಿತು. 8 ಹಲ್ಲಿನ ಬಹು ಬಲಿಷ್ಠ ಟಗರುಗಳ ಪರಸ್ಪರ ಟಕ್ಕರ್‌ ವಿಚಿತ್ರ ಶಬ್ಧ ಹೊಮ್ಮಿಸುತ್ತಿತ್ತು. ನೆರೆದ ಜನ ಹೌದು ಹುಲಿಯಾ, ಜೈ ಭಾರತ ಮಾತಾ ಕೀ ಜಯ ಸೇರಿದಂತೆ ವಿವಿಧ ಘೋಷಣೆಗಳನ್ನು ಹಾಕುತ್ತಿದ್ದರು. ಸ್ಪರ್ಧೆಗೆ ಬಿಡುತ್ತಿದ್ದಂತೆ ಕಾಲು ಕೆರೆದು ವೇಗವಾಗಿ ಓಡಿಬಂದು ಎದುರಿನ ಟಗರುಗಳಿಗೆ ಗುದ್ದಿ ಮೊದಲ ಟಕ್ಕರಿನಲ್ಲೆಯ ಪ್ರತಿಸ್ಪರ್ಧಿಯ ಶಕ್ತಿ ಸಾಮರ್ಥ್ಯ ಅಳೆಯುವಂತೆ ಭಾಸವಾಗುತ್ತಿತ್ತು. ನಂತರದ ಟಕ್ಕರ್‌ಗೆ ಬಲಿಷ್ಠ ಟಗರು ಹೂಂಕರಿಸುತ್ತಿದ್ದರೆ, ಕಡಿಮೆ ಶಕ್ತಿಯ ಟಗರು ಹಿಂಜರಿಯುತ್ತಿತ್ತು. 

ಜಿಲ್ಲಾಧಿಕಾರಿಗಳ ನಿರ್ದೇಶನ: ಆಗಸ್ಟ್‌ 22ರಂದು ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ

ಹೀಗೆ ನಾಲ್ಕೈದು ಗುದ್ದಾಟಗಳಲ್ಲಿ ವಿಜಯದ ಟಗರು ಯಾವುದೆಂಬವದು ಘೋಷಣೆಯಾಗುತ್ತಿತ್ತು. ಕೆಲವಷ್ಟುಟಗರುಗಳು ಮೊದಲ ಟಕ್ಕರ್‌ ನಂತರ ಮತ್ತೊಂದು ಗುದ್ದಿಗೆ ಹಿಂಜರಿದು ಅಖಾಡದಿಂದ ಕಾಲ್ಕಿಳುತ್ತಿದ್ದವು. ಕನಕಶ್ರೀ, ಕರಿಸಿದ್ದೇಶ್ವರ, ದುರ್ಗಾದೇವಿ,ಎಂಜಿ ಗ್ರುಪ್‌, ಜಮಖಂಡಿರಾಜಾ, ಯಮನೂರಪೀರ,ಲವ್‌ಲಿ ಬಾಯ್‌್ಸ, ಎಸ್‌ಆರ್‌ ಕಿಂಗ್‌ ಹೈದರ್‌ಅಲಿ,ರಾಯಣ್ಣ ಎಕ್ಸಪ್ರೆಸ್‌, ಕೇಸಾಪೂರ ಗಿಡ್ಡ ಹೀಗೆ ಭಿನ್ನ-ಭಿನ್ನ ಹೆಸರುಗಳ ಟಗರುಗಳಿಗೆ ಇಡಲಾಗಿತ್ತು. ತಾಲೂಕು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಟಗರುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಖದ್‌ ಪ್ರದರ್ಶಿಸಿದವು. ಮೊದಲು ನಾಲ್ಕು ಹಲ್ಲಿನ ಟಗರುಗಳ ಸ್ಪರ್ಧೆ ನಡೆಯಿತು. 

ಸ್ಪರ್ಧೆಗಾಗಿ ತಯಾರು ಮಾಡಿದ ಟಗರು ಗೆದ್ದಾಗ ಆಗುವ ಖುಷಿ ಅಷ್ಟಿಷ್ಟಲ್ಲ ಎಂದು ಸ್ಪರ್ಧೆಯಲ್ಲಿ ವಿಜೇತ ಬಾಗಲಕೋಟ ಜಿಲ್ಲೆ ಬೆನಕಟ್ಟಿಯ ಟಗರಿನ ಮಾಲೀಕ ತಮ್ಮ ಟಗರಿನ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಸೆಣಸಾಟಕ್ಕೆ ವಿಶೇಷವಾಗಿ ತರಬೇತಿಯನ್ನೇನು ನೀಡುವುದಿಲ್ಲ. ಕೆಲವು ಟಗರುಗಳಿಗೆ ಈ ಕಲೆ ದೈವದತ್ತವಾಗಿ ಬಂದಿರುತ್ತದೆ. ಅಂಥವನ್ನು ಗುರುತಿಸಿ ಹುರುಳಿ, ಮೊಟ್ಟೆ, ಹಾಲು ಮುಂತಾದ ಪೌಷ್ಠಿಕ ಆಹಾರ ನೀಡಿ ಶಕ್ತಿ ವರ್ದಿಸಲಾಗುತ್ತದೆ. ಟಗರು ಕಾಳಗದಲ್ಲಿ ಶಕ್ತಿಯೇ ನಿರ್ಣಾಯಕ ಎಂದು ಒರ್ವ ಟಗರಿನ ಮಾಲೀಕ ಹೇಳಿದರು. 

ಕಳೆದ ಎರಡು ವರ್ಷದಿಂದ ಕೊರೋನಾ ಮಹಾಮಾರಿಯ ಹಾವಳಿಯಿಂದ ಜನರಿಗೆ ಯಾವುದೇ ಹಬ್ಬವನ್ನು ಸರಿಯಾಗಿ ಆಚರಣೆ ಮಾಡಲು ಆಗಿರಲಿಲ್ಲ. ಸರ್ಕಾರದ ನಿಯಮಗಳಿಂದ ಕಂಗೆಟ್ಟಿದ್ದ ಜನರಿಗೆ ಇದೀಗ ಹಬ್ಬ-ಹರಿದಿನಗಳು ತುಸು ನೆಮ್ಮದಿ ತಂದಿದೆ. ಈ ಸಲದ ಜಾತ್ರಾಮಹೋತ್ಸವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಜೊತೆಗೆ ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಟಗರಿನ ಕಾಳಗದ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.ಟಗರಿನ ಕಾಳಗವನ್ನು ವೀಕ್ಷಿಸಲು ಅಪಾರ ಜನರು ಆಗಮಿಸಿರುವುದು ನೋಡಿದರೆ ಇದೊಂದು ಮೈನವಿರೇಳಿಸುವ ಸ್ಪರ್ಧೆಯಾಗಿದೆ ಎಂದು ಗೊತ್ತಾಗುತ್ತದೆ ಎಂದು ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿಹೇಳಿದರು.

ನಾಲ್ಕು ಹಲ್ಲಿನ ಟಗರಿನ ಕಾಳಗದಲ್ಲಿ ಬೆನಕಟ್ಟಿಯ ಕನಕಶ್ರೀ ಗೆಳೆಯರ ಬಳಗ 10 ಸಾವಿರ ರೂ.ನಗದು(ಪ್ರಥಮ), ಮನಗೂಳಿಯ ಎಂಜಿ ಗ್ರೂಫ್‌ 7 ಸಾವಿರ ರೂ.ನಗದು (ದ್ವಿತೀಯ)ಬನ್ಮದಬುನ್ನಿಯ ಕರೆಮ್ಮದೇವಿ ಪ್ರಸನ್‌್ನ 5 ಸಾವಿರ ರೂ. ನಗದು(ತೃತೀಯ) ಬಹುಮಾನ ಪಡೆದುಕೊಂಡವು. ಎಂಟು ಹಲ್ಲಿನ ಟಗರಿನ ಕಾಳಗದಲ್ಲಿ ಬಸವನಬಾಗೇವಾಡಿಯ ಲವ್‌ಲಿ ಬಾಯ್‌ ಬಿ 41 ಸಾವಿರ ರೂ.ನಗದು(ಪ್ರಥಮ) ಕೇಸಾಪೂರಗಿಡ್ಡ ಬಿ 21 ಸಾವಿರ ರೂ.ನಗದು (ದ್ವಿತೀಯ), ಬಸವನಬಾಗೇವಾಡಿಯ ಲವ್‌ಲೀ ಬಾಯ್‌ ಎ 11 ಸಾವಿರ ರೂ ನಗದು (ತೃತೀಯ) ಬಹುಮಾನ ಪಡೆದುಕೊಂಡವು. ನಿರ್ಣಾಯಕರಾಗಿ ಬಂಗಾರೇಶ ಪೂಜಾರಿ, ಪರಶುರಾಮ ಬೇನಾಳ ಕಾರ್ಯನಿರ್ವಹಿಸಿದರು. ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ,ಸಂಗಮೇಶ ಓಲೇಕಾರ, ಬಸವರಾಜ ಕೋಟಿ ನಿರೂಪಿಸಿದರು. 

ಭೀಮಾತೀರದಲ್ಲಿ ಆತಂಕ ಸೃಷ್ಟಿಸಿದ ಆಯಿಲ್‌ ಗ್ಯಾಂಗ್: ಉದ್ಯಮಿ, ವ್ಯಾಪಾರಿಗಳೇ ಇವರ ಟಾರ್ಗೆಟ್!

ಟಗರಿನ ಕಾಳಗಕ್ಕೆ ಸಿದ್ದಲಿಂಗಶ್ರೀ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಈರಕಾರಮುತ್ಯಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಗಣ್ಣ ಕಲ್ಲೂರ, ಎಂ.ಜಿ.ಆದಿಗೊಂಡ, ಶಂಕರಗೌಡ ಬಿರಾದಾರ, ಎಚ್‌.ಎಸ್‌.ಗೊಳಸಂಗಿ, ರವಿಗೌಡ ಚಿಕ್ಕೊಂಡ, ಶೇಖರ ಗೊಳಸಂಗಿ, ಭರತು ಅಗರವಾಲ, ನಿಂಗಪ್ಪ ಅವಟಿ, ಮೀರಾಸಾಬ ಕೊರಬು, ಜಟ್ಟಿಂಗರಾಯ ಮಾಲಗಾರ, ಪರಶುರಾಮ ಜಮಖಂಡಿ, ಗೋಪಾಲ ಅಗರವಾಲ, ಬಸವರಾಜ ಅಳ್ಳಗಿ, ಮುರಿಗೆಪ್ಪ ಚಿಂಚೋಳಿ,ಮಹಾಂತೇಶ ಹಂಜಗಿ, ಯಮನೂರಿ ಬಿದರಕುಂದಿ, ಸುಭಾಸ ಚಿಕ್ಕೊಂಡ, ಸಂಗಯ್ಯ ಕಾಳಹಸ್ತೇಶ್ವರಮಠ, ಸಂಗಮೇಶ ವಾಡೇದ, ಸುನೀಲ ಚಿಕ್ಕೊಂಡ, ಶಿವರಾಜ ಜಂಗಿ, ಗಂಗಾಧರ ಆರೇರ, ಸಿದ್ರಾಮ ಪಾತ್ರೋಟಿ, ವಿಶ್ವನಾಥ ನಿಡಗುಂದಿ ಇತರರು ಇದ್ದರು.

Follow Us:
Download App:
  • android
  • ios