Asianet Suvarna News Asianet Suvarna News

Karnataka Rajyotsava : ಈ ಬಾರಿ ಕಾರವಾರಕ್ಕೆರಡು ರಾಜ್ಯೋತ್ಸವ ಪ್ರಶಸ್ತಿ!

ಕಣಿಯಾ ಹೇಳಲು ಬಂದೆ ಕೊರವಂಜಿ ನಾನವ್ವ ... ಎನ್ನುತ್ತಾ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ಹೊಸ ಅಲೆ ಸೃಷ್ಟಿಸಿ ಭಾಗವತಿಕೆಯ ಎಲ್ಲ ಆಯಾಮಗಳನ್ನು ತೆರೆದಿಟ್ಟಬಡಗು ತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಅರ್ಹತೆಗೆ ತಕ್ಕಂತೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

Rajyotsava Award won Subrahmanya Dhareshwar and Sahadevappa UK rav
Author
First Published Oct 31, 2022, 10:27 AM IST

ಕಾರವಾರ (ಅ.31) : ಕಣಿಯಾ ಹೇಳಲು ಬಂದೆ ಕೊರವಂಜಿ ನಾನವ್ವ ... ಎನ್ನುತ್ತಾ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ಹೊಸ ಅಲೆ ಸೃಷ್ಟಿಸಿ ಭಾಗವತಿಕೆಯ ಎಲ್ಲ ಆಯಾಮಗಳನ್ನು ತೆರೆದಿಟ್ಟಬಡಗು ತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಅರ್ಹತೆಗೆ ತಕ್ಕಂತೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

67 ಸಾಧಕರು, 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ: ಮೊದಲ ಬಾರಿಗೆ ದೈವನರ್ತಕರಿಗೂ ಒಲಿದ ಪ್ರಶಸ್ತಿ

ದಿ. ಉಪ್ಪೂರು ನಾರಣಪ್ಪ ಭಾಗವತರ ಶಿಷ್ಯರಾಗಿ ದಿ. ಕಾಳಿಂಗ ನಾವಡ ಅವರ ಅಬ್ಬರದ ಕಾಲದಲ್ಲೂ ಸರಿಸಾಟಿಯಾಗಿ ಬೆಳೆದ ಧಾರೇಶ್ವರರ ತಾಳಕ್ಕೆ ಕುಣಿಯದ ಕಲಾವಿದರಿಲ್ಲ. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೃಷ್ಣ ಯಾಜಿ ಬಳ್ಕೂರ, ಕೊಂಡದಕುಳಿ ರಾಮಚಂದ್ರ ಹೆಗಡೆ ಹೀಗೆ ಬಹುತೇಕ ಎಲ್ಲ ಕಲಾವಿದರಿಗೂ ಭಾಗವತಿಕೆ ಮಾಡಿದ್ದಾರೆ.

ಗೋಕರ್ಣದ ಸುಬ್ರಹ್ಮಣ್ಯ ಧಾರೇಶ್ವರ ಅಮೃತೇಶ್ವರಿ ಮೇಳಕ್ಕೆ ಎಲೆಕ್ಟ್ರಿಷಿಯನ್‌ ಆಗಿ ಸೇರಿದ ಆನಂತರ ಪ್ರಸಿದ್ಧ ಭಾಗವತರಾಗಿ ಬೆಳೆದಿದ್ದೇ ಒಂದು ರೋಚಕ ಅಧ್ಯಾಯ. ಸತತ 25 ವರ್ಷಗಳ ಕಾಲ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ, ಅಮೃತೇಶ್ವರಿ ಮೇಳದ ಭಾಗವತರಾಗಿ ಹೀಗೆ ಸುಮಾರು ನಾಲ್ಕು ದಶಕಗಳ ಕಾಲ ದಣಿವರಿಯದೇ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಪ್ರೇಕ್ಷಕರ ಅಚ್ಚುಮೆಚ್ಚಿನ ಭಾಗವತರಾಗಿ ಮುಂದುವರಿದಿದ್ದಾರೆ.

ಪೌರಾಣಿಕ ಪ್ರಸಂಗಗಳೊಟ್ಟಿಗೆ ಹೊಸ ಪ್ರಸಂಗಗಳ ಪ್ರಯೋಗವನ್ನೂ ಯಶಸ್ವಿಯಾಗಿ ಪ್ರಯೋಗಿಸಿದವರು ಧಾರೇಶ್ವರ. ಯಕ್ಷಗಾನದ ಚೌಕಟ್ಟಿನೊಳಗೆ ಹೊಸ ಹೊಸ ಪ್ರಯೋಗಗಳ ಮೂಲಕ ಸೈ ಎನಿಸಿಕೊಂಡು ಪ್ರಸಿದ್ಧರಾದವರು ಸುಬ್ರಹ್ಮಣ್ಯ ಧಾರೇಶ್ವರ.

ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಕಲಾವಿದರು, ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅರ್ಹತೆಗೆ ತಕ್ಕಂತೆ ಪ್ರಶಸ್ತಿ ಲಭಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಹಜವಾಗಿ ಖುಷಿಯಾಗಿದೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಕಲಾವಿದರು, ಅಭಿಮಾನಿಗಳ ಅಭಿನಂದನೆಗಳೇ ಹರಿದುಬರುತ್ತಿವೆ.

ಸುಬ್ರಹ್ಮಣ್ಯ ಧಾರೇಶ್ವರ, ಯಕ್ಷಗಾನದ ಪ್ರಸಿದ್ಧ ಭಾಗವತ

ಜಾನಪದ ಕಲಾವಿದ ಸಹದೇವಪ್ಪ ನಡಗೇರಿಗೆ ರಾಜ್ಯೋತ್ಸವ ಪ್ರಶಸ್ತಿ

ಜಾನಪದ ಕ್ಷೇತ್ರದಲ್ಲಿ ತಾಲೂಕಿನ ಇಂದೂರ ಗ್ರಾಮದ ಸಹದೇವಪ್ಪ ಈರಪ್ಪ ನಡಗೇರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. 46 ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ಅಹರ್ನಿಶಿಯಾಗಿ ದುಡಿದ ಸಾಧಕಗೆ ಪ್ರಶಸ್ತಿ ಬಂದಿರುವುದು ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದಂತಾಗಿದೆ. 1957ರ ಮೇ 22ರಂದು ತಾಲೂಕಿನ ಇಂದೂರ ಗ್ರಾಮದ ಕರೆವ್ವ ಹಾಗೂ ಈರಪ್ಪ ಅವರ ಪುತ್ರರಾಗಿ ಜನಿಸಿದ ಇವರು, 1974ರಿಂದ ಯುವಜನ ಮೇಳ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

ಭಾವಗೀತೆ, ಭಕ್ತಿಗೀತೆ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತ ಜನಪದ ಕಲೆಯಿಂದ ಮನೆ ಮಾತಾಗಿದ್ದಾರೆ. 2019-20ನೇ ಸಾಲಿನಲ್ಲಿ ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಈ ವರೆಗೂ 100ಕ್ಕೂ ಅಧಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಹೆಗ್ಗಳಿಕೆ ಇವರದ್ದು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ಜಿಲ್ಲಾ ಸಾಹಿತ್ಯ ಸಮ್ಮೇಳನ, ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಹಾಲಿ ಮುಂಡಗೋಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಜನಪದ ಗೀತೆ, ಭಾವಗೀತೆ, ಗೀಗಿ ಪದ, ಲಾವಣಿ ಪದಗಳನ್ನು ಹಾಡುವುದು, ಪುಸ್ತಕ ಓದುವ ಹವ್ಯಾಸ ಹೊಂದಿದ್ದಾರೆ. ತಾಪಂ ಸದಸ್ಯ, ಗ್ರಾಪಂ, ವಿವಿಧ ಸಂಘ ಸಂಸ್ಥೆಗಳಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿರುವುದು ಸೇರಿದಂತೆ ಸಾಮಾಜಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿದ್ದಾರೆ.

67th Karnataka Rajyotsava: 67 ಸಾಧಕರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಶಿಶುನಾಳ ಶರೀಫರ ದೇವಾಲಯ ಟ್ರಸ್ಟ್‌ ರಚಿಸಿದ್ದು, ಪ್ರತಿವರ್ಷ ಜಾತ್ರೆ ನಡೆಸುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸುವ ಜವಾಬ್ದಾರಿ ಹೊತ್ತಿದ್ದಾರೆ. ಬಡವರಿಗಾಗಿ ಉಚಿತ ಸಾಮೂಹಿಕ ವಿವಾಹ ನೆರವೇರಿಸುತ್ತಾ ಬಂದಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಮುಂಡಗೋಡ ತಾಲೂಕಿನ ಜನರಲ್ಲಿ ಹರ್ಷವನ್ನುಮಟು ಮಾಡಿದೆ.

Follow Us:
Download App:
  • android
  • ios